ಮಧ್ವಮತದ ಸಿದ್ಧಾಂತದ ಪದ್ಧತಿ |
ಬಿಡಬೇಡ ಬಿಟ್ಟು ಕೆಡಬೇಡ ಕೆಡಬೇಡ ||ಪ||
ಬಿಟ್ಟರೆ ಯಮ ಬೆನ್ನೆಟ್ಟುವ ಮೂಢ ||ಅ.ಪ||
ಹರಿ ಸರ್ವೋತ್ತಮನಹುದೆಂಬ ಜ್ಞಾನವ-
ನರಿತು ಬಾಳ್ವುದಕೆ ಪರತರವಾದ ಮತ ||1||
ಘೋರ ಯಮನ ಭಯ ದೂರ ಓಡಿಸಿ ಮು-
ರಾರಿಯ ಚರಣವ ಸೇರೋ ಸನ್ಮಾರ್ಗವ ||2||
ಭಾರತೀಶ ಮುಖ್ಯ ಪ್ರಾಣಾಂತರ್ಗತ
ನೀರಜಾಕ್ಷ ಪುರಂದರ ವಿಠಲನ ||3|
******
ಮಧ್ವ ಮತದ ಸಿದ್ಧಾಂತದ ಪದ್ಧತಿ
ಬಿಡಬ್ಯಾಡಿ ಬಿಡಬ್ಯಾಡಿ -
ಬಿಟ್ಟು ಕೆಡಬ್ಯಾಡಿ ಕೆಡಬ್ಯಾಡಿ ।। ಪಲ್ಲವಿ ।।
ಹರಿ ಸರ್ವೋತ್ತಮ-
ನಹುದೆಂಬೋ ಜ್ಞಾನದ ।
ತಾರತಮ್ಯವನೆ ತಿಳಿವ
ಮಾರ್ಗವಿದು ।। ಚರಣ ।।
ಘೋರ ಯಮನ ಭಯ
ದೂರಕೆ ಮಾಡಿ । ಮು ।
ರಾರಿಯ ಚರಣವ ಸೇರುವ
ಮಾರ್ಗವು ।। ಚರಣ ।।
ಭಾರತೀಶ ಮುಖ್ಯ-
ಪ್ರಾಣಾಂತರ್ಗತ ।
ನೀರಜಾಕ್ಷ ನಮ್ಮ
ಪುರಂದರವಿಠ್ಠಲನ ।। ಚರಣ ।।
****
" ಶ್ರೀ ಮಧ್ವ ಮಾರ್ಗವೇ - ಮೋಕ್ಷ ಮಾರ್ಗ = ಬಿಟ್ಟವ ಕೆಟ್ಟ "
" ಮಧ್ವ ಮತದ ಸಿದ್ಧಾಂತದ ಪದ್ಧತಿ [ ಪದ್ಧತಿ = ಮಾರ್ಗ ] "
ಶ್ರೀಮದಾಚಾರ್ಯರಿಂದ ಸ್ಥಾಪಿತವಾದ - ಪಂಚಭೇದ ತಾರತಮ್ಯ ಸಹಿತವಾದ ಶ್ರೀ ಹರಿ ಸರ್ವೋತ್ತಮತ್ವ - ಶ್ರೀ ವಾಯು ಜೀವೋತ್ತಮತ್ವಗಳನ್ನು ನಿರ್ಣಯಿಸುವ ಸಿದ್ಧಾಂತದ ಮಾರ್ಗವನ್ನು
" ಬಿಡಬ್ಯಾಡಿ ಬಿಡಬ್ಯಾಡಿ "
ನಿತ್ಯ ಸುಖ ಸಾಧನ ಚ್ಯುತರಾಗಬೇಡಿರಿ.
ಅಂದರೆ...
ನಷ್ಟ ಮಾಡಿ ಕೊಳ್ಳಬೇಡಿ - ದುರ್ಲಭ ಮನುಷ್ಯ ದೇಹವನ್ನು ವ್ಯರ್ಥಗೊಳಿಸಬೇಡಿರಿ.
" ತಾರತಮ್ಯವನೆ ತಿಳಿವ "
ತರತಮಗಳ ಜ್ಞಾನದಿಂದಲೇ ಶ್ರೀ ಮಹಾವಿಷ್ಣುವು - ರಮಾ - ಬ್ರಹ್ಮಾದಿಗಳಿಗಿಂತ ಅನಂತ ಮಾಡಿ ಅಧಿಕನು [ ಕಲ್ಯಾಣ ಗುಣಪೂರ್ಣನು ] ಎಂಬ ಉತ್ಕೃಷ್ಟತೆಯ ಜ್ಞಾನವೂ - ಅದರೊಡನೆಯೇ ಅಭಿವೃದ್ಧಿಗೊಳ್ಳುವ ಭಕ್ತಿಯೂ ದೊರೆಯುವ ದಾರಿಯಿದು = ಈ ಮಧ್ವಮತ!
ಭಕ್ತಿಯೇ ಮುಕ್ತಿಗೆ ಪ್ರಧಾನ ಸಾಧನವು - ಅದರಿಂದಲೇ ಶ್ರೀ ಮಹಾವಿಷ್ಣು ಪ್ರಸಾದವು ಲಭ್ಯ.
ಶ್ರೀ ಹರಿ ಪರಮಾತ್ಮನು ಪ್ರಸನ್ನ ಚಿತ್ತನಾಗಿ....
" ಏನಂ ಮೋಚಯಾಮಿ "
ಈ ಜೀವನನ್ನು ಸಂಸಾರದಿಂದ ಮೋಚನೆ ಮಾಡುತ್ತಾನೆ ಎಂದು ಇಚ್ಛಿಸಿದರೆ ಮಾತ್ರ " ಮೋಕ್ಷ " ವಾಗಬಲ್ಲದೆಂಬ ವೇದಗಳ ನಿರ್ಣಯವನ್ನು ಈ ಮಾತ್ರ - ಸ್ಥಾಪಿಸಿ ಉಪದೇಶಿಸುತ್ತದೆ.
" ಮುರಾರಿಯಾ ಚರಣವ ಸೇರೋ [ ತೋರೋ ] ಮಾರ್ಗವ "
ಶ್ರೀ ಹರಿ ಪರಮಾತ್ಮನ ಪಾದ ದರ್ಶನ ಮಾಡಿಸುವ ಮಾರ್ಗವನ್ನು......
ಅಂದರೆ...
ಅಪರೋಕ್ಷ ಜ್ಞಾನವನ್ನು ದೊರಕಿಸುವ - ಶ್ರೀ ವಿಷ್ಣುವಿನ ಪ್ರತ್ಯಕ್ಷ ದರ್ಶನವನ್ನು - ಅದರಿಂದ ಮೋಕ್ಷವನ್ನು ದೊರಕಿಸುವ ದಾರಿಯನ್ನು
" ಭಾರತೀಶ ಮುಖ್ಯಪ್ರಾಣಾಂತರ್ಗತ ನೀರಜಾಕ್ಪ "
ಶ್ರೀ ಭಾರತೀದೇವಿಯರ ಪತಿ ಶ್ರೀ ವಾಯುದೇವರಲ್ಲಿ ನಿತ್ಯ ಪ್ರಕಟನಾಗಿ ವಿರಾಜಮಾನನಾದ ಕಮಲ ನೇತ್ರ ಶ್ರೀ ಹರಿ ಪರಮಾತ್ಮನನ್ನು.....
ಶ್ರೀ ಹರಿಯು ಸರ್ವಾಂತರ್ಗತನಾದರೂ - ಪವನಾಂತರ್ಗತನಂತೆ ಎಲ್ಲ ವಸ್ತುಗಳಲ್ಲಿ ಮೋಕ್ಷ ಪ್ರದನಾಗಿ ಸ್ಥಿತನಲ್ಲ - ಸರ್ವತ್ರ ಅವ್ಯಕ್ತನಾಗಿಯೇ ಇದ್ದರೂ - ಶ್ರೀ ವಾಯುದೇವರಲ್ಲಿ ತನ್ನ ಮೋಕ್ಷರಪ್ರದ ಮಹಿಮೆಯನ್ನು ಸದಾ ಪ್ರಕಟಿಸಿರುತ್ತಾನೆ.
ಆದ್ದರಿಂದ ಹಾಗೆ ಸೌಕರ್ಯ ಮಾಡಿಕೊಟ್ಟು - ಉದ್ಧರಿಸುವ ಶ್ರೀ ಮಧ್ವರ ಈ ಮತವನ್ನು ಬೇಡಬೇಡಿರಿ - ಬಿಟ್ಟು ಕೆಡಬೇಡಿರಿ !!
****