ಭಾವಭಕ್ತಿಗೊಲಿವ ತಾಂ ಶ್ರೀಹರಿ ಕಾವ ಕರುಣದಲಿ ಪರೋಪರಿ ಪ
ಕಂದ ಪ್ರಹ್ಲಾದನ ಸದ್ಭಾವಕಾಗಿ ಸಂಧಿಸೊದಗಿ ಬಂದ ನರಸಿಂಹನಾಗಿ ತಂದೆ ತಾಯಿ ಬಂಧು ಸಮಸ್ತವಾಗಿ ಬಂದು ರಕ್ಷಿಸಿದ ಪ್ರತ್ಯಕ್ಷವಾಗಿ 1
ಭಾವದಿಂದ ದ್ರೌಪದಿಗಾಗ್ಯಧ್ಯಕ್ಷ ಠಾವಠಾವಿಲಿ ಕಾಯಿದೆ ಪ್ರತ್ಯಕ್ಷ ಭುವನದೊಳಾಗಿ ಪಾಂಡವಪಕ್ಷ ಜೀವ ಪ್ರಾಣಾಗಿ ಮಾಡಿದ ಸಂರಕ್ಷ 2
ಭಾವದಿಂದಾಗುವ ಭಕ್ತರಾಧೀನ ದೇವೋತ್ತಮದ ಬಿಟ್ಟು ಹಿರಿಯತನ ದಾವದೊಂದೇಕಾಗಿ ತಾಂ ಸಾವಧಾನ ಈವ್ಹಾಭಕ್ತರ ಮನಿಲ್ಯನುದಿನ 3
ಭಾವದಿಂದುದಿಸುವ ಸ್ವಯಂಭಾನು ಭಾವಿಕರಿಗಾಗುವ ಶ್ರಯಧೇನು ಭಾವದಿಂದಾಗುವ ಸಫಲ ತಾನು ಭಾವದಿಂದ ಭಾವ ಪೂರಿಸಿದನು 4
ಭಾವವೆಂಬಂಜನ ಕಣ್ಣಿಲೂಡಿ ಭಾವದಲುಂಬುದನು ಒಡಮೂಡಿ ಭಾವದಿಂದ ಮಹಿಪತಿ ಕೈಯಗೂಡಿ ಜೀವ ಪಾವನ್ನಗೈಸÀುತಿಹ್ಯ ನೋಡಿ 5
***