ankita ಪಂಡರೀನಾಥವಿಠಲ
ರಾಗ: [ಸರಸಾಂಗಿ] ತಾಳ: [ಆದಿ]
ತೋರಿಸೊ ಚರಣಗಳಾ ಪ
ತೋರಿಸೊ ಚರಣವ ಧೀರ ಶ್ರೀ ರಾಘವೇಂದ್ರ
ಬಾರಿಬಾರಿಗೂ ನಿನ್ನ ಕರೆಯುವೆ ನಾನಯ್ಯ ಅ.ಪ
ಬರಿದೆ ಮೌನವು ಏಕೊ ಮಾರಜನಕನದಾಸ
ಪರಿಪರಿ ಪ್ರಾರ್ಥಿಸೆ ಥರವೇನೊ ಉದಾಸೀನ 1
ಪರಿಪರಿ ಜನಗಳು ಬರಿದೆ ದೂಷಿಪರಯ್ಯ
ಗುರುವೆ ಎನ್ನಯ ದುಃಖ ಹರಿಸಯ್ಯ ನೀ ಬೇಗ 2
ಪರಗತಿಸಾಧನ ಅರಿಯೆನು ನಾನಯ್ಯ
ಕರುಣೆಯ ತೋರುತ್ತ ಪರತತ್ತ್ವ ತಿಳಿಸಯ್ಯ 3
ಕರಗಳಮುಗಿವೆನು ಕಾರುಣ್ಯಸಾಗರ
ತರಳನ ದೈನ್ಯವು ಅರಿಯದೆ ಗುರುವರ್ಯ 4
ಪರಮಾತ್ಮ ಪಂಢರೀನಾಥವಿಠಲನದಾಸ
ಕರುಣೆಯ ಮಾಡಯ್ಯ ವರಹಜೆತೀರಗ 5
***