Showing posts with label ಆದಿದೈವವೆ ನಿನ್ನ vijaya vittala ankita suladi ವೆಂಕಟೇಶ ಪ್ರಾರ್ಥನಾ ಸುಳಾದಿ AADI DAIVAVE NINNA VENKATESHA PRARTHANA SULADI. Show all posts
Showing posts with label ಆದಿದೈವವೆ ನಿನ್ನ vijaya vittala ankita suladi ವೆಂಕಟೇಶ ಪ್ರಾರ್ಥನಾ ಸುಳಾದಿ AADI DAIVAVE NINNA VENKATESHA PRARTHANA SULADI. Show all posts

Monday, 9 December 2019

ಆದಿದೈವವೆ ನಿನ್ನ vijaya vittala ankita suladi ವೆಂಕಟೇಶ ಪ್ರಾರ್ಥನಾ ಸುಳಾದಿ AADI DAIVAVE NINNA VENKATESHA PRARTHANA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ವೆಂಕಟೇಶ ಸ್ತೋತ್ರಪ್ರಾರ್ಥನಾ ಸುಳಾದಿ 

 ರಾಗ ಕಾಂಬೋಧಿ 

 ಧ್ರುವತಾಳ 

ಆದಿದೈವವೆ ನಿನ್ನ ಪಾದವೆ ನೆರೆನಂ -
ಬಿದೆನು ಬಿಡದಲೆ ಆದರಿಸು 
ಕಾದುವ ಖಳರು ವಾಮದಲ್ಲಿ ಹುರಿಗೂಡಿ 
ಬಾಧೆಬಡಿಸುವದು ನಾ ದಾರಿಗೆ ದೂರಲಿ 
ಪೋದವನೇಕಜನನವಾದ ಕಾಲದಲ್ಲಿ 
ಈ ದೇಹದ ಸುಖವಾದದ್ದು ಕಾಣೆನೊ 
ವೇದಾರಸಿ ಕಾಣದ ಬಲು ಮಹಿಮಾನೆ 
ಯಾದವಶಿರೋಮಣಿ ವಿಜಯವಿಟ್ಠಲ ನಿನ್ನ 
ಮಾಧುರ್ಯನಾಮವ ಉಣಿಸಿ ಬೀದಿಬಸವನ ಮಾಡೊ ॥ 1 ॥

 ಮಟ್ಟತಾಳ 

ಅಪ್ಪನ ಅಪ್ಪಾನೆ ಗಿರಿಯ ತಿಮ್ಮಪ್ಪನೆ 
ಸರ್ಪನ ತಲ್ಪನೆ ಸರ್ವರೊಳಿಪ್ಪನೆ 
ಇಪ್ಪಲು ತಪ್ಪಾನೆ ಕರೆದರೆ ಬಪ್ಪಾನೆ 
ದರ್ಪಣರೂಪನೆ ವಿಜಯವಿಟ್ಠಲ ನಿನ್ನ 
ಕಪ್ಪನೆ ಚರಣದಲಿ ಧೊಪ್ಪನೆ ಹೊರಹೊರಳುವೆನೊ ॥ 2 ॥

 ತ್ರಿವಿಡಿತಾಳ 

ಕಟಕನ ಕೈಯ ಶಿಲಿಕಿದ ಗೋವೊಂದು ಸಂ - 
ಕಟ ಬಡುವಂತೆ ನನ್ನೊಳಗೆ ನಾನೆ ಬೀಳುವೆ ಅ - 
ಕಟಕಟ ನಿನಗಿನ್ನು ಕರುಣಬಾರದೆ ಸುರ - 
ಕಟಕದೊಡಿಯನೆ ನಿರಾಕರಿಸಿ ಎನ್ನನು ಯಿರಾ -
ಕಟಕದೊಳಗೆ ಇಟ್ಟು ಯೆಳಸುವರೆ ಅ - 
ಕಟಕಟಾ ನಾನಾರಿಗಾಲವರಲಿ ಮರ - 
ಕಟ ಕುಣಿವಂತೆ ಮನಸು ಇಂದ್ರಿಯಗಳು ವ - 
ಕ್ಕಟವಾಗಿ ಕುಣಿದು ಕಂಗೆಡಿಸುತ್ತಿದೆ ವೇಂ - 
ಕಟಾಚಲವಾಸಾ ವಿಜಯವಿಟ್ಠಲನೆ ಚೊ - 
ಕ್ಕಟ ಮಾರ್ಗವ ತೋರಿ ವಿಕಟಮತಿಕಳಿಯೊ ॥ 3 ॥

 ಅಟ್ಟತಾಳ 

ದಾಸರ ಮನೆಯಲ್ಲಿ ವಾಸವಾಗಿದ್ದವ 
ದಾಸರ ಬಳಿಯಲ್ಲಿ ಸೇರಿಕೊಂಡವ ನಾನೊ 
ದಾಸರ ಮನೆಯಲ್ಲಿ ನೀರು ಪೊತ್ತವ ನಾನು 
ದಾಸರ ಮನೆ ಯಂಜಲೆಡೆ ತೆಗೆದವ ನಾನು 
ದಾಸರುಂಡದ್ದು ಉಂಡು ಬೆಳೆದವ ನಾನು 
ದಾಸರ ಮನೆಮುಂದೆ ರಾತ್ರಿ ಜಾಗರ ನಾನು 
ದಾಸರ ಪಂಚೆಲಿ ದಿನ ಕಳದವ ನಾನು 
ದಾಸರ ನಂಬಿದ ದಾಸನು ನಾನು 
ದೋಷಿ ನಾನಾದಡೆ ದೋಷರಹಿತ ಪುಣ್ಯ - 
ರಾಶಿ ಪುರಂದರದಾಸರ ಮ್ಯಾಲೆ ದಯಶರಧಿಯಿಟ್ಟು 
ನೀ ಸಲಹು ಯೆನ್ನ ಪಾಶವ ಬಿಡಿಸುತ್ತ 
ಲೇಸು ಪಾಲಿಪ ನಮ್ಮ ವಿಜಯವಿಟ್ಠಲರೇಯ 
ಬೀಸಿ ಬೀಸಾಟದಿರು ಬಿಂಕದ ದೈವ ॥ 4 ॥

 ಆದಿತಾಳ 

ನಿನ್ನನೆ ಪೊಂದಿದೆ ನಿನ್ನನೆ ಸೇರಿದೆ 
ನಿನ್ನನೆ ಪಾಡಿದೆ ನಿನ್ನ ಕೊಂಡಾಡಿದೆ 
ನಿನ್ನಂಘ್ರಿಯುಗಳವನ್ನು ನಂಬಿದೆ ಪಾ -
ವನ್ನ ಚರಿತ ರಂಗ ಎನ್ನ ಸಲಹದಿರೆ 
ನಿನ್ನಾರು ಒಪ್ಪುವರು ಪನ್ನಗಾರಿವಾಹನ್ನ ವಿಜಯವಿಟ್ಠಲ 
ಎನ್ನ ಬಿಡದೆ ಕಾಯೊ ಅನ್ನಾಥರೊಡಿಯಾ ॥ 5 ॥

 ಜತೆ 

ದುರುಳನೆನದೆ ದುರ್ಜನರಿಗೆ ಒಪ್ಪಿಸದೆ 
ಪರಿಪಾಲಿಸಿ ಸಾಕು ವಿಜಯವಿಟ್ಠಲರೇಯಾ ॥
***********

ಧ್ರುವತಾಳದ ನುಡಿ : 

 ವೇದಾರಸಿ = ವೇದದಲ್ಲಿ ಹುಡುಕಿದರೂ

 ಮಟ್ಟತಾಳದ ನುಡಿ : 

 ಅಪ್ಪನ ಅಪ್ಪಾನೆ = 
ಅಪ್ಪನ - ಬ್ರಹ್ಮದೇವರ , ಅಪ್ಪ - ಶ್ರೀನಾರಾಯಣ
ಬ್ರಹ್ಮದೇವರ ತ್ವಚದಿಂದ ಒಂದು ಸಲ ಹುಟ್ಟಿಬಂದದ್ದು ಶ್ರೀಭೃಗುಋಷಿಗಳು. 
ಮತ್ತೊಂದುಸಲ , ಅಪ್ಪನ - ವರುಣದೇವರಮಗನಾಗಿ ಬಂದದ್ದು , ಅಪ್ಪ - ವರುಣದೇವರ ತಂದೆ ಶ್ರೀಮನ್ನಾರಾಯಣದೇವರು.

 ದರ್ಪಣರೂಪನೆ = ಶ್ರೀಹರಿಯು ಕನ್ನಡಿಯ ಬಿಂಬಸ್ಥಾನದಲ್ಲಿಯೂ , ಅದರಲ್ಲಿ ಕಾಣುವ ಜೀವರು ಪ್ರತಿಬಿಂಬಸ್ಥಾನದಲ್ಲಿ ಇರುವರೆಂಬ ಭಾವ.

 ತ್ರಿಪುಟತಾಳದ ನುಡಿ : 

 ಯಿರಾಕಟಕ = (ಯಿರಾ - ಇಕ್ಕಟ್ಟು) ಅಕ್ಕಸಾಲಿಯು ಬಳೆಯಂತೆ ಗುಂಡಾಗಿರುವ ಚಿಕ್ಕ ರಂಧ್ರದಲ್ಲಿ ತೂರಿಸಿ ಬೆಳ್ಳಿಬಂಗಾರದ ತಂತಿಗಳನ್ನು ಎಳೆಯುವಂತೆ.

 ಅಟ್ಟತಾಳದ ನುಡಿ : 

 ದಾಸರ = ಶ್ರೀಪುರಂದರದಾಸರ ; ಹಿಂದಿನ ಜನ್ಮದಲ್ಲಿ ದಾಸರ ಹೊಟ್ಟೆಯಲ್ಲಿ ಹುಟ್ಟಿ " ಗುರುಮಧ್ವಪತಿ " ಎಂಬ ಅಂಕಿತದಿಂದ ಇದ್ದುದನ್ನು ಇದರಿಂದ ಸೂಚಿಸುತ್ತಾರೆ. ಇದರಿಂದ ಶ್ರೀವಿಜಯದಾಸರು ಭೃಗುಋಷಿಗಳ ಅಂಶರೆಂದು ಸಿದ್ಧವಾಯಿತು. " ಗುರುಮಧ್ವಪತಿಯೇ ಭೃಗು " .

 ದಾಸರ ಪಂಚೆಲಿ ದಿನ ಕಳದವ ನಾನು = ಶ್ರೀಪುರಂದರದಾಸರು ಮಡಿಯಲ್ಲಿದ್ದಾಗ ತಮ್ಮ ಕೊನೆಯ ಕೂಸಾದ ಗುರುಮಧ್ವಪತಿಯನ್ನು ತೊಡೆಯ ಮೇಲೆ ಮಲಗಿಸಿಕೊಂಡು ನಿದ್ರೆ ಮಾಡಿಸುವ ಕಾಲದಲ್ಲಿ ತಾವು ಹೊದ್ದಿದ್ದ ಅಥವಾ ಉಟ್ಟಿದ್ದ ಪಂಚೆಯನ್ನು ಆ ಕೂಸಿಗೆ ಹೊದಿಸಿ ನಿದ್ರೆ ಮಾಡಿಸಿ ತಮ್ಮನ್ನು ಲಾಲಿಸುತ್ತಿದ್ದುದನ್ನು ನೆನೆಸಿಕೊಳ್ಳುತ್ತಾರೆ ಶ್ರೀದಾಸರು.

 ಪಾಶವ ಬಿಡಿಸುತ್ತಾ = ಸಂಸಾರಬಂಧನ ಬಿಡಿಸುತ್ತ.

 ಈ ಸುಳಾದಿಯ ರಚನೆಯ ಸಂದರ್ಭ : 

ಶ್ರೀವಿಜಯದಾಸರು ತಮಗೆ ಶ್ರೀಹರಿಯಿಂದ ಅಂಕಿತ ದೊರೆತ ಮೇಲೆ ಪ್ರಪ್ರಥಮವಾಗಿ ದರ್ಶನ ಮಾಡಿದ್ದು ತಿರುಪತಿಯ ಶ್ರೀಶ್ರೀನಿವಾಸನನ್ನು. ತಮ್ಮ ಒಡಗೂಡಿ ಬಂದ ಭಕ್ತರೊಡನೆ ತಿರುಪತಿಯನ್ನು ಸೇರಿ ಅಲ್ಲಿ ಕಪಿಲತೀರ್ಥಸ್ನಾನ ಮತ್ತು ತೀರ್ಥಶ್ರಾದ್ಧಾದಿಗಳನ್ನು ಮುಗಿಸಿ , ಪರ್ವತದ ಪಾದಭಾಗಕ್ಕೆ ಬಂದು ಅಲ್ಲಿ ಕುಳಿತರು. ಈ ಬೆಟ್ಟವನ್ನು ಹಿಂದಿನ ಜನ್ಮದಲ್ಲಿ ತಮ್ಮ ತಂದೆಯವರಾಗಿದ್ದ ಶ್ರೀಪುರಂದರದಾಸರೊಡನೆ ಅನೇಕಬಾರಿ ಹತ್ತಿದ್ದರಾದ್ದರಿಂದ ತಿರುಪತಿಯ ಯಾತ್ರೆಮಾಡುವ ಕ್ರಮವನ್ನು ತಿಳಿದಿದ್ದರು. ಅಂದಿನ ಆ ಎಲ್ಲ ವಿಷಯಗಳನ್ನೂ ನೆನೆದ ಶ್ರೀವಿಜಯದಾಸಾರ್ಯರು ತಮ್ಮ ಪೂರ್ವಜನ್ಮದ ತಂದೆಯವರ (ಶ್ರೀಪುರಂದರದಾಸರಾಯರ) ಸ್ಮರಣೆ ಮಾಡಿಕೊಂಡು ತಮ್ಮ ಜೊತೆಯಲ್ಲಿದ್ದವರನ್ನು ಸಂಬೋಧಿಸಿ , ಪರ್ವತದಲ್ಲಿ ಚಿಂತಿಸಬೇಕಾದ ವಿಷಯಗಳನ್ನು ವಿವರಿಸಿ , ಶ್ರೀಶ್ರೀನಿವಾಸನ ದರ್ಶನಮಾಡಿ ಅವನಲ್ಲಿ ಮಾಡಬೇಕಾದ ಪ್ರಾರ್ಥನೆಯ ರೀತಿಯನ್ನೂ ತಿಳಿಸಿಕೊಡುತ್ತಾ , ಪರ್ವತವನ್ನು ಹತ್ತಿ , ಶ್ರೀಶ್ರೀನಿವಾಸನ ಎದುರು ನಿಂದು ಶ್ರೀಪುರಂದರದಾಸರ ಪಾದಸ್ಮರಣೆ ಮಾಡಿ , ಹಾಡಿದ ಸುಳಾದಿ ಇದು.

 ವಿವರಣೆ : 
 ಹರಿದಾಸರತ್ನಂ ಶ್ರೀಗೋಪಾಲದಾಸರು
***********