ankita ಪಂಡರೀನಾಥವಿಠಲ
ರಾಗ: ತೋಡಿ ತಾಳ: ಆದಿ
ಕಾಪಾಡಿ ಗುರುವರೇಣ್ಯರೆ ಗುರು ರಾಘವೇಂದ್ರರೆ
ತಾಪಸೋತ್ತಮ ಕರುಣಿಯೆ ಪ
ಶ್ರೀಪತಿ ಹರಿಪಾದಾಬ್ಜವ ಭಕ್ತಿಲಿ
ತಪ್ಪದೆ ಸೇವಿಸಿ ಮೂರವತಾರದಿ
ವಿಪುಳದಿ ಸಂಗ್ರಹವಾಗಿಹ ಪುಣ್ಯವ
ತೃಪ್ತಿಲಿ ಭಕ್ತರಿಗ್ಹಂಚುವ ದಾನಿಯೆ ಅ.ಪ
ಮಂಚಾಲಿಕ್ಷೇತ್ರವಾಸರೆ ಗುರುರಾಯರೆ
ಮುಂಚೆ ನಮಿಪೆ ನಿಮಗೆ
ಸಂಚಿಂತಿಸುವವರನು ಮಿಂಚಿನಂತಲಿ ಬಂದು
ಕೊಂಚ ನೋಯಿಸದಲೆ ಕಾಯುವ ಸದ್ಗುರು
ವಂಚನೆಯಿಲ್ಲದೆ ಭಕ್ತ ಸಮೂಹಕೆ
ಪಂಚರೂಪಿ ಪರಮಾತ್ಮನ ಕರುಣವ
ಮುಂಚೆ ಹರಿಸಿ ಮನತೋಷಿಪ ಎಲ್ಲರ
ಚಂಚಲ ಕಳೆವ ಕೃಷ್ಣನ ಕಿಂಕರರೆ 1
ಕರೆಯಲಾಕ್ಷಣ ಬರುವರೆ ಕಂಬದಿ ಹರಿಯ
ಕರೆದು ತೋರಿದ ಖ್ಯಾತರೆ
ನಿರುತ ನಿಮ್ಮಯ ಚರಣ ಅರಿತು ಸೇವಿಪರಿಗೆ
ಕೋರಿದಿಷ್ಟಾರ್ಥವ ಕೊಡುವಂಥ ಖ್ಯಾತರೆ
ಕರಿರಾಜವರದನ ಕರುಣಾಪಾತ್ರರೆ
ಗುರುಪ್ರಾಣೇಶನ ಆವೇಶಿತರೆ
ಪರಿಮಳ ಮುಂತಾದ ಗ್ರಂಥವ ವಿರಚಿಸಿ
ಹರಿಗಿತ್ತರೆ ಗುರುಮಹಿಮಾನ್ವಿತರೆ 2
ಎಲ್ಲೆಲ್ಲು ವ್ಯಾಪಿಸಿಹರೆ ಉಲ್ಹಾಸದಿ
ಒಲಿದು ಕಾಯುವ ಪ್ರಭುವೆ
ಮಲಿನನಾದರು ನಿರ್ಮಲದಿ ಸೇವಿಸೆ ನಿಮ್ಮ
ಚೆಲ್ವ ಕೃಷ್ಣಗೆ ಪೇಳಿ ಫಲವಿತ್ತು ರಕ್ಷಿಪರೆ
ಎಲ್ಲಿದ್ದರು ಅಲ್ಲಿಯೆ ಒದಗುವ
ಬಲ್ಲಿದರೆ ಸರಿಗಾಣೆನು ಭುವಿಯಲಿ
ನಲ್ಮೆಲಿ ನಿಮ್ಮಯ ಪಾದಕ್ಕೆರಗುವೆ
ಪಂಢರೀನಾಥವಿಠಲನದಾಸರೆ 3
***