Showing posts with label ದುರ್ಮತವನು ನೆಚ್ಚಿ vijaya vittala ankita suladi ಮಧ್ವಮತ ಸುಳಾದಿ DURMATAVANU NECHCHI MADHWAMATA SULADI. Show all posts
Showing posts with label ದುರ್ಮತವನು ನೆಚ್ಚಿ vijaya vittala ankita suladi ಮಧ್ವಮತ ಸುಳಾದಿ DURMATAVANU NECHCHI MADHWAMATA SULADI. Show all posts

Sunday 8 December 2019

ದುರ್ಮತವನು ನೆಚ್ಚಿ vijaya vittala ankita suladi ಮಧ್ವಮತ ಸುಳಾದಿ ಮಧ್ವಾವತಾರ DURMATAVANU NECHCHI MADHWAMATA SULADI MADHWAVATARA


Audio by Mrs. Nandini Sripad

ದುರ್ಮತವನು ನೆಚ್ಚಿ  ಮಧ್ವಮತ ಸುಳಾದಿ ಮಧ್ವಾವತಾರ
ಶ್ರೀವಿಜಯದಾಸಾರ್ಯ ವಿರಚಿತ 

 ಶ್ರೀಮಧ್ವಾವತಾರ ಮಹಿಮೆ ಚರಿತ್ರೆ ಸುಳಾದಿ 

 ರಾಗ ಕಾನಡ 

 ಧ್ರುವತಾಳ 

ದುರ್ಮತವನು ನೆಚ್ಚಿ ಕರ್ಮಕ್ಕೆ ಬೀಳದಿರು 
ನಿರ್ಮಾಣವನು ವೇದವ್ಯಾಸ ದೇವನು ದು -
ಷ್ಕರ್ಮಿಗಳಿಗೆ ನಿತ್ಯ ತಮವಾಗಲಿಬೇಕೆಂದು
ಪೇರ್ಮೆಯಿಂದಲಿ ರಚಿಸಿ ತಾಮಸ ಪುರಾಣ
ದುರ್ಮತಿಗಳಿಗೆ ರುಚಿಕರವೆನಿಸಿದಾರು
ಧರ್ಮಸಾಧನವೆಂದು ಮಾಯಿಮತವ ಭಜಿಸೆ
ಧರ್ಮರಾಯ ಅವರ ಚರ್ಮ ಸುಲಿವನು
ದುರ್ಮನುಷ ನಾಮ ವಿಜಯವಿಟ್ಠಲಗೆ ಈ
ಕರ್ಮವೊಪ್ಪಿಸಸಲ್ಲಾ ವಿಬುಧರ ಮತವಂತಾ ॥ 1 ॥ 

 ಮಟ್ಟತಾಳ 

ಚರಣಡಿ ಎಂದೆಂಬೊ ಪುರದೊಳಗೆ ಸಂ -
ಕರ ಜನಿಸಿದ್ದ ಪರಿಯನು ಎಲ್ಲ
ಅರಿತದ್ದೆ ಕಾಣೊ ಮರೆಪರದೆ ಇಲ್ಲ
ಅರಿವನು ನಿನ್ನ ಗುರುವಿನ ಜನನ
ಸುರರೊಡಿಯಾ ಭಾಸ್ಕರದ್ಯುತಿ ನಾಮ ವಿಜಯವಿಟ್ಠಲಗೆ 
ಶರಣೆಂದೆನ್ನದಲೆ ವರಲುವಾ ನಿತ್ಯಾ ॥ 2 ॥ 

 ರೂಪಕತಾಳ 

ಗುರುವಾರು ಸಂಕರಗೆ ಕರದು ಉಪದೇಶವ -
ನರುಹಿದನಾವನೊ ಪೇಳೋ ಮುಗ್ಧಾ
ಹರುವ ನದಿಯೊಳು ಈಸಿ ಪೋಗುತಿರಲು
ವರ ಯಜ್ಞೋಪವೀತ ಜಿಗುಳಿ ಪೋಗೆ
ಜರಿದು ಗ್ರಹಸ್ಥಾಶ್ರಮ ಸನ್ನ್ಯಾಸಾಶ್ರಮಕೆ ಮನ
ಎರಗಿ ನಮ್ಮ ಸತ್ಯಪ್ರಾಜ್ಞತೀರ್ಥರ ಕೇಳೆ
ಪರಿಹಾರವಾದ ಉತ್ತರವ ಕೊಡಲು ತಾನೆ
ದುರುಳ ಮತಿಯಲಿ ಚತುರಾಶ್ರಮವ ಕೊಂಡಾ
ಹಿರಿಯರ ಮತವಿದು ಪುಶಿಯಲ್ಲ ಮಾತು ಚ -
ತುರರ್ಗತ ವಿಜಯವಿಟ್ಠಲನೆ ಸಾಕ್ಷಿ ॥ 3 ॥ 

 ಝಂಪೆತಾಳ 

ಕಲಿಸಂಕರನ ಪುಟ್ಟು ಕುಂಬಳಕಾಯಿ ಗುರುತು
ಕಲಿಯುಗದೊಳಗೆ ಸೋಹಂ ಎಂದು ತಿರುಗಿ
ಸಲೆ ಸುಮಾರ್ಗವ ಬಿಡಿಸಿ ಮೋಹಕ ಶಾಸ್ತ್ರವನು
ಇಳಿಯೊಳಗೆ ಸರ್ವ ಮಿಥ್ಯಾವ ತುಂಬಿದ
ಕುಲವೆಲ್ಲ ಜಾತಿ ಸಂಕರವಾಗಿ ಸ್ವಧರ್ಮ -
ವಳಿದು ಸುರರಿಗೆ ಹವಿಸ್ಸು ಇಲ್ಲದಿರಲು
ಜಲಜ ಸಂಭವಗೆ ಸುಮನಸರು ಮೊರೆಯಿಡಲಾಗಿ
ಲಲಿತದಿಂದಲಿ ಹರಿಗೆ ಬಿನ್ನೈಸಲು
ಸುಲಭ ಮಹಾಸಿರಿ ವಿಜಯವಿಟ್ಠಲನು 
ಒಲಿದು ಜಯತನುಜಗೆ ಕರದು ನೇಮಿಸಿದಾ ॥ 4 ॥ 

 ತ್ರಿವಿಡಿತಾಳ 

ಹುಟ್ಟಿದನು ವಾಸುದೇವನೆಂಬೊ ನಾಮದಲಿ
ಸೃಷ್ಟಿಗೆ ಮಧ್ವಮುನಿ ಎನಿಸಿಕೊಂಡು
ಕುಟ್ಟೀದಾರದ್ವೈತ ಮತ ಕೋಲಾಹಲ ಮಾಡಿ
ವೈಷ್ಣವ ಮತವನು ಉದ್ಧರಿಸಿ
ವಿಷ್ಣು ಸರ್ವೋತ್ತಮನಹುದೆಂದು ಸ್ಥಾಪಿಸಿ
ಶಿಷ್ಟರಿಗೆ ವೇದಸುಧೆಯ ಕರೆದೂ
ವೈಷ್ಣವಾಚಾರ್ಯರ ಮತವಿಡಿದು ಬದುಕೋದು
ಪುಷ್ಟಿನಾಮ ವಿಜಯವಿಟ್ಠಲಗೆ ಬಲು ಪ್ರೀತಿ ॥ 5 ॥ 

 ಅಟ್ಟತಾಳ 

ಮಾಯಿಯ ಮನೆ ಮುಂದೆ ಮದಕರಿಯಾಗಿದ್ದು
ಆಯುಷ್ಯಾಭಿವೃದ್ಧಿ ಸುಖ ಬಡುವದಕಿಂತಾ
ನಾಯಿಯ ಮರಿಯಾಗಿ ಮಧ್ವಮತದವರ
ಕಾಯಿದು ಮನೆ ಮುಂದೆ ಇಪ್ಪ ಕ್ಷಣವೆ ಲೇಸು
ಭೂಯ್ಯೋಮ ಪಾತಾಳದೊಳಗಿದು ಸಿದ್ಧವು
ರಾಯ ಧರ್ಮಜ ಮಿಕ್ಕ ಹರಿದಾಸರ ನೋಡೆ
ಶ್ರೀಯರಸನೇ ಪರನೆಂದು ಪೋದರು ಗತಿಗೆ
ವಾಯುಮತವ ಬಿಟ್ಟು ಅನ್ಯಮತವ ಸಾರೆ
ತಾಯಿಯ ಜರಿದು ಶ್ವಬಚಿಗೆರಗಿದಂತೆ
ನೀಯಂತೆ ನಾಮ ಶ್ರೀವಿಜಯವಿಟ್ಠಲಗೆ 
ಮಾಯಿ ಮತದವರು ಆಗರು ಕಾಣೋ ॥ 6 ॥ 

 ಆದಿತಾಳ 

ಹನುಮಾವತಾರಕ್ಕೆ ಕಾಲಯಮ ಎನಿಸಿದಾ 
ಮಣಿಮಾನಾಸುರನಾದಾ ಭೀಮಾವತಾರಕ್ಕೆ
ಮುನಿ ಮಧ್ವರಾಯನಾಗೆ ಭಣಗು ಸಂಕರನಾದಾ
ಜನಿಸಿದನು ವೈರವನ್ನು ಜನುಮ ಮೂರರಲ್ಲಿ ಬಿಡದೆ
ಅನಿಲ ದೇವನ ಕೂಡ ಸೆಣಿಸಿ ಸಂಕಟ ಬಟ್ಟು
ಅನುವ ಕಾಣದಲೆ ತಮಸಿನಲ್ಲೀಗ ಬಳಲುತಿಪ್ಪಾ
ಫಣನಾಮ ವಿಜಯವಿಟ್ಠಲ ಹನುಮನ ಮತದಂತೆ
ಮನುಷ್ಯೋತ್ತಮ ಕಡೆಮೊದಲು ಮನದಂತೆ ಫಲವೀವಾ ॥ 7 ॥ 

 ಜತೆ 

ಪ್ರಾಣಗತಿ ಬಂದರು ಮಧ್ವಮತ ಬಿಡದಿರಿ
ಪ್ರಾಣಧೃತುನಾಮ ನಮ್ಮ ವಿಜಯವಿಟ್ಠಲಗರ್ಪಿಸೊ ॥
********
 

 ಲಘುಟಿಪ್ಪಣಿ : 
 ಹರಿದಾಸರತ್ನಂ ಶ್ರೀಗೋಪಾಲದಾಸರು 

 ಧ್ರುವತಾಳದ ನುಡಿ : 

 ತಾಮಸಪುರಾಣ = ಬ್ರಹ್ಮಾಂಡ , ಲಿಂಗ, ಬ್ರಹ್ಮ ವೈವರ್ತಕ, ಮಾರ್ಕಂಡೇಯ, ಬ್ರಹ್ಮ , ಆದಿತ್ಯ ಪುರಾಣ ಇವು ಆರು ತಾಮಸಪುರಾಣಗಳು ;
 ಧರ್ಮರಾಯ = ಕೇವಲ 'ಯಮ' ರೂಪದಿಂದಷ್ಟೇ ಅಲ್ಲದೆ 'ಧರ್ಮ' ರೂಪದಿಂದಲೂ ; 

 ಮಟ್ಟತಾಳದ ನುಡಿ : 

 ವರಲುವ ನಿತ್ಯ = ನಿತ್ಯದಲ್ಲಿಯೂ ದುಃಖದಿಂದ ತಮಸ್ಸಿನಲ್ಲಿ ಸಂಕಟಪಡುತ್ತಾನೆ ;
 ದುರ್ಮನುಷ = (ದುರ್ಮರ್ಷಣ - ವಿ ಸ ನಾ 205) ಯಾರಿಂದಲೂ ಎದುರಿಸಲು ಅಶಕ್ಯನಾದವನು ;
 ಭಾಸ್ಕರ ದ್ಯುತಿ = (ವಿ ಸ ನಾ 282) = ಅನಂತ ಸೂರ್ಯರಂತೆ ಪ್ರಕಾಶವುಳ್ಳವನು ; 

 ರೂಪಕತಾಳದ ನುಡಿ : 

 ಜಿಗುಳಿ ಪೋಗೆ = ಆಚೆ ದಡ ಸೇರಲು ನದಿಯಲ್ಲಿ ಈಜುತ್ತಿದ್ದಾಗ , ಪ್ರವಾಹದ ವೇಗಕ್ಕೆ ಸಿಕ್ಕಿ ಯಜ್ಞೋಪವೀತವು ಮೈಯಿಂದ ಕಳಚಿ ಬಿದ್ದು ಪ್ರವಾಹದೊಂದಿಗೆ ಹೊಡೆದುಕೊಂಡು ಹೋಗಲು ;
 ಹಿರಿಯರ ಮತವಿದು = ಶ್ರೀಮನ್ನಾರಾಯಣ ಪಂಡಿತಾಚಾರ್ಯರ ಅಭಿಪ್ರಾಯವಿದು ; 

 ಝಂಪೆತಾಳದ ನುಡಿ : 

ಪುರುಷೋತ್ತಮ ಭಾರತೀ ವಿರಚಿತ 'ಶಂಕರವಿಜಯ ಸಂಗ್ರಹ' ಪ್ರಕಾರ - ವಿಧವೆಯಾಗಿದ್ದ ಶಿವಭಕ್ತಳಿಗೆ ಯತಿರೂಪೀ ಶಿವನು ಕಾಲಟೀ ಗ್ರಾಮದಲ್ಲಿ , ಒಂದು ಕುಂಬಳಬೀಜವನ್ನು ಕೊಟ್ಟು ಅದನ್ನು ನೆಟ್ಟು ಬೆಳೆಸಿದಾಗ ಬಿಡುವ ಕುಂಬಳಕಾಯಿ ಪಕ್ವವಾಗಿ ಕೆಳಗೆ ಬಿದ್ದಾಗ , ಬಾಲಕನು ಅದರಿಂದ ದೃಷ್ಟಿ ಗೋಚರನಾಗುವೆನೆಂದು ಹೇಳಿದ್ದರಿಂದ.... 

 ಜಯತನುಜಗೆ = ಸಂಕರ್ಷಣ ರೂಪೀ ಶ್ರೀಹರಿಯಿಂದ ' ಜಯಾ ' ನಾಮಕ ಶ್ರೀಮಹಾಲಕ್ಷ್ಮೀದೇವಿಯರಲ್ಲಿ ಜನಿಸಿದ ಶ್ರೀವಾಯುದೇವರಿಗೆ ;
 ಚತುರರ್ಗತ = (ವಿ ಸ ನಾ 767) ನಾಲ್ಕು ವೇದಗಳಿಂದಲೂ ತಿಳಿಯಲ್ಪಡುವವನು ;
 ಸುಲಭಃ = (ವಿ ಸ ನಾ 817) ಭಕ್ತರಿಂದ ಸುಲಭವಾಗಿ ಪ್ರಾಪ್ಯನು ; 

 ಅಟ್ಟತಾಳದ ನುಡಿ : 

 ರಾಯಧರ್ಮಜ = ಶ್ರೀಭೀಮಸೇನದೇವರ ಉಪದೇಶದಿಂದ - ಧರ್ಮರಾಜಾದಿಗಳು ;
 ಶ್ವಬಚಿ = ಚಂಡಾಲಸ್ತ್ರೀ ;
 ಆಗರು = (ಅನುಗ್ರಹ ಮಾಡಲು) ಒಪ್ಪಿಗೆಯಾಗರು ;
 ಪುಷ್ಟಿ = (ವಿ ಸ ನಾ 393) ಸರ್ವಗುಣಪರಿಪೂರ್ಣ ;
 ನೀಯಂತೆ = (ನಿಯಂತಾ - ವಿ ಸ ನಾ 864) = ಎಲ್ಲರ ಸ್ವಭಾವ - ಸತ್ತಾಗಳ ನಿಯಮ ; 

 ಆದಿತಾಳದ ನುಡಿ : 

 ಹನುಮಾವತಾರಕೆ ಕಾಲಯಮನೆನಿಸಿದ = ವಾಯುದೇವರು , ಹನುಮಾವತಾರ ಮಾಡಿದ ಸಮಯದಲ್ಲೇ , ಮಣಿಮಂತ ಅಸುರನೂ ಕಾಲಯಮನೆಂಬ ಹೆಸರಿನ ಮಾರೀಚನ ಮಗನಾಗಿ ಜನಿಸಿದ್ದ. ರಾವಣನಿಂದ ಯುದ್ಧದಲ್ಲಿ ಲಕ್ಷ್ಮಣನು ಮೂರ್ಛಿತನಾಗಲು , ಹನುಮಂತನು ಸಂಜೀವಿನಿಯನ್ನು ತರಲು ಹೊರಟಾಗ, ರಾವಣನಿಂದ ಆಜ್ಞಪ್ತನಾದ ಕಾಲಯಮ ಈ ಮೊದಲೇ ಸಂಜೀವಿನಿ ಇರುವ ಸ್ಥಳದಲ್ಲಿದ್ದು , ದಣಿದಿರುವ ಹನುಮಂತನಿಗೆ ಕೊಳದಲ್ಲಿ ನೀರು ಕುಡಿಯಲು ಸೂಚಿಸಿದ. ಆಗ, ಗಂಧರ್ವನೋರ್ವ ಶಾಪದಿಂದ ಮೊಸಳೆಯಾಗಿದ್ದವ ಹನುಮಂತನನ್ನು ಹಿಡಿಯಲು , ಆತನನ್ನು ಕೊಂದು ಶಾಪ ವಿಮೋಚನೆ ಮಾಡಿದಾಗ , ಕಾಲಯಮನು ರಾವಣನಿಂದ ಪ್ರೇರಿತನಾಗಿ, ಸಂಜೀವಿನಿಯನ್ನು ನೀನು ಒಯ್ಯಲು ತಡ ಮಾಡಲು ಅದರಿಂದ ಲಕ್ಷ್ಮಣನು ಬದುಕದಿರಲು ಯೋಜನೆ ಮಾಡಿರುವುದಾಗಿ ತಿಳಿಸಿ ಆತ ತನ್ನ ಲೋಕಕ್ಕೆ ಹೋದ. ಆಗ ಹನುಮಂತ ಕಾಲಯಮನನ್ನು ಕೊಂದು , ಸಕಾಲಕ್ಕೆ ಸಂಜೀವಿನಿಯನ್ನು ಲಂಕೆಗೆ ತಂದು ಲಕ್ಷ್ಮಣನನ್ನು ಬದುಕಿಸಿದ. (ಆಧ್ಯಾತ್ಮ ರಾಮಾಯಣ , ಅಧ್ಯಾಯ 7, ಯುದ್ಧಕಾಂಡ)
 ತಮಸ್ಸಿನಲ್ಲೀಗ = ತಮೋದ್ವಾರದಲ್ಲಿ ಈಗ;
 ಫಣ = (ವಿ ಸ ನಾ 426) ಸರ್ವತ್ರ ವ್ಯಾಪಿಸಿಕೊಂಡಿರುವವನು ;
 ಪ್ರಾಣಧೃತು = (ಪ್ರಾಣಭೃತ್ - ವಿ ಸ ನಾ 901) ಮುಖ್ಯಪ್ರಾಣನನ್ನು ಧರಿಸಿರುವವನು ;

🙏 ಶ್ರೀಕೃಷ್ಣಾರ್ಪಣಮಸ್ತು 🙏
******

for sahitya/lyrics
CLICK

************