..
kruti by ಲಕ್ಷ್ಮೀನಾರಯಣರಾಯರು Lakshminarayanaru
ವ್ಯಾಸರಾಜ ಪರಿವ್ರಾಜ ಮಹಾರಾಜ |
ನಮೋ ನಮೋ ಗುರುರಾಜ ಪ
ಭಾಸುರ ಪಂಪಾ ತುಂಗಾ ತೀರವಾಸ | ಪಾಲಿಸೊ ತವದಾಸ ಅ.ಪ.
ರತಿಪತಿ ಜನಕನ ವರ ಶಯ್ಯಾಂಶದಲಿ | ವಾಯ್ವಾವೇಶದಲಿ
ಕೃತಯುಗದೊಳು ದಿತಿ ತನಯನ ಪತ್ನಿಯಲಿ |
ಜನಿಸುತ ಮೋದದಲಿ
ವಿತತನು ವಿಷ್ಣುವು ವಿಶ್ವದೊಳೆನುತಲಿ | ಅತಿಶಯ ಭಕ್ತಿಯಲಿ
ಪಿತಗೆ ತೋರ್ದ ಪ್ರಹ್ಲಾದನೆ ಹಿತದಲ್ಲಿ | ಅವತರಿಸಿದೆ ಇಲ್ಲಿ 1
ಗುರುವರ ಬ್ರಹ್ಮಣ್ಯ ಮುನಿಕರ ಸಂಜಾತ |
ಧರೆಯೊಳಗೆ ಪ್ರಖ್ಯಾತ
ಪರಮಾತ್ಮನ ಪದಶರಣ ವ್ಯಾಸಯೋಗಿ | ಯೆನಿಸುತಲಿ ವಿರಾಗಿ
ತರತಮ ಪಂಚಕ ಪ್ರಭೇದವ ಸ್ಥಾಪಿಸಲು |
ದುರುಳರ ಖಂಡ್ರಿಸಲು
ಪರಿಪರಿ ಶಾಸ್ತ್ರವ ಶ್ರೀ ಪಾದರಾಯರಲಿ | ಓದಿದ್ಯೊ ಭಕ್ತಿಯಲಿ 2
ವಾದಿರಾಜ ವಿಜಯೀಂದ್ರ ಮುನೀಂದ್ರರಿಗೆ |
ಪುರಂದರ ಕನಕರಿಗೆ
ಆದರದಿಂದಲಿ ಬೋಧಿಸಿ ತತ್ವವನು | ಮಾಡಿ ಪುನೀತರನು
ವೇದಶಾಸ್ತ್ರ ತರ್ಕಾದಿ ಗ್ರಂಥಗಳಲಿ | ಕೋವಿದರರಸುತಲಿ
ನೀ ದಯದಿಂದಲಿ ಸೇರಿಸಿ ಪರಿಷತ್ತು | ಭಾವಿಸಿ ವಿದ್ವತ್ತು 3
ಅರ್ಥಿಕಲ್ಪಿತ ವರ ಕಲ್ಪವೃಕ್ಷವಾಗಿ | ನಿತ್ಯದಿ ಮಹಯೋಗಿ
ಪ್ರಥ್ಯರ್ಥಿ ಮದಕರಿ ಪಂಚವಕ್ತ್ರನಾಗಿ | ಪ್ರತ್ಯಕ್ಷದಿ ತಾಗಿ
ತುತ್ತು ಮೂರಾಗಿಸಿ ಅವರ ಗ್ರಂಥಗಳನು |
ಹೊರ ಚೆಲ್ಲುತೆ ನೀನು
ಸ್ತುತ್ಯ ಕೃಷ್ಣ ಭೂಮೀಂದ್ರನ ಕುಹುಯೋಗ | ಪರಿಹರಿಸಿದೆ ಬೇಗ 4
ವ್ಯಾಸಾಂಬುಧಿಯನು ಕಟ್ಟಿ ಖ್ಯಾತನಾಗಿ | ದಾಸರ ಚನ್ನಾಗಿ
ಪೋಷಿಸುತಲಿ ಶ್ರೀ ಶೇಷಗಿರಿಗೆ ಬಂದು | ಶ್ರೀಶನಲ್ಲಿ ನಿಂದು
ಸಾಸಿರ ನಾಮದಿ ಪೂಜಿಸುತಲಿ ಹರುಷ |
ಪಡುತ ಹನ್ನೆರಡು ವರುಷ
ದೇಶ ದೇಶದಲಿ ಆಶುಗಿಯನು ನಿಲಿಸಿ | ಶಿಷ್ಯರಿಗನುಗ್ರಹಿಸಿ 5
ಕಾಶಿ ಗಧಾಧರ ವಾಜಪೇಯಿ ಲಿಂಗ | ಮಿಶ್ರರು ನರಸಿಂಗ
ವಾಸುದೇವ ಪುರಿ ಈಶ್ವರ ಪಂಡಿತರ | ವಾದದಿ ಬಿಗಿವರ
ಜೈಸಿ ತಂದ ಜಯ ಪತ್ರಗಳನು ಮುದದಿ | ಶ್ರೀನಿಧಿಗರ್ಪಿಸಿದಿ
ಶ್ರೀಸತ್ಯಾ ರುಕ್ಮಿಣಿ ವೇಣುಗೋಪಾಲರನು | ಸ್ತುತಿಸಿ ಪಡೆದೆ ನೀನು 6
ಮಾಯವಾದಿಗಳ ಬಾಯಿಗಳನು ಮುಚ್ಚಿ |
ನ್ಯಾಯಾಮೃತ ಬಿಚ್ಚಿ
ಧ್ಯೇಯನು ಸದ್ಗುಣ ಪೂರ್ಣ ಹರಿಯೆಂದೆ |
ಚಂದ್ರಿಕೆಯನು ತಂದೆ
ಆಯದಿ ಬುಧಮನ ತಾಂಡವಾಡುವಂತೆ | ತರ್ಕತಾಂಡವವಿತ್ತೆ
ಕಾಯಜಪಿತ ಶ್ರೀಕಾಂತನ ಸೇವಿಸುತ | ಸುಖಿಸುವೆ ನೀ ಸತತ 7
***