ಶ್ರೀನಿವಾಸ ಕಲ್ಯಾಣ
ಮಂಗಳಂ ಜಯ ಮಂಗಳಂ ||
ಸರಸದಿ ಬ್ಯಾಟೆಗೆ ಹೊರಟವಗೆ
ಸರಸಿಜಾಕ್ಷಿಯಳ ಕಂಡವಗೆ
ಮರುಳಾಟದಿ ತಾ ಪರವಶನಾಗಿ ಕೊರವಿವೇಶ ಧರಿಸಿರುವವಗೆ ||
ಗಗನರಾಜನ ಪುರಕ್ಹೋದವಗೆ ಬಗೆಬಗೆ ನುಡಿಗಳ ನುಡಿದವಗೆ ಅಗೆವಾಸಿಗೆ ನಿನ್ನ ಮಗಳನು ಕೊಡು ಎಂದು ಗಗನ ರಾಜನ ಸತಿಗ್ಹೇಳ್ದವಗೆ ||
ತನ್ನ ಕಾರ್ಯ ತಾ ಮಾಡಿದವಗೆ ಇನ್ನೊಬ್ಬರ ಹೆಸರ್ಹೇಳ್ದವಗೆ ಮುನ್ನ ಮದುವೆ ನಿಶ್ಚಯವಾಗಿರಲೂ ತನ್ನ ಬಳಗ ಕರೆಸಿರುವವಗೆ ||
ಎತ್ತಿಲಿನಿಬ್ಬಣ ಹೊರಟವಗೆ ನಿತ್ಯ ತೃಪ್ತನಾಗಿರುವವಗೆ ಉತ್ತರಾಣಿಯ ಅನ್ನವನುಂಡು ತೃಪ್ತನಾಗಿ ತೇಗಿರುವವಗೆ ||
ಒದಗಿ ಮುಹೂರ್ತಕೆ ಬಂದವಗೆ ಸದಯ ಹೃದಯನಾಗಿರುವವಗೆ ಮುದದಿಂದಲಿ ಶ್ರೀಪದುಮಾವತಿಯಳ ಮದುವೆ ಮಾಡಿಕೊಂಡ ಮದುಮಗಗೆ ||
ಕಾಂತೆಯಿಂದ ಸಹಿತಾದವಗೆ ಸಂತೋಷದಿ ಕುಳಿತಿರುವವಗೆ ಸಂತತ ಶ್ರೀಮದನಂತಾದ್ರೀಶಗೆ ಶಾಂತ ಮೂರುತಿ ಸರ್ವೋತ್ತಮಗೆ ||
*************