..
ರಾಮ ನಾಮಕೆ ಸಮ ನಾಮವುಂಟೆ ಜಗದೀ
ಪಾಮರರಘನಾಶಕೆ ಪ
ಕಾಮಾರಿಯು ತನ್ನ ಭಾಮೆಗೆ ಬೋಧಿಸಿದೀ
ನಾಮಕೆ ಸಮವುಂಟೇ ಅ.ಪ
ಕೌಸಲ್ಯಾದಶರಥರಿಂದವತರಿಸೀ
ಕೋಸಲಪತಿಯೆನಿಸೀ
ವಾಸವಾದಿ ದಿವಿಜರ ಪಾಲಿಸಲೆಳೆಸೀ
ಅಸುರೆಯ ಸಂಹರಿಸೀ
ಭಾಸುರಾಂಗ ಮುನಿಯಾಗದೊಳುಪಕರಿಸೀ
ದುರುಳರಪಹರಿಸೀ
ಶ್ರೀ ಸೀತಾಕರಪಲ್ಲವವನುಗ್ರಹಿಸೀ
ಮುನಿ ಸತಿಯನುದ್ಧರಿಸಿದ 1
ಪಿತನ ಸತ್ಯವಾಕ್ಯವ ಪಾಲಿಸಲೆಳೆಸೀ
ಸತಿಯನುಜರ್ವೆರೆಸೀ
ಹಿತದಿಂ ಮುನಿ ವೇಷದೊಳಡವಿಗೆಗಮಿಸೀ
ದಿತಿಜರ ಕುಲವಳಿಸೀ
ಮತಿಮಾನ್ ವಾಯುಕುಮಾರನ ಸ್ವೀಕರಿಸಿ
ಸತಿಯಳ ನೆಲೆಯರಸೀ
ಕ್ಷಿತಿಧರ ಕುಲದಿಂ ಶರಧಿಯನುತ್ತರಿಸೀ
ದಿತಿಜಾಂತಕನೆನಿಸಿದ 2
ರಾವಣ ಘಟಕರ್ಣಾದ್ಯರ ಸಂಹರಿಸೀ
ಶರಣನ ಪತಿಕರಿಸೀ
ಪಾವಕನೊಳು ಸತಿಶೀಲವನುದ್ಧರಿಸೀ
ನರನಾಟಕ ನಡೆಸೀ
ಪಾವಕನಿಂ ಭರತನ ಪ್ರಾಣವನುಳಿಸೀ
ಕರುಣಾನಿಧಿಯೆನಿಸೀ
ದೇವರದೇವ ರಘುರಾಮವಿಠಲನೆನಿಸೀ ಜನವನು ಪಾಲಿಸಿದಾ 3
****