Audio by Smt.Nandini Sripad
ಶ್ರೀವಿಜಯದಾಸಾರ್ಯ ವಿರಚಿತ ಏಕೋ ವಿಷ್ಣುಃ ಮಹರ್ಭೂತ ಮಂತ್ರ ಸುಳಾದಿ
ರಾಗ ಭೂಪಾಳಿ
ಧ್ರುವತಾಳ
ಭೂತ ಸೋಕಿತು ಕಾಣೊ ಯಾತರ ವರ್ನಾವೊ
ಮಾತು ಲಾಲಿಸೆ ವಿಪರೀತವೆನಿಸುತಿದೆ
ಜಾತಿ ಮತ್ತಾವದೊ ಜಾತಿವೆಂಬೊದೆ ಇಲ್ಲಾ
ಗಾತುರ ನೋಡಿದರೆ ಭೀತಿ ನಿರ್ಭೀತಿ ಬಪ್ಪದು
ಶಾತಕುಂಭದವನ ಜಾತ ಭವಾಂಡದ ಸ -
ಪೂತಾವರಣ ಅವ್ಯಾಕೃತ ಗಗನ ಸಮೇತ ತೊಲಗದೆ
ವ್ಯಾಪುತವಾಗಿವೆ ಇದರ ಭೀತಿಗೆ ಬೊಮ್ಮಾದ್ಯರು
ಧಾತು ಕೆಡುತಲಿರೆ ಭೂತಳದೊಳಗುಳ್ಳ
ರಾತಿ ಆರಾತಿಗಳಿಗೆ ದ್ವೈತ ಅದ್ವೈತವೆಂದು
ತಾ ತಿಳುಪೀರ್ವಾದರೊಳು ಪಾತಕಗೊಬ್ಬನ ಮು -
ಕುತಿಗೆ ಒಬ್ಬನ ಈ ರೀತಿಯಲ್ಲಿ ಕಳುಹಿ
ಪ್ರೀತನೆನಿಸುವದು ಚೇತನ ಅಚೇತನ
ವ್ರಾತದೊಳಗೆ ಮಹದ್ಭೂತವಾಗಿಪ್ಪ ವಿಖ್ಯಾತ ಭೂತ ಕಾಣೋ
ಜ್ಯೋತಿ ಸ್ವರೂಪ ನಮ್ಮ ವಿಜಯವಿಟ್ಠಲ ಸರ್ವ
ಭೂತರ ಮಧ್ಯದಲ್ಲಿ ಭೂತಿ ಉಳ್ಳದ್ದು ಎನ್ನು ॥ 1 ॥
ಮಟ್ಟತಾಳ
ಶಿರ ನಯನ ಕರ್ನ ವರ ನಾಶಿಕ ವದನ
ಕರ ತೋಳು ಭುಜ ಕಂಠ, ಉರ ಉದರ ನಾಭಿ
ಶಿರಸ ಕಟಿ ಊರು ಮೆರೆವ ಜಾನು ಜಂಘೆ
ಚರಣ ಬೆರಳುಗಳು ಮಿರಗುವಾಭರಣ ಸ -
ದ್ಭರಿತ ಜ್ಞಾನಾನಂದ ಸುಂದರ ಶಾಮವರ್ನಾ
ಪರಿಪೂರ್ಣ ಮಹಿಮ ಪರಕೆ ಪರಾತ್ಪರ
ಸರಿ ಸರಿ ಬಂದಂತೆ ನಿರೀಕ್ಷಿಸಲು ಇದರ
ಕುರುಹು ಕಂಡವರಾರು ಪರೋಕ್ಷದಲ್ಲಿ ಕೇಳಿ -
ದರೆ ಮನಕೆ ದೂರ ಅಪರೋಕ್ಷದಲ್ಲಿ ಸ್ತುತಿಸಿ -
ದರೆ ಧ್ಯಾನಕ್ಕೆ ದೂರ
ಪರಿ ಪರಿ ನೋಡಿದರೆ ಪರಿಮಿತವಾದ ಸು -
ಚ್ಚರಿತ ನಿರ್ಮಳ ಕಾಯ ಪರಿಪರಿಯಲ್ಲಿವೆ
ಸುರರ ಮಸ್ತಕ ಮಣಿ ವಿಜಯವಿಟ್ಠಲ ನೆಂಬೊ
ಗರುವ ಭೂತಕೆ ಎಲ್ಲಿ ಸರಿಗಾಣೆ ಜಗದೊಳು ॥ 2 ॥
ತ್ರಿವಿಡಿತಾಳ
ಏಕೋ ವಿಷ್ಣು ಮಹದ್ಭೂತನೆಂಬೊ ಭೂತಾ
ಸೋಕಿದ ಮನುಜನ ಭಾಗ್ಯಕ್ಕೆ ಕಡಿಯಿಲ್ಲಾ
ಲೋಕದೊಳಗುಳ್ಳ ಭೂತ ಪ್ರೇತದ ಗಂಡಾ
ತಾಕಲಾರದಿದು ತಾಕಿದರೇ ಬಿಡದು
ಆಕಾರ ನೋಡಿದರೆ ಆರಿಗೆ ವಶವಲ್ಲಾ
ಆಕಾಶಕೆ ನೂರ್ಮಡಿ ಒಂದೇ ಎನಿಸುತಿದೆ
ನಾಕಾದಿ ಜನರಿಗೆ ಮೀರಿದ ಭೂತಾ ಅ -
ನೇಕ ಕೈಕಾಲು ಕಿವಿ ವದನಗಳಿಪ್ಪದು
ಲೌಕಿಕದಲಿ ನೋಡೆ ಲಕ್ಷಣೊಂದೂ ಪರಿ
ನಾ ಕಾಣೆ ನಾ ಕಾಣೆ ಭೂತದುಚ್ಚಾರಣೆ
ಕಾಕುಲಾತಿ ಇದಕೆ ಎಳ್ಳಿನಿತು ಇಲ್ಲಾ
ತಾ ಕೊಡುವದು ಹೊಡಿಸಿಕೊಂಡವಗೆ ಪುರುಷಾರ್ಥ
ಪ್ರಾಕೃತದೊಳಗಿದ್ದದಲಿ ಈ ಭೂತ ಬೇರೆ
ಶೋಕ ಕಳೆವದು ಸಾರಿದವರಿಗೆ ಪುಣ್ಯ -
ಶ್ಲೋಕ ಭೂತ ವಿಜಯವಿಟ್ಠಲ ಇಂದೆ
ಏಕಾರಣವಾದರೂ ಸಾಕದು ಬಿಡದು ॥ 3 ॥
ಅಟ್ಟತಾಳ
ಮಂತ್ರಕೆ ಹಣಿಯದು (ಯಂ)ತಂತ್ರಕ್ಕೆ ಹಣಿಯದು
ಎಂಥೆಂಥ ದಿಗ್ಬಂಧ ಅಂತಂತೆ ಮಾಳ್ಪುದು
ಪಂಥವಾಡಿದವರ ತಂತುಗೆಡಿಸುವದು
ಸಂತತ ಸಂತರ ಅಂತರಂಗದೊಳಿದ್ದು
ಚಿಂತಿಗೆ ಯಿಕ್ಕಿ ಏಕಾಂತಕ್ಕೆ ಎಳೆವದು
ಭ್ರಾಂತಿಯಗೊಳಿಸಿ(ಬಿಡಿಸಿ) ನಿಶ್ಚಿಂತನ ಮಾಡೋದು
ದಾಂತ ಭೂತವಿದು ಶಾಂತ ಭೂತವಿದು
ಅಂತಕನಾಳಿಗೆ ಅಂತಕನಾಗಿದೆ
ಪಿಂತೆ ಮುಂತೆ ಸರ್ವತಂತು ಬಲ್ಲದು ಕಾಣೊ
ಹೊಂತಕಾರಿ ಇದರಂತದ ಸಂದೀಲಿ
ನಿಂತೀಗ ಮುಕುತಿವಂತರು ಬೊಮ್ಮಾಂಡ
ಅಂತಗಾಣರು ತಾವೆಂತು ಎಣಿಸಲು
ಎಂಥ ಭೂತವಿದು ಜಂತುಗಳಿಗೆ ಒಂದು
ತಂತಿಯನ್ನೆ ಹೂಡಿ ಗ್ರಂಥಿಯ ಬಿಗಿದು ಆ -
ದ್ಯಂತ ಕಾಲದಲ್ಲಿ ಸಂತಿಗೆ ಬಂದವರಂತೆ ಕೂಡಲಿಟ್ಟು
ತಂತಿಯ ಬಿಗಿದಾಡಿದಂತೆ ಕಲ್ಪಿಪ ಮಾಯಾ -
ವಂತದ ಬಲ ಬಲವಂತ ಮಹಾಭೂತ
ನಿಂತಲ್ಲಿ ನಿಲ್ಲದು ಚಿಂತಿಗೆ ಸಿಗದು
ಪಂಥಗಾರರಸ ವಿಜಯವಿಟ್ಠಲ ಭೂತ
ಚಿಂತಾಮಣಿಯೋ ನೆನೆವರ ಅಂತರಂಗದಲ್ಲಿ ॥ 4 ॥
ಆದಿತಾಳ
ಹೊಡಿಯೆ ಈ ಭೂತಾ ಬಿಡದು ಎಂದೆಂದಿಗೆ
ಕೆಡಹಲಾಹದು ಭವದ ಮಡುವಿನೊಳು ನಮ್ಮನ್ನು
ಒಡನೆ ತಿರುಗುವದು ಒಡಲಿಗೆ ಬೇಡದು
ತಡಿಯದೆ ನಾಮಾಮೃತ ಕುಡಿಸುವದೊಲಿದು
ಅಡಿ ಒಂದು ತೊಲಗದೆ ಹಿಡಕೊಂಡು ಇಪ್ಪದು
ಎಡೆಗೆಡಿಪ ಭೂತಕ್ಕೆ ಘುಡಿ ಘುಡಿಸಿ ಹುಂಕರಿಪುದು
ತೊಡೆ ಕಾಲು ಮತ್ತೊಂದರ ತೊಡಕಗೊಡದೆ ಬೆನ್ನು
ಬಿಡದೆ ತನ್ನ ಮನಿಯ ವಡಿವೆಯೆಂದು ಕಾಯುವುದು
ನಡೆ ನುಡಿ ತಪ್ಪಿದರು ಬಿಡಿಬೀಸಿ ಬಿಸಾಟದೆ
ಕೊಡುವುದು ಅಭಯದವರೊಡೆ ಪೋಗಲೀಸಾದು
ಕಡು ದಯಾನಿಧಿ ಭೂತ ಪೊಡವಿಯೊಳಿದು ಕಾಣೊ
ಉಡಲುಂಟು ಉಣಲುಂಟು ಇಡಲುಂಟು ತೊಡಲುಂಟು
ಬಿಡದಿರಿ ಬಿಡದಿರಿ ಕೆಡದಿರಿ ಕೆಡದಿರಿ
ಸಡಲಿದ ಮ್ಯಾಲದರ ಪಿಡಿಯಲೊಶವಲ್ಲ
ದೃಢಮನವ ಮಾಡಿ ಸಂಗಡಲೆ ಕೈವಲ್ಯವ
ಕೊಡುವದು ತಡೆಯದಲೆ ಮೃಡಾದಿಗಳಿಗೆ
ಬಡವ ಬಲ್ಲಿದನೆನದೆ ಕಡೆ ಮಾಡುವದು ಒಮ್ಮೆ
ನುಡಿದರೆ ವೇಗದಿಂದ ಒಡಲೊಳಗೆ ಪೊಂದಿ
ಕಡಲಶಯನ ನಮ್ಮ ವಿಜಯವಿಟ್ಠಲ ಭೂತ
ಬಡಿಯದಿದ್ದರೆ ದುಃಖ ಬಡಬೇಕು ನಿತ್ಯದಲ್ಲಿ ॥ 5 ॥
ಜತೆ
ಭೂತ ಸೋಕಿದವಗೆ ದೂಷಣ ಭೂಷಣವೇನು
ವಾತವಂದಿತ ವಿಜಯವಿಟ್ಠಲ ಬಲ್ಲದ್ದೇ ಸರಿ ॥
*****