ಶ್ರೀ *ಪ್ರಸನ್ನವೆಂಕಟದಾಸಾರ್ಯ ವಿರಚಿತ
ಶ್ರೀ ಹರಿಯೇ ಜೀವರ ನಿಯಾಮಕ ಸುಳಾದಿ
( ಮನುಷ್ಯನ ಈ ದೇಹ ಶ್ರೀಹರಿಯ ನಗರ. ಶ್ರೀಹರಿಯ ಚಾರಕರಾದ ತಾತ್ತ್ವಿಕ ದೇವತೆಗಳೆಲ್ಲರೂ ಈ ದೇಹದಲ್ಲಿ ನಿಂತು ಅವನ ಆಜ್ಞೆಯನ್ನು ಪಾಲಿಸುತ್ತಾ ಕಾರ್ಯ ಮಾಡುತ್ತಾರೆ. ತ್ರಿಜಗಜ್ಜೀವರ ಜೀವನೂ , ಜಗನ್ನಿಯಾಮಕನೂ ಆದ ಪ್ರಸನ್ನ ವೆಂಕಟನ ಆಜ್ಞೆಯನ್ನು ಮೀರದೆ ಮನೋಭಿಮಾನಿಗಳೆನಿಸಿದ ಹನ್ನೆರಡು ದೇವತೆಗಳು ದೇವಾಧೀನರಾಗಿ ಕಾರ್ಯ ನಿರ್ವಹಿಸುವರು ಎಂದು ಈ ಸುಳಾದಿಯಲ್ಲಿ ಶಾಸ್ತ್ರದ ಮರ್ಮವನ್ನೇ ದಾಸರು ಉದ್ಘೋಷಿಸಿದ್ದಾರೆ )
ರಾಗ : ಶ್ರೀರಂಜನಿ
ಝಂಪೆತಾಳ
ಹರಿಯ ನಗರವು ಕಳೆವರವು ತಾತ್ವಿಕರೆಲ್ಲ
ಹರಿಯ ಚಾರಕರು ಮನಸ್ತತ್ವದಲಿ ನಿಂದು
ಪರಿ ಪರಿ ವ್ಯಾಪಾರಗಳ ಮಾಡಿಸುವರು ಶ್ರೀ-
ಹರಿಯ ಪ್ರೇರಣೆಯೆಂದು ಹರಿ ಸೇವೆಯೆಂದು
ಸಿರಿ ವೈಷ್ಣವ ಧರ್ಮ ಪ್ರೇರಕ ಪದುಮ ಸಂಭವನು
ವಿರತಿ ಧರ್ಮ ಜ್ಞಾನ ಐಶ್ವರ್ಯ ಭಾರತಯ
ಅರಸ ಪ್ರೇರಕ ಅಹಂಕಾರ ಪ್ರೇರಕರನಾದ
ಗಿರಿಜಾ ರಮಣ ರುದ್ರದೇವ ನಿರುತ
ವರ ಪಂಚರಾತ್ರಾಗಮ ಜ್ಞಾನ ಪ್ರೇರಕನು
ಉರಗಾಧಿಪನು ವೇದೋಕ್ತ ಜ್ಞಾನಗಳ
ಗರುಡ ಪ್ರೇರಿಪ ಪ್ರಸನ್ನವೆಂಕಟೇಶ್ವರನ
ಮರಿಯಾದೆಯಿಂ ಮೀರದಿಪ್ಪರಾಗಿ ॥೧॥
ಮಠ್ಯತಾಳ
ಯಜನಾದಿ ಕರ್ಮಜ್ಞಾನದ ಪ್ರೇರಕ ಇಂದ್ರ ಅಂ-
ಗಜ ಹರಿ ಪ್ರೀತಿಕರ ಕಾಮ್ಯ ಕರ್ಮ ಪ್ರೇರಕನು
ತ್ರಿಜಗಜ್ಜೀವನರ ಜೀವ ಪ್ರಸನ್ವೆಂಕಟ ಪತಿಯು ॥೨॥
ರೂಪಕತಾಳ
ಮನುಮಥಪುತ್ರನಾದನಿರುದ್ಧನು
ಜ್ಞಾನ ಮಂತ್ರ ಪ್ರೇರಕನಾಗಿಹನು
ಸುನೀತಿಶಾಸ್ತ್ರ ಕವಿತ್ವಪ್ರೇರಣೆಗೆ
ಅನಿಮಿಷರ ಗುರು ಕಾರಣನು
ಶ್ರೀನಾಥ ಪ್ರಸನ್ವೆಂಕಟ ಕೃಷ್ಣದೇವನಾ
ಧೀನಾರಾಗ್ಯೊಪ್ಪುವರೆಲ್ಲಸುರಾನ್ವಯ ॥೩॥
ಅಟ್ಟತಾಳ
ನಾನಾ ವೃಕ್ಷ ಕುಸುಮಲತಾ ಪೂರ್ಣೊ-
ಧ್ಯಾನ ರಚನೆ ವಿಪ್ರಾನೀಕ ಪೂಜಾ ಪ್ರೇ-
ರಣೆಗೆ ಹಿಮಧಾಮ ಜಲ-
ದಾನ ಕೂಪವಾರಿ ತಟಾಕಾದಿ ನಿರು
ಮಾಣ ಪ್ರೇರಕನಾದ ವರುಣದೇವನು
ನಾನಾಕಾರಣ ಮುಖ್ಯನು ॥೪॥
ಏಕತಾಳ
ಜನರ ಪಾಲಿಸುವಲ್ಲಿ ಪ್ರೇರಕನು ಸ್ವಾಯಂಭುವ
ಮನು ಮುಖ್ಯರಾದವರು ಪ್ರಸನ್ವೆಂಕಟೇಶನ್ನ
ಅನುಜ್ಞನದಿಂದಾಧಾರದಿಂದಿಹರಾಗಿ ಶರೀರದಿ
ತೃಣ ಮಾತ್ರ ಚಲನೆ ಶಕುತಿ ಯಾರಿಗೆ ಇಲ್ಲಾದ್ಯಂತ ॥೫॥
ಜತೆ
ಮನೋಭಿಮಾನಿಗಳು ಹನ್ನೆರಡು ದೇವಕ್ಕಳು ಪ್ರ -
ಸನ್ವೆಂಕಟಕೃಷ್ಣ ಜಗನ್ನಿಯಾಮಕನು
**********