..
kruti by ಲಕ್ಷ್ಮೀನಾರಯಣರಾಯರು Lakshminarayanaru
ವಿಧಿ ನಿಷೇಧವು ನಿನ್ನ ಸ್ಮರಣೆ ವಿಸ್ಮರಣೆಯ-
ಲ್ಲದಲರಿಯರೇನೊಂದು ಹರಿಭಕ್ತರು ಪ
ಮಿಂದದ್ದೆ ಗಂಗಾದಿ ತೀರ್ಥಗಳು ಸಾಧುಗಳು
ಬಂದದ್ದೆ ಪುಣ್ಯ ಕಾಲವುಗಳು ಅವರು
ನಿಂದದ್ದೆ ಗಯ ವಾರಣಾಸಿ ಕುರುಕ್ಷೇತ್ರಗಳು
ಬಂದು ಪೋಗಲು ಅದುವೆ ರಾಜಬೀದಿ 1
ಕಂಡು ಕಂಡದ್ದೆಲ್ಲ ಕಮಲನಾಭನ ಮೂರ್ತಿ
ಮಂಡಿಸಿದ ಶಯನ ದಂಡಪ್ರಣಾಮ
ತಂಡತಂಡದ ಕ್ರಿಯೆಗಳೆಲ್ಲ ಹರಿ ಪೂಜೆಗಳು
ಮಂಡೆ ಬಾಗಿಸಿ ಸಮಿಪ ಶರಣ ಜನಕೆ 2
ನಡೆವ ನಡೆಯೆಲ್ಲ ಲಕ್ಷ ಪ್ರದಕ್ಷಿಣೆ ಮತ್ತೆ
ನುಡಿವ ನುಡಿಯೆಲ್ಲ ಗಾಯಿತ್ರಿ ಮಂತ್ರ
ಒಡೆಯ ಶ್ರೀಕಾಂತನ್ನ ಅಡಿಗಡಿಗೆ ಸ್ಮರಿಸುತಿಹ
ದೃಢ ಪ್ರಜ್ಞರೇಂಗೈಯ್ಯಲದುವೆ ಮರ್ಯಾದೆ 3
***