Showing posts with label ಕಚ್ಚಲೆನಗೆ ಕಾಮ ಕ್ರೋಧ gopala vittala ankita suladi KACHCHALENAGE KAAMA KRODHA ಸಾಧನ ಭಾಗ ಸುಳಾದಿ SAADHANA BHAAGA SULADI. Show all posts
Showing posts with label ಕಚ್ಚಲೆನಗೆ ಕಾಮ ಕ್ರೋಧ gopala vittala ankita suladi KACHCHALENAGE KAAMA KRODHA ಸಾಧನ ಭಾಗ ಸುಳಾದಿ SAADHANA BHAAGA SULADI. Show all posts

Monday, 9 December 2019

ಕಚ್ಚಲೆನಗೆ ಕಾಮ ಕ್ರೋಧ gopala vittala ankita suladi KACHCHALENAGE KAAMA KRODHA ಸಾಧನ ಭಾಗ ಸುಳಾದಿ SAADHANA BHAAGA SULADI

Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ  ಸಾಧನ ಭಾಗ ಸುಳಾದಿ 

 ರಾಗ ವಸಂತ 

 ಧ್ರುವತಾಳ 

ಕಚ್ಚಲೆನಗೆ ಕಾಮ ಕ್ರೋಧಗಳೆಂಬ ಕುನ್ನಿಗಳು
ಪೆಚ್ಚಿತಯ್ಯ ಮೋಹ ಮದವೆಂಬೊ ಮತ್ಸರವು
ಅಚ್ಚ ವಿಷಯಗಳೆಂಬೊ ಕಿಚ್ಚಿನೊಳಗೆ ಕೆಡಹಿ
ಹುಚ್ಚು ಗೊಳಿಸುವದಯ್ಯ ಎಚ್ಚರಿಸದಲಿನ್ನು
ನಿಚ್ಚಳ ದಾರಿಯನ್ನು ಮುಚ್ಚಿಸಿ ಕಾಣದಂತೆ
ಮೆಚ್ಚು ಆಯಿತು ಮನವು ಕುತ್ಸಿತ ಭೋಗದಲ್ಲಿ
ಅಚ್ಯುತ ನಿನ್ನ ಪಾದ ಅರ್ಚಕರಾದವರು
ಬೆಚ್ಚಿಸಿದಡಾಯಿತೆ ಉಚಿತವೆ ನಿನಗೆ
ನೆಚ್ಚಿದವನ ಪರರ ಇಚ್ಛೈಸಿದರೆ ಎನ್ನ
ವಾಂಛ್ಯ ನಿನ್ನದೊ ಅಲ್ಲೆ ವತ್ಸಾಸುರ ಮರ್ದನ
ಕಚ್ಚಿನ ಗಡಿಗೆಮ್ಮ ಹುಚ್ಚು ಮೋರೆಯ ಮರಿಗಿ
ಗಚ್ಚಿನ ಪೋತರಾಜ ರಚ್ಚ ಕಟ್ಟೆಯ ಎಲ್ಲಿ
ಬಿಚ್ಚಾಳೆ ಪಲ್ಲಿ ಶಡವಿ ಬನದ ಶಂಕರಿ ಯಃ -
ಕಶ್ಚಿತ ದೇವತೆಗಳ ಇಚ್ಛಿಸಲಿಲ್ಲವಯ್ಯ
ಮತ್ಸ್ಯ ಕೂರ್ಮ ವರಹ ನಿಚ್ಚಳ ನಾರಸಿಂಹ
ಮೆಚ್ಚಿ ಭಕ್ತರ ಬಾಗಿಲು ಕಾಯ್ದ ತ್ರಿವಿಕ್ರಮ
ಹೆಚ್ಚಿನ ಪರಶು ಪಿಡಿದ ಭಾರ್ಗವ ದೇವೋತ್ತಮ
ಸಚ್ಚಿದಾನಂದ ರಾಮ ಕೃಷ್ಣ ಬೌದ್ಧ ಕಲ್ಕಿಯೆ
ಮತ್ಸ್ಯಾವತಾರ ಮೂಲರೂಪ ಐಕ್ಯನಾದ
ಸುಚ್ಚಿತ್ರ ಚರಿತ್ರ ಜ್ಞಾನಾನಂದ ಗುಣಪೂರ್ಣ
ಇಚ್ಛೆ ಮಾತ್ರದಿ ಜಗವ ಸೃಷ್ಟಿ ಸ್ಥಿತಿ ಲಯವ ಮಾಳ್ಪೆ
ಕಶ್ಯಪ ಸುತನಾದ ಭಕ್ತವತ್ಸಲ ದೇವಾ
ಮೆಚ್ಚಿದೆ ನಿಮ್ಮ ಪಾದ  ಗೋಪಾಲವಿಠ್ಠಲ 
ನುಚ್ಚು ಮಾಡಯ್ಯ ಕಾಮಕ್ರೋಧಗಳೆಂಬೊವು ಬೇಗ ॥ 1 ॥

 ಮಠ್ಯತಾಳ 

ಅನಂತ ಸಾಧನೆಯೊಳು ಆನೊಂದು ನಾನರಿಯೆ
ಅನಂತ ದೋಷಗಳು ಮುನ್ನ ಮುನ್ನ ಮಾಡಿದಲ್ಲದೆ
ಇನ್ನು ಅದೆ ಹಾದಿಗೆ ಎನ್ನನ್ನು ಶಳದೊಯಿದು
ಹುಣ್ಣು ಹುಣ್ಣನು ಮಾಡಿ ಎನ್ನ ಕೊಲ್ಲಿಸಿದರೆ
ಇನ್ನಾರಿಗೆ ಪೇಳುವೆ ಘನ್ನ ದಯಾನಿಧೆ 
ಎನ್ನ ಯತ್ನವೇನು ನಿನ್ನ ದಯಾರಸಕೆ 
ಚಿನ್ನನ ಬಾಯಿ ತೆರೆದು ಚೆನ್ನಾಗಿ ಮಾತೆ ಮಣ್ಣು 
ಬೆಣ್ಣೆ ಸಮ ವನ್ನು ಮಾಡಿ ಉಣಿಸೆ
ಇನ್ನು ಅರಿಯದವಳಾವನ್ನು ಒಂದೇ ರೂಪ
ಮುನ್ನ ಲೇನು ಆಗೋ ಪುಣ್ಯ ಪಾಪಂಗಳು
ನಿನ್ನ ಅಧೀನವು ಎನ್ನ ಫಲಾಫಲವು 
ನಿನ್ನ ಸಂಕಲ್ಪಕ್ಕೆ ಇನ್ನು ನಾಶವೀಗಿಲ್ಲ 
ನಿನ್ನ ಇಚ್ಛೆ ಬಂದಂತೆ ಮಾಡೊ ರಂಗ
ಚಿನ್ಮಯ ಮೂರುತಿ ಗೋಪಾಲವಿಠ್ಠಲ 
ಎನ್ನ ಮನೋಕಾರ್ಯವನ್ನೆ ನೀನೆ ಬಲ್ಲಿ ॥ 2 ॥

 ತ್ರಿಪುಟತಾಳ 

ದೇವ ನಿನ್ನಲ್ಲಿ ದ್ವೇಷವ ಮಾಡುವನಿಗೆ 
ಆವ ಕಾಲಕ್ಕೆ ದುಃಖ ಭೋಗವೆ ಸಾಕ್ಷಿ
ಕೋವಿದರು ನಿನ್ನಲ್ಲಿ ಸ್ನೇಹ ಮಾಡುವರೀಗೊ
ಆವದಾದರು ಸುಖವ ತೋರುವದಯ್ಯ
ನೀ ಒಲಿದವರಿಗೆ ಆವಾಗ ಸ್ಮರಣೀಗೆ 
ದೇವ ಇನ್ನು ಬಾಹುವದೆ ಸಾಕ್ಷಿಯು
ಆವ ದೇಶದಲ್ಲಿ ಆವ ದಿಕ್ಕಿನಲ್ಲಿ 
ಆವಾವ ಜನರಲ್ಲಿ ಆವ ಕಾರ್ಯಗಳಲ್ಲಿ 
ಯಾವತ್ತರಲ್ಲಿ ನೀ ವ್ಯಾಪಕನಾಗಿನ್ನು
ಆವಾವ ಬಗೆ ಕಾರ್ಯವ ಮಾಡಿಸುವಂಥ
ಭಾವನೆ ಒಂದೇ ತಿಳಿಸುವದು ನಾ 
ಒಂದೊಲ್ಲೆನೊ ನಿನ್ನ ಸೇವೆ ಮಾತ್ರದಿನ್ನೀಯೊ
ಜೀವರಿಗೆ ಕರ್ಮವ ಅನುಭವ ಉಂಟು 
ದೇವ ನೀ ನಿರ್ಲಿಪ್ತ ಆವಲ್ಲಿದ್ದರನ್ನ
ಆವಾವರಲ್ಲಿ ನೀ ಈವ ವ್ಯಾಪ್ತವು ಇನ್ನು
ದೇವ ನಿನ್ನ ಗುಣಗಳೇವೆ ಮಣಿಗಳು
ಭಾವ ಶುದ್ಧರೀ ಜ್ಞಾನವೆಂಬೊ ತಂತಿಯಲಿ
ಆವಾಗ ಪೋಣಿಸುತಿರುವಂತೆ ಮಾಡೆನ್ನ
ನಾ ಒಲ್ಲೆ ಇನ್ನೊಂದು ಈ ಉಪಾಯಕಿನ್ನು
ಕೋವಿದರ ಮನೆ ದ್ವಾರವು ಕಾವಂತೆ
ಆ ಊಳಿಗನ್ನ ಮಾಡಿ ಆವಲ್ಯಾದರು ಇಡಿಸು
ದೇವಾದಿ ದೇವರೊಡಿಯ ಗೋಪಾಲವಿಠ್ಠಲ 
ಕಾವುವಾತನೆ ನೀನು ಆವಲ್ಲಿದ್ದರೆನ್ನ ॥ 3 ॥

 ಅಟ್ಟತಾಳ 

ಅರಿಯದೆ ನಾ ಇನ್ನು ನರರ ಬೇಡಿದರೆ
ನರರಲ್ಲಿ ನೀ ಇನ್ನು ಪರಿಪೂರ್ಣನಲ್ಲವೆ
ಅರಿಯದೆ ಅನ್ಯದೇವರ ಭಜಿಸಿದರೆ
ಹರಿಯೆ ನೀ ಅಲ್ಲಿನ್ನು ಇರುವದು ಮಿಥ್ಯವೆ
ಇರುವು ನೊಣ ಎಂಬತ್ತು ನಾಲ್ಕು ಲಕ್ಷ 
ಪರಿ ಜೀವರಲ್ಲಿ ಪರಿಪೂರ್ಣಮಯ ನೀನು
ಬರಿದೆ ನಮ್ಮನೇನು ಮರಳು ಗೊಳಿಸಬೇಡ 
ಅರಿದು ನೋಡಲು ಸರ್ವರಂತರದಲ್ಲಿ ನೀನೆ
ಮರಳೆ ಆವಾವ ಜನ್ಮಂಗಳಲಿ ಇನ್ನು
ಪರಿಪರಿ ಜೀವ ರಾರಾಧಿಸಿದದೆಲ್ಲ
ಅರಿದು ಮನದೊಳು ಹರಿಯೆ ನಿನಗಿನ್ನು
ಕರವ ಮುಗಿದು ನಿಂದು ಭರದಿ ಅರ್ಪಿಸುವೆನೊ
ಕರುಣಾಕರ ರಂಗ ಗೋಪಾಲವಿಠ್ಠಲ 
ಶರಣು ಹೊಕ್ಕೆನೊ ಕಾಯೊ ಬಿರಿದುಳ್ಳ ದೈವವೆ ॥ 4 ॥

 ಆದಿತಾಳ 

ಕ್ಷೀರ ಉಕ್ಕಿದರು ನೀರು ಎರೆವರಯ್ಯಾ
ನೀರು ಉಕ್ಕಲು ಹರಗೋಲು ಹಾಕುವರಿನ್ನು
ಈರೇಳು ಧರಿಯೆಲ್ಲ ಮೇರೆ ತಪ್ಪಿ ಬರಲು
ಸೇರಿಸುವರಾರೊ ಧಡಿಗೆ ಮಾರಜನಕ ನೀನೆ
ಭಾರಿ ಭಾರಿಗಿನ್ನು ಭಕ್ತರಿಗೆ ಬಂದ ದೋಷ
ಹಾರಿಸುವುದಕಿನ್ನು ಕಾರಣ ಕರ್ತ ನೀನೆ
ಆರು ನಿನ್ನಂತೆ ಮತ್ತಾರು ಪೊರೆವರಿಲ್ಲ
ಕಾರುಣ್ಯ ಮೂರುತಿ ಕರಿರಾಜವರದ ರಂಗ
ಮಾರುತವಂದ್ಯ ಪಾದ  ಗೋಪಾಲವಿಠ್ಠಲ 
ಅರಿಷಡ್ವರ್ಗಗಳ ದೂರಮಾಡಯ್ಯ ಬೇಗ ॥ 5 ॥

 ಜತೆ 

ಪರಿಮಿತಿ ಇಲ್ಲದ ದುರಿತ ದೋಷ ವನಕೆ
ಪರಶು ನಿನ್ನ ನಾಮ ಗೋಪಾಲವಿಠ್ಠಲ ॥
***********