Audio by Mrs. Nandini Sripad
ಶ್ರೀಗೋಪಾಲದಾಸಾರ್ಯ ವಿರಚಿತ ಪ್ರಾರ್ಥನಾ ಸುಳಾದಿ
ರಾಗ ಶಂಕರಾಭರಣ
ಧ್ರುವತಾಳ
ಕೇಳಯ್ಯ ದೇವ ನಿನ್ನ ಊಳಿಗನ ಬಿನ್ನಹ
ಏಳಲ ಮಾಡದಲೆ ಆಲಿಸಿ ಹರುಷದಿ
ತಾಳಲಾರೆನೊ ತಾಯಿಗರ್ಭದೊಳಿಹ ದುಃಖ
ಹೇಳಿಕೊಳ್ಳಲು ಜಲಪ್ರಳಯವಾಗಿಹದು
ಏಳು ಪ್ರಾಕಾರ ಹೊಲಿಯ ಚೀಲದೊಳಗೆ ಹಾಕಿ ಬ -
ಹಾಳ ಪರಿಲಿ ಕುದಿದು ಬಾಳುವೆನು ದೇವ
ಕೋಳಿ ಕಲ್ಲನು ತಿಂದು ಗೋಳಿಟ್ಟು ಕೂಗಿದಂತೆ
ಬಾಳಿದೆನಯ್ಯಾ ಗರ್ಭದೊಳಿಂಥ ಸುಖದಿಂದ
ವೇಳ್ಯವ ಕಳಿದೆ ಹೀಗೆ ಏಳೈದು ಮಾಸ ಮೇಲೆ ಪುಟ್ಟಿದೆ ರಂಗ
ಮೇಳವಗಟ್ಟಿ ಬಂಧುಗಳು ಎಲ್ಲರು ಬಂದು
ಕೇಳಿ ಮುಹೂರ್ತ ನಾಮಕರಣಗಳೆಲ್ಲನು ಮಾಡಿ
ಪಾಲಿಸಿದರಾಗೆ ಜೋಗುಳ ಪಾಡುತಲಿ
ಶೂಲಿ ಎಂದು ಉದರ ಚಾಲವರಿದರಿನ್ನು
ಪಾಲು ನೆರಿವರಯ್ಯಾ ಬಾಲ ಹಸಿದನೆಂದು
ಆಲಸ್ಯದಿಂದ ಹಸಿದು ಅಳುವುತ್ತಿರೆ ಖಾರ -
ಗಳನು ಹಾಕುವರು ತಿಳಿವಿಕಿ ಇಲ್ಲದಲೆ
ಸೂಳಿಯ ಗುಡಿಸಿಲಂತೆ ಬಾಳಿವ್ಯಾಯಿತೆನ್ನದು
ಕೇಳಯ್ಯ ಹರಿ ಕರುಣಾಳುಗಳರಸನೆ
ಆಲದೆಲೆಯ ಶಾಯಿ ಗೋಪಾಲವಿಟ್ಠಲ
ಘಾಳಿಮಾಡದೆ ವಾಕು ಲಾಲಿಪದು ಜೀಯಾ ॥ 1 ॥
ಮಠ್ಯತಾಳ
ಅನಂತ ಅನಂತ ದೇಹ ಅನಂತ ಅನಂತ ಜನುಮ
ಅನಂತ ಅನಂತ ಬಂಧು ಅನಂತ ಅನಂತ ಬಳಗ
ಅನಂತ ಅನಂತ ಸತಿ ಅನಂತ ಅನಂತ ಸುತರು
ಅನಂತ ಅನಂತ ತಾಯಿ ಅನಂತ ಅನಂತ ತಂದೆ
ಅನಂತ ಅನಂತ ಪರಿಯಲಿ ಹೀಗೆ ಪುಟ್ಟಿ ಪುಟ್ಟಿ
ಘನ್ನ ಬಂಧನದೊಳಗಿನ್ನು ಬೆಳೆದೆನಯ್ಯಾ
ಎನ್ನದಾವುದೊ ಜಾತಿ ಎನ್ನದಾವದು ಕುಲವೊ
ಎನ್ನದಾವದೊ ಗೋತ್ರ ಎನ್ನವರಾವರು
ಇನ್ನಾರದು ಪಿಂಡ ಇನ್ನಾರಿಗುದಿಸಿತು
ಬನ್ನ ಭವದೊಳು ಇನ್ನು ಹೊರಳಿ ಹೊರಳಿ
ಮುನ್ನ ನೆಲಿಯ ದಾರಿಯನ್ನುಗಾಣದೆ ಪೋದೆ
ಚಿನ್ನುಮಯ ಮೂರ್ತಿ ಗೋಪಾಲವಿಟ್ಠಲ
ಹುಣ್ಣು ಹುಣ್ಣಾದೆನು ಜನನ ಮರಣಗಳಿಂದ ॥ 2 ॥
ತ್ರಿಪುಟತಾಳ
ಜನುಮ ಜನುಮದಲ್ಲಿ ಅನುವಾಗಿ ಉಂಡಂಥ
ಜನನಿಯ ಮೊಲೆಪಾಲು ಎಣಿಕೆಮಾಡಲು ಇನ್ನು
ಘನವಾದವಯ್ಯಾ ಕ್ಷೀರವನಧಿಗಿಮ್ಮಡಿ
ಎಣಿಸಲೊಶವೆ ಎಲವು ಚರ್ಮ ರಕ್ತ ಮಾಂಸ
ಕೊನೆಗಾಣದಾದೆ ಮೇರುವಿಗಿನ್ನಾಲ್ಕು ಮಡಿ
ಕ್ಷಣ ಕ್ಷಣಕೆ ದೇಹ ಪರಿಮಾಣದ ಚರ್ಮ
ಅನುವರಿತು ನೋಡಾ ಅವನಿಗಿಂದೈದು ಮಡಿ
ದಣಿದೆನಯ್ಯಾ ನಾನಾ ಬವಣೆಯಿಂದಲಿನ್ನು
ಕೊನೆಗಾಣೆ ಕೊನೆಗಾಣೆ ಇನ್ನಿತು ಇಷ್ಟಿಷ್ಟೆಂದು
ಕುಣಿಯ ವಳಗೆ ಬಿದ್ದು ಕುರುಡನಂತಲಿ ಇನ್ನು
ಒಣಗಿ ಬಾಯಾರಿ ಆಲ್ಪರಿದೆನು ಅನುಗೆಟ್ಟು
ಕನಸಿನಾಗಿನ ಗಂಟಿನಂತೆ ಈ ಕಾಯವು
ಎನಗೆ ನಂಬಿಗೆಯಿಲ್ಲ ಎನ್ನವ ಮೊದಲಿಲ್ಲ
ಅನುಗೆಟ್ಟಿ ಅನುಗೆಟ್ಟಿ ಅನಿಮಿತ್ಯ ಬಾಂಧವ
ತನು ಸಂಬಂಧಿಗಳು ತಮ್ಮತ್ತಲೆಳವರು
ನಿನಗೆ ನಾ ಮೊರೆಯಿಟ್ಟೆ ಗೋಪಾಲವಿಟ್ಠಲ
ನಿನಗೆ ನಾ ನಿನ್ನವನಾಗದಾದೆ ॥ 3 ॥
ಅಟ್ಟತಾಳ
ಸುತನಾದೆ ನಾ ಮಾತಾಪಿತರಿಗೆ ಗತಿಯನ್ನು
ಪತಿಯಾದೆ ನಾ ನೋಡು ಸತಿಯಳಿಗೆ ಇನ್ನು
ಪಿತನಾದೆ ನಾ ಎನ್ನ ಸುತರಿಗೆಲ್ಲ ಇನ್ನು
ಇತರ ಜನರಿಗೆ ಬಂಧುಬಳಗವಾದೆ
ಮತಿಗೇಡಿ ನಾ ನಿನ್ನ ಗತಿಗೆ ದಾವದು ಅದೆ
ಪಥ ತಿಳಿಯದು ಜಗತ್ಪತಿ ನಿನ್ನ ಪೊಂದೋದು
ಪತಿತಪಾವನ ರಂಗ ಗೋಪಾಲವಿಟ್ಠಲ
ಹಿತದಿಂದಲಿ ನಿನ್ನ ಸತತ ಭೃತ್ಯನೆನಿಸೊ ॥ 4 ॥
ಆದಿತಾಳ
ನಿನ್ನವರಾ ಸೇವೆ ದೊರಕೋದು ಆವಾಗಲೆ ನಾ
ನಿನ್ನವನಾಗುವೆ ಆವದು ತೊಪ್ಪಲು
ಸಾವದು ತಪ್ಪದು ಆವಲ್ಲಿ ಇದ್ದರು
ಕಾವುವ ನೀನಯ್ಯ ಆವದು ವಲ್ಲೆ
ನಿನ್ನವನೆಂದೆನಿಸೆನ್ನ
ಗೋವಳರೊಡಿಯ ಗೋಪಾಲವಿಟ್ಠಲರೇಯಾ
ಭಾವಶುದ್ಧ ನೀ ಎಂಬೊ ಭಕುತಿಯ ನೀಯಿನ್ನು ॥ 5 ॥
ಜತೆ
ಸಂಸಾರವೆಂಬಂಥ ಶರಧಿಯ ದಾಟಲಿ
ಕಂಸಾರಿ ನಿನ್ನ ಪಾದಕ ನೀ ಗತಿ ಎನ್ನು ॥
****