ಭಾರತೀ ರಮಣ ಸುರವಿನುತ ಚರಣ
ಶಾರದಾ ಪುರ ಶರಣ ಪ
ನೂರು ಯೋಜನಮಿರ್ದವಾರಿಧಿ ಲಂಘಿಸಿ ಬೇಗ
ಧಾರುಣಿ ಸುತೆಯ ಕಂಡು ದೂರ ನಮಿಸಿ
ಸಾರಿ ಮುದ್ರಿಕೆಯ ನಿತ್ತು ತೋರಿರಾಕ್ಷಸಗೆ ಭಯ
ಶ್ರೀರಾಮಗೆ ಬಂದು ಕ್ಷೇಮ ವಾರುತಿಯ ಪೇಳಿದಂಥ 1
ಇಂದು ಕುಲದಲ್ಲಿ ಪಾಂಡುನಂದನನೆನಿಸಿ ಜರಾ
ಸಂಧ ಮುಖರನು ಗದೆಯಿಂದವರಸಿ
ಅಂದುರಣದಲ್ಲಿ ಕರುವೃಂದವ ಮಥಿಸಿ ಆ
ನಂದ ಕಂದನೊಲಿಮೆಯ ಛಂದದಿ ಪಡೆದು ಗುರು 2
ಶ್ರೀಧನಾಜ್ಞೆಯಿಂದ ಪುಟ್ಟಿ ಮೇದಿನಿ ಸುರ ಗೃಹದಿ
ಮೋದ ತೀರ್ಥರೆಂದೆನಿಸಿ ವಾದದಿಂದಲಿ
ವಾದಿ ಮತ್ತ ವಾರಣ ಮೃಗಾಧಿಪರೆನಿಸಿ ಪಂಚ
ಬೇಧ ಬೋಧಿಸುವ ಶಾಸ್ತ್ರ ಸಾದರದಿ ವಿರಚಿಸಿದ 3
ಕಾಲಕಾಲದಲಿ ದ್ವಿಜರಾಲಯದಿ ಬಂದು ನಿನ್ನ
ಬಾಲವನಿತೆರ ಸಹ ಶೇವಿಸುವರು
ಪಾಲಿಕಿ ಉತ್ಸವದಲ್ಲಿ ಶೇರುವದು ಪೌರಜನ
ಪಾಲಿಸಬೇಕಯ್ಯ ಪಾಂಚಾಲಿರಮಣನೆ ನಮೊ 4
ನೀರಜಾಸನಾದಿ ವಂದ್ಯ ಪಾರುಮಾಡೋ ಭವ ಕೂ
ಪಾರ ನಾವಿಕನೆ ಎಂದು ಪ್ರಾರ್ಥಿಸುತಲಿ
ಸೇರಿದ ಸಜ್ಜನರಘ ದೂರಮಾಡಿ ಪೊರೆವಂಥಕಾರ್ಪರ
ನಿಲಯ ಸಿರಿನಾರಸಿಂಹ ನೊಲಿಸಿದ 5
****