Audio by Mrs. Nandini Sripad
ರಾಗ ರೀತಿಗೌಳ
ಧ್ರುವತಾಳ
ಉತ್ತಮರಿಗೆ ಒಂದು ತುತ್ತನ್ನ ದಾನದಿಂದ
ಇತ್ತವನ ಕುಲ ಹತ್ತು ಹತ್ತು ಒಂದು ಸ -
ಪುತ ಗೋತ್ರಾಖಿಳ ಹತ್ತಿ ಹೊಂದಿದವರು
ಸುತ್ತಣ ಪರಿವಾರ ಎತ್ತಲೆತ್ತ ಉಳ್ಳವರು
ಅತ್ಯಂತವಾದ ಪಾಪ ಮೊತ್ತದಾಸಕ್ತರಾಗಿ
ಮೃತ್ಯುಲೋಕದಲ್ಲಿ ಆಪತ್ತು ಬಡುತಲಿರೆ
ಹೆತ್ತ ಜನನಿಯಂತೆ ಎತ್ತಿ ಕೊಂಡೊಯ್ದು ಪುನರಾ -
ವರ್ತಿ ಇಲ್ಲದ ಲೋಕದತ್ತ ಸೇರಿಸುವದು
ಎತ್ತಲು ಸರಿಗಾಣೆ ಕ್ಷುಧಾತುರ್ಯರಾಗಿ ಬಂದ
ಸೋತ್ತಮರಿಗಿತ್ತ ಫಲ ಚಿತ್ತದಲ್ಲಿ ಎಣಿಸೆ
ಹತ್ತಾವತಾರ ಸಿರಿ ವಿಜಯವಿಠ್ಠಲರೇಯನ
ನಿತ್ಯ ಕರುಣ ಪಡೆದು ಸತ್ಯದಲ್ಲಿ ನಡೆದಾ ॥ 1 ॥
ಮಟ್ಟತಾಳ
ಹರಿ ಸರ್ವೋತ್ತಮವೆಂಬೊ ಜ್ಞಾನ
ಮರುತದೇವನ ಮತವೆಂಬೊ ಮತವ
ಹರಿಗುರು ಭಕುತಿ ನಿರಂತರದಲ್ಲಿ
ವಿರಕುತಿಯಾಗಿ ಚರಿಸುವ ಜ್ಞಾನಿಗಳ ಸಂಗದಲ್ಲಿ
ಹರಿಕಥಾ ಶ್ರವಣ ನಿರಮಲ ಮನದಿ
ಎರಗುತಲಿಪ್ಪಾಚರಣಿಯ ಮಾನವನು
ಧರೆಯೊಳಗವನೆ ಪರಮ ಉತ್ತಮನೊ
ಅರಿದೀ ಪರಿಯಲ್ಲಿ ವಿಜಯವಿಠ್ಠಲ ಹರಿಯಾ
ಶರಣನಾಗಲಿ ಬೇಕು ತಾರತಮ್ಯವ ತಿಳಿದು ॥ 2 ॥
ತ್ರಿವಿಡಿತಾಳ
ಬಂದ ಅತಿಥಿಯನ್ನು ತನ್ನಯ ಬಾಗಿಲ
ಮುಂದೆ ಕಾಣುತ್ತಲಿವೆ ನಿಂದು ಎದಿರುಗೊಂಡು
ವಂದಿಸಿ ಕರ ಮುಗಿದು ದ್ವಂದ್ವ ಪಾದಕ್ಕೆರಗಿ
ತಂದೆ ಆವಲ್ಲಿಂದ ದಯಮಾಡಿ ಬಂದಿರಿ ಎಂದೂ
ಒಂದೊಂದು ಮಾತನು ನಂದಾದಿಂದಲಿ ಪೇಳಿ
ತಂದು ಪೀಠವನಿತ್ತು ಚಂದದಿಂದಲಿ ನಡು -
ಮಂದಿರದೊಳಗೆ ವಸುಂಧರ ವಿಭುದನ್ನ
ಮಂದಹಾಸದಲಿ ನಯದಿಂದ ಕುಳ್ಳಿರಿಸಿ ಜಲ -
ದಿಂದ ಚರಣ ತೊಳದಾನಂದಮಯದಿಂದ
ಸಂದೇಹ ಬಿಟ್ಟು ಸೊಬಗಿಂದ ಶಿರದ ಮೇಲೆ
ಬಿಂದು ಮಾತುರ ಜಲ ಬಂಧು ಬಳಗ ಕೂಡಿ
ಕುಂದದೆ ಧರಿಸಿ ತಾ ಮಂದಿರದಲ್ಲಿ ಚಲ್ಲಿ
ಒಂದೊಂದು ಪರಿಯಲ್ಲಿ ಪೊಂದಿ ಸುಖದಲ್ಲಿರು
ಮಂದರಧರ ನಮ್ಮ ವಿಜಯವಿಠ್ಠಲ ಹರಿಯ
ಎಂದಿಗೆಂದಿಗೆ ಬಿಡದೆ ವಂದಿಸು ಮನದಲ್ಲಿ ॥ 3 ॥
ಅಟ್ಟತಾಳ
ಜೀವೇಶ ಒಂದೆಂಬೊ ಪೇಳುವ ಪಾಪಿಗೆ
ಶ್ರೀವೈಷ್ಣವೋತ್ತಮ ಕರದು ತುತ್ತನ್ನವ
ಪಾವನನಾಗುವೆನೆಂದು ಇತ್ತರೆ ಅದು
ಪಾವಕನೊಳು ಹಾಕಿದಂತೆ ಬಯಲಾಗಿ
ಯಾವತ್ತು ಪುಣ್ಯವು ನಾಶವಾಗೋದು
ಆವಾವ ಕಾಲಕ್ಕೆ ಎಳ್ಳಿನಿತು ಕಾಣೆ
ದೇವೇಶ ವಿಜಯವಿಠ್ಠಲ ಜಗದೊಡಿಯ ರಾ -
ಜೀವನೇತ್ರ ಪದದಾವರೆ ಭಜಿಪಂಗೆ
ಕೋವಿದನಾಗಿ ಇತ್ತವಗೆ ಸರಿಗಾಣೆ ॥ 4 ॥
ಆದಿತಾಳ
ಅನ್ನಯಿತ್ತವನ ಭವನ್ನವಾಗಿ ತೋರೋದು
ಅನ್ನವೀಯದಿರೆ ಕಾನನ್ನಕ್ಕೆ ಸರಿಯೆನ್ನಿ
ಅನ್ನದಿಂದಲಿ ಬಂದ ಘನ್ನ ದುರಿತ ಪರಿಹರ
ಅನ್ನದಿಂದಲಿ ಸರ್ವ ಪುಣ್ಯ ಫಲಿಸುವದು
ಅನ್ನ ಇತ್ತವನ ಕೀರ್ತಿ ಉನ್ನತವಾಗಿ ತ್ರಿಭು -
ವನ್ನ ದೊಳಗೆ ತುಂಬಿ ಚನ್ನಾಗಿ ಪೊಳೆವದಯ್ಯಾ
ಅನ್ನ ದಾನಕ್ಕಿಂತ ಇನ್ನು ಮಿಗಿಲೆ ಇಲ್ಲಾ
ಹೊನ್ನು ಹಣಾದಿ ಕೊಡಲು ಗಣ್ಯ ಅನ್ನದಾನಕ್ಕೆ
ಅನಂತಕಾಲ ಮಖವನ್ನು ಮಾಡಲು ವಿಪ್ರ
ಗುಣಿಸಿದುದಕ್ಕೆ ಸರಿಯನ್ನಬಹುದೋ ತಿಳಿದು
ಅನಂತ ಮೂರುತಿ ವಿಜಯವಿಠ್ಠಲರೇಯ
ತನ್ನವನಿವನೆಂದು ಮನ್ನಿಸಿ ಸಲಹುವ ॥ 5 ॥
ಜತೆ
ಅತಿಥಿ ಅಭ್ಯಾಗತರ ಸಂತೋಷ ಬಡಿಸಲು
ಸತತ ಪೊಳಿವ ವಿಜಯವಿಠ್ಠಲ ಮನಸಿನೊಳು ॥
*********