Showing posts with label ಗೆಲ್ಲೋದರಲ್ಲಿ ನಿನಗೆಲ್ಲಿ vijaya vittala ankita suladi ಕುಂಭಕೋಣ ಸುಳಾದಿ GELLODARALLI NINAGELLI KUMBHAKONA MAHIME SULADI. Show all posts
Showing posts with label ಗೆಲ್ಲೋದರಲ್ಲಿ ನಿನಗೆಲ್ಲಿ vijaya vittala ankita suladi ಕುಂಭಕೋಣ ಸುಳಾದಿ GELLODARALLI NINAGELLI KUMBHAKONA MAHIME SULADI. Show all posts

Monday 18 January 2021

ಗೆಲ್ಲೋದರಲ್ಲಿ ನಿನಗೆಲ್ಲಿ vijaya vittala ankita suladi ಕುಂಭಕೋಣ ಸುಳಾದಿ GELLODARALLI NINAGELLI KUMBHAKONA MAHIME SULADI

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ  ಕುಂಭಕೋಣೆ ಮಹಿಮೆ ಸುಳಾದಿ 

 ರಾಗ : ಪೂರ್ವಿಕಲ್ಯಾಣಿ 

 ಧ್ರುವತಾಳ 


ಗೆಲ್ಲೋದರಲ್ಲಿ ನಿನಗೆಲ್ಲಿ ಎದುರು ಇಲ್ಲ

ಕೊಲ್ಲೋದರಲ್ಲಿ ನೀನಲ್ಲಾದೆ ಒಬ್ಬರಿಲ್ಲ 

ಬಲ್ಲಿದಾರೊಳಗೆ ನೀನಲ್ಲಾದೆ ಒಬ್ಬರಿಲ್ಲ 

ಎಲ್ಲಾ ಭಕ್ತರೊಳು ನೀನಲ್ಲಾದಿನ್ನಾರಿಲ್ಲ 

ಬಲ್ಲೂರಾ ದೈವವೆ ಬಿಲ್ಲು ಕರದಲ್ಲಿ ಪಿಡಿದು 

ಇಲ್ಲಿ ಪವಳಿಸಿಪ್ಪ ಉಲ್ಲಾಸವೇನಯ್ಯಾ 

ಮಲ್ಲರಾ ಎದೆದಲ್ಲಾಣ ವಿಜಯವಿಠಲ ಶಾರಂಗಪಾಣಿ 

ಬಲ್ಲಗಾರರಸೆ ಎಲ್ಲೆ ವೈಕುಂಠ ನಿನ್ನಗೆಲ್ಲೆ ಈ ಪರವೊ ॥೧॥


 ಮಟ್ಟತಾಳ 


ಹೇಮಗಿರಿಯಂಥ ಹೇಮ ವಿಮಾನದೊಳು ಹೇಮಪುಟವಾಗಿ 

ಹೇಮಮಯದ ಮಕುಟಾ ಹೇಮಕುಂಡಲ ಕರ್ನಾ

ಹೇಮಹಾರ ಕೊರಳಾ ಹೇಮಕಟಿಸೂತ್ರಾ 

ಹೇಮಾಂಬರ ಚಿತ್ರ ಹೇಮನೂಪುರ ಗೆಜ್ಜೆ 

ಹೇ ಮಹಾಮಹಿಮಾನೆ ಹೇ ಮಲಗಿಪ್ಪನೆ 

ಹೇಮಮುನಿಗೆ ಒಲಿದ ಹೇಮತೀರಥವಾಸ 

ಹೇಮಪುರಿ ನಿಲಯಾ ವಿಜಯವಿಠಲರೇಯಾ 

ಕೋಮಲದಲ್ಲಿ ಪ್ರಿಯಾ ಕೋಮಲಾಂಗನೆ ರಂಗ ॥೨॥


 ತ್ರಿವಿಡಿತಾಳ 


ಕಾಡುವರಿಲ್ಲೆಂದು ಕೈದುಇಳಹಿಕೊಂಡು 

ಮೇದಿನಿಯೊಳಗಿಲ್ಲಿ ಮಲಗಿದ್ದಿಯಾ 

ಕಾದಾಲಾರಿನೆಂದು ಕೈಯಾಸೋತವನೆಂತೊ 

ಪಾದಿಯಲ್ಲಿ ಬಂದು ಮಲಿಗಿದ್ದಿಯಾ 

ಕಾದುವದರಿದಲ್ಲಿ ಇದ್ದ ಸ್ಥಾನದಿಂದ ಕ್ರೋಧರಬಡಿವೆನೆಂದು 

ಮೇದಿನಿ ಪತಿಯಿಂದ ದಾನವಾ ಬೇಡಿದ ಕರದಲಿ 

ಕೈದು ಪಿಡಿಯೆನೆಂದು ಮಲಿಗಿದ್ದಿಯಾ 

ಸಾಧುಗಳಿಗೆ ಬಾಧೆ ಬರಲಾಡಗಿ ಬಿಲ್ಲೂ 

ಸೇದಿ ಬಾಣವನೆಸಿದನೆಂದು ಮಲಗಿದ್ದಿಯಾ 

ವೇದಾತೀತನೆ ಕಲಿಗಿತ್ತಭಾಷಿಗೆ ಅವನ 

ಹಾದಿ ಪೋಗೆನು ಎಂದು ಮಲಿಗಿದ್ದಿಯಾ 

ಶ್ರೀದರಮಣ ಶ್ರೀ ವಿಜಯವಿಠಲಾ ಶಾರಂ-

ಗಾ ಧನಸ್ಸು ಪಿಡಿದು ನಗುತಾ ಮಲಿಗಿದ ದೇವಾ ॥೩॥


 ಅಟ್ಟತಾಳ 


ಕುಂಭಿಣಿಯೊಳಗೊಬ್ಬಾ ಕುಂಭಾ ಮುನೇಶ್ವರ 

ನೆಂಬೊ ಮಹಾತುಮಾ ಶಂಭುವಿನೊಲಿಸಾಲು 

ಸಾಂಬಾನು ಬಂದು ನೀಲಾಂಬುದನೆ ದೈವ 

ವೆಂಬೋದೆ ಸರಿ ಎಂದೂ 

ಕುಂಭಾಗೆ ಪೇಳಲಾಗಂಬುಜಾಕ್ಷನ ಚರಾ-

ಣಾಂಬುಜವರ್ಚಿಸಿ ಇಂಬಾದನರಿಪಾಣಿ

ಎಂಬೋ ನಾಮದಲ್ಲಿ ಕುಂಭಜನಾ ನಿಜರಂಭೆ ತೀರದಲ್ಲಿ 

ಸಂಭ್ರಮದೀ ಶತಕುಂಭ ರಥಾದೊಳು 

ಗಂಭೀರ ಕರತಲೆಗಿಂಬಾದ ದೈವಾವೆ 

ಕುಂಭಾಗೆ ಒಲಿದು ಗುಂಭಾದಿಂದ ವರವಿತ್ತೆ 

ಜಂಭಾಭೇದಿ ಪಾಲಾ ವಿಜಯವಿಠಲರೇಯಾ 

ಕುಂಭಕೋಣಿ ಪುರವೆಂಬ ನಿವಾಸ ॥೪॥


 ಆದಿತಾಳ 


ಮುನಿ ಭಗವಾನೆಂಬಾತನ ಗುರುವಿನ ಅಸ್ಥಿ

ಯನು ಸುರನದಿಗೆ ಶಿಷ್ಯನ ಸಹಿತಾ ಪೋಗುತಲಿ 

ವಿನಯದಿಂದಲಿ ವಸ್ತಿಯನು ಇಲ್ಲಿ ಮಾಡಲಾ 

ತನ ಶಿಷ್ಯನು ಹಸಿದು ಗಂಟನು ಬಿಚ್ಚಲಾಗಲಾ 

ವನ ಕಣ್ಣಿಗೆ ಕುಸುಮವಾಗೆ 

ಘನನದಿ ಬಳಿಯಲ್ಲಿ ಅನುಮಾನ ತೋರಲಾಗಿ 

ಮುನಿಗೆ ನಿಡಿಯಲಂದಾ ಕ್ಷಣದಲ್ಲಿ ಮರುಳೆ ಬಂದಾ 

ತನು ಪರೀಕ್ಷೆಯ ಮಾಡೆ ಮನಕೆ ಸುಖವಾಗಲು  

ಮುನಿ ಸಕಲಾ ಪುಣ್ಯನಿಧಿಗೆ 

ಮಣಿ ಎಂದದನು ಪೊಗಳಾ 

ಲನಿಮಿಷಾರೊಲಿದು ಮನ-

ದಣಿಯಾ ಕೊಂಡಾಡಿದರು 

ಘನ ಶಾರಂಗಪಾಣಿ ವಿಜಯವಿಠಲರೇಯಾ 

ಫಣಿ ಪರಿಯಂಕ ಕುಂಭಕೋಣಪುರದಲ್ಲಿ ಮೆರೆವಾ ॥೫॥


 ಜತೆ 


ಗಂಗಾಜನಕ ಶಾರಂಗ ಸಾಯಕ ಹಸ್ತಾ 

ರಂಗ ವಿಜಯವಿಠಲಾ ವಿಕಸಿತಾಂಬುಜ ಚರಣಾ ॥೬॥

********


ಕುಂಭಘೋಣ ( ಕೋಣೆ ) ಕ್ಷೇತ್ರದ ಮಾಹಿತಿ

(ತೀರ್ಥಪ್ರಬಂಧ)


ಕುಂಭಘೋಣೇ ವಾಸ ಶ್ರೀಶ ಶಾರ್ಙ್ಗಮಾಚ್ಛಾದಯ ಪ್ರಭೋ।

ತಥಾsಪ್ಯತುಲ ಲಾವಣ್ಯೈರ್ಜಾನಾಸ್ತ್ವಾಂ ಜಾನತೇsಚ್ಯುತಮ್॥

 ಅರ್ಥ : ಪ್ರಭೋ= ಎಲೈ ಸಮರ್ಥನಾದ ; ಶ್ರೀಶ=ಲಕ್ಷ್ಮೀ ಪತಿಯೇ ; ತ್ವಂ=ನೀನು ; ಶಾರ್ಙ್ಗ = ಶಾರ್ಙ್ಗ ಎಂಬ ನಿನ್ನ ಧನುಸ್ಸನ್ನು ; ಅಚ್ಛಾದಯ= ಮರೆಮಾಡಿಕೋ ; ಅತುಲಲಾವಣ್ಯೈ= ನಿನ್ನ ಅನುಪಮವಾದ ಸೌಂದರ್ಯದಿಂದಾಗಿ ; ಅಚ್ಯುತಂ = ಶ್ರೀನಾರಾಯಣನೆಂದು ; ಜಾನತೇ=ತಿಳಿದುಬಿಡುವರು.


 ವಿವರ : ಕುಂಭಕೋಣದಲ್ಲಿರುವ ವಿಷ್ಣುಮೂರ್ತಿಯನ್ನು ಶಾರ್ಙ್ಗಪಾಣಿ ಎಂದು ಕರೆಯುವರು. ಈ ಶಾರ್ಙ್ಗಪಾಣಿಯ ಕೈಯಲ್ಲಿ ಶಾರ್ಙ್ಗಧನಸ್ಸು ಇಲ್ಲ ; ಆತನು ಅದನ್ನು ತನ್ನ ಬುಡದಲ್ಲಿ ಹಾಕಿಕೊಂಡು ಮಲಗಿರುವನು ಎಂದು ಸ್ಥಳಪುರಾಣದಲ್ಲಿದೆ ; ಹೀಗೆ ಇಲ್ಲಿಯ ಶ್ರೀನಾರಾಯಣನು ಕುಂಭಘೋಣ( ಕುಂಭದ ಒಳಗಿನ ಪ್ರದೇಶದಲ್ಲಿ ಅಡಗಿದವನಾಗಿ ಇದ್ದರೂ) ದಲ್ಲಿದ್ದರೂ , ಶಾರ್ಙ್ಗಧನುಸ್ಸನ್ನು ಮರೆಮಾಡಿ ಕೊಂಡಿದ್ದರೂ , ಭಕ್ತಜನರು ಮಾತ್ರ ಅವನನ್ನು ಶಾರ್ಙ್ಗಪಾಣಿಯಾದ ಶ್ರೀಹರಿ ಎಂದು ಗುರುತಿಸಿಬಿಡುವರು; ಇದಕ್ಕೆ ಅವನಲ್ಲಿರುವ ಅಪಾರ ಲಾವಣ್ಯವೇ ಕಾರಣ. ಶಾರ್ಙ್ಗಧನಸ್ಸು ಕಾಣದಿದ್ದರೂ ಜನರು ಶಾರ್ಙ್ಗಪಾಣಿ ಎಂದು ಕರೆಯುವುದು ಅವರು ಈತನನ್ನು ಶ್ರೀಹರಿ ಎಂದು ಗುರುತಿಸಿರುವುದಕ್ಕೆ ದ್ಯೋತಕ ಎಂದೂ ಇಲ್ಲಿಯ ವಿಗ್ರಹ ಅತ್ಯಂತ ಸುಂದರವಾದುದೂ ಎಂದೂ ಭಾವ.

ಅತುಲಲಾವಣ್ಯವು ಶ್ರೀಹರಿಯ ಅಸಾಮಾನ್ಯ ಲಕ್ಷಣಗಳಲ್ಲೊಂದು ಎಂಬುದು ಭಾಗವತಾದಿಗಳಲ್ಲಿ ಉಕ್ತವಾಗಿರುವುದನ್ನು ಇಲ್ಲಿ ಗಮನಿಸಬೇಕು. ಶಾರ್ಙ್ಗಪಾಣಿತ್ವಾದಿ ಲಕ್ಷಣಗಳಂತೆ ಅತುಲಲಾವಣ್ಯವು ಶ್ರೀಹರಿತ್ವ ನಿಶ್ಚಾಯಕವಾದ ಮುಖ್ಯಲಕ್ಷಣ ಎಂದೂ , ಅದು ಅಡಗಿಸಿಕೊಳ್ಳಲಿಕ್ಕೆ ಸಾಧ್ಯವಾಗದಷ್ಟು ಅಪಾರ ಎಂದೂ ಭಾವ.



 ಹೃತಭೂಭಾರದೈತೇಯ ಕೃತವಿಶ್ವಜನಾವನ।

ಶಾರ್ಙ್ಗಪಾಣೇ ಶರಣಾಂ ತೇ ಲಕ್ಷ್ಯಂ ಪಾಪಾನಿ ಮೇsಧುನಾ॥


 ಅರ್ಥ : ಹೃತಭೂಭಾರದೈತೇಯ = ಭೂಮಿಗೆ ಭಾರವಾಗಿದ್ದ ದೈತ್ಯರನ್ನು ಸಂಹರಿಸಿದ ; ಕೃತವಿಶ್ವಜನಾವನ= ಸಕಲಭಕ್ತರ ಪಾಲನೆಯನ್ನು ಮಾಡಿರುವ ; ಶಾರ್ಙ್ಗಪಾಣೇ=ಎಲೈ ಶಾರ್ಙ್ಗಪಾಣಿಯಾದ ಶ್ರೀಹರಿಯೇ ; ಅಧುನಾ = ಈಗ ; ತವ =ನಿನ್ನ ; ಶರಾಣಾಂ = ಬಾಣಗಳಿಗೆ ; ಲಕ್ಷ್ಯಂ =ಗುರಿ ; ಮೇ = ನನ್ನ ; ಪಾಪಾನಿ= ಪಾಪಗಳೇ ಆಗಿವೆ .


 ವಿವರ :  ಭೂಮಿಗೆ ಭಾರಭೂತರಾದ ದೈತ್ಯರನ್ನು ಸಂಹರಿಸಿ ಸಕಲ ಸಜ್ಜನರನ್ನು ಶಾರ್ಙ್ಗಪಾಣಿಯಾದ ನೀನು ಸಲಹಿರುವಿ. ಆದರೇ ನೀನು ಇನ್ನು ಮುಂದೆ ನಿನ್ನ ಶಾರ್ಙ್ಗಧನುಸ್ಸಿಗೆ ಕೆಲಸವಿಲ್ಲವೆಂದೇನೂ ಭಾವಿಸಬೇಕಾಗಿಲ್ಲ ; ಏಕೆಂದರೆ ನನ್ನ ಬಹು ಪಾಪಗಳು ಅದಕ್ಕೆ ಗುರಿಯಾಗಿ ಇವೆಯಲ್ಲವೆ . ಹೊರಗಿನಿಂದ ಬಾಧಿಸುವ ದೈತ್ಯರನೆಲ್ಲ ನೀನು ಸಂಹರಿಸಿದಂತೆ ಒಳಗಿನಿಂದ ಹಿಂಸಿಸುವ ನನ್ನ ಪಾಪಗಳನ್ನು ಸಹ ಸಂಹರಿಸಿ ನನ್ನನ್ನು ಪಾಲಿಸು ಎಂದು ಭಾವ . ಶ್ರೀಹರಿಯು ಶಾರ್ಙ್ಗಪಾಣಿಯಾದರೂ ಕುಂಭಘೋಣದಲ್ಲಿ ಅದನ್ನು ಕೈಯಲ್ಲಿ ಹಿಡಿದಿಲ್ಲ ಎಂಬ ಹಿನ್ನೆಲೆಯಲ್ಲಿ ಇಲ್ಲಿಯ ಪ್ರಾರ್ಥನೆಯು ಅರ್ಥವತ್ತಾಗಿದೆ.

ಪಾಪಾನಿ ಎಂಬ ಬಹುವಚನದಿಂದಲೇ ನಮ್ಮ ಪಾಪಗಳ ಸಂಖ್ಯೆ ಅಪಾರ ಎಂಬುದನ್ನು ಸೂಚಿಸಿರುವರು.


ಕುಂಭಘೋಣವು ದಕ್ಷಿಣಭಾರತದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲೊಂದು.

"ಕಾಮಕೋಷ್ಣೀಪುರೀ" ಎಂದೂ ಇದು ಪುರಾಣಗಳಲ್ಲಿ ಪ್ರಸಿದ್ಧವಾಗಿದೆ. "ದೇವಾಲಯಗಳ ಬೀಡು" ಎಂದು ಪ್ರಸಿದ್ಧವಾಗಿರುವ ಈ ಕ್ಷೇತ್ರದಲ್ಲಿ ದೇವಾಲಯವಿಲ್ಲದ ಬೀದಿಯೇ ಇಲ್ಲಾ. ಬ್ರಹ್ಮದೇವರು ಇರಿಸಿದ ಅಮೃತ ಪೂರ್ಣವಾದ ಕುಂಭದ ಕಂಠದ ಬಳಿಯ ರಂಧ್ರದಿಂದ ಸುರಿದ ಅಮೃತವು ಪಸರಿಸಿದ ಕ್ಷೇತ್ರ ಎಂಬುದು ಇದರ ಹೆಸರಿನ ಹಿನ್ನೆಲೆಯಾಗಿದೆ. ಶಾರ್ಙ್ಗಪಾಣಿ , ಕುಂಭೇಶ್ವರ ವಾಗೇಶ್ವರ , ರಾಮಸ್ವಾಮಿ ಮತ್ತು ಚಕ್ರಪಾಣಿ ಎಂಬ ಇಲ್ಲಿಯ ಐದು ದೇವಾಲಯಗಳಲ್ಲಿ ಕುಂಭೇಶ್ವರ ಮತ್ತು ಶಾರ್ಙ್ಗಪಾಣಿ ದೇವಾಲಯಗಳು ತುಂಬಾ ಮುಖ್ಯವಾಗಿವೆ . 


 ವಿಶೇಷ : ಶಾರ್ಙ್ಗಪಾಣಿಯ ವಿಗ್ರಹವು ಶೇಷಶಾಯಿಯಾಗಿರುವ ಚತುರ್ಭುಜವಿಗ್ರಹ ; ಶ್ರೀದೇವಿ , ಭೂದೇವಿಯರು ಪಾದಗಳನ್ನು ಸೇವಿಸುತ್ತಿರುವರು, ಇಲ್ಲಿಗೆ ಶ್ರೀಹರಿಯು ರಥಾರೂಢನಾಗಿಯೇ ವೈಕುಂಠದಿಂದ ಆಗಮಿಸಿದನು ಎಂದು ಪ್ರತೀತಿ. ಗರ್ಭಗೃಹವು ರಥದ ಆಕೃತಿಯಲ್ಲಿದ್ದು ಅದರಲ್ಲಿ ಆನೆ , ಕುದುರೆಗಳು ಸಹ ಕೆತ್ತಲ್ಪಟ್ಟಿರುವುದು ಇದಕ್ಕೆ ದ್ಯೋತಕವಾಗಿದೆ.


ಕಾವೇರಿ ತೀರದ ಈ ಕ್ಷೇತ್ರವು ಶ್ರೀರಾಘವೇಂದ್ರಸ್ವಾಮಿಗಳ ಪರಮ ಗುರುಗಳಾದ ಶ್ರೀವಿಜಯೀಂದ್ರರಂತಹ ಮಹಾಮಹಿಮರ ಮುಖ್ಯಕಾರ್ಯಕ್ಷೇತ್ರವಾಗಿತ್ತು. ಅವರ ಮೂಲಬೃಂದಾವನದ ಸ್ಥಳವೂ ಆಗಿರುವ ಇದು ಐತಿಹಾಸಿಕವಾಗಿ ಒಂದು ಪ್ರಮುಖ ವೈಷ್ಣವಕೇಂದ್ರ.


🙏ಶ್ರೀಕೃಷ್ಣಾರ್ಪಣಮಸ್ತು🙏

🙏ಶ್ರೀ ಮಧ್ವೇಶಾರ್ಪಣಮಸ್ತು🙏

*******