Audio by Mrs. Nandini Sripad
ಶ್ರೀ ಗುರುಶ್ರೀಶವಿಟ್ಠಲ ದಾಸಾರ್ಯ ವಿರಚಿತ ಶ್ರೀಹರಿಯ ಪ್ರಾರ್ಥನಾ ಸುಳಾದಿ kuntoji dasaru
ರಾಗ ರಂಜಿನಿ
ಧ್ರುವತಾಳ
ನಮೊ ನಮೊ ಶ್ರೀಹರಿಯೆ ನಮೊ ನಮೊ ಎನ್ನ ಧೊರಿಯೇ
ನಮೊ ನಮೊ ಎಂಬೆ ನಿನಗೆ ಸುಮನಸರೊಡಿಯನೆ ನಿನ್ನ ಸಮರೆನಿಪರಿಲ್ಲ
ರಮೆ ಮೊದಲಾದ ಸರ್ವ ಸುರರೊಳಗೆ
ಅಮಿತ ಜೀವರೊಳಗೆ ಅಧಮಾಧಮನು ನಾನು
ನಿಮಿಷವಾದರು ನಿನ್ನ ಸ್ಮರಿಸಲಿಲ್ಲ
ಸುಮತಿಗಳನ್ನು ಬಿಟ್ಟು ಕುಮತಿಗಳನ್ನು ಕೂಡ್ದೆ
ಮಮತೆ ವಿಷಯದಲ್ಲಿ ಘನವಾಯಿತೊ
ಮಮಕುಲ ದೈವವೆ ಸುಮುಖವಾಗಲಿಬೇಕೊ
ವಿಮುಖವಾದರೆ ಎನಗಿನ್ನಾವ ಗತಿಯೊ
ಸಮಯ ಇದೆ ನರಜನ್ಮ ಬಂದಾಗಲೆ ಪೊರಿಯಯ್ಯಾ
ಅಂದು ಕ್ರಿಮಿಕೀಟ ಜನುಮದಲ್ಲಾವ ಸಾಧನವೊ
ರಮೆಯರಸನೆ ಗುರುಶ್ರೀಶವಿಟ್ಠಲ ನಿನ್ನ
ಮಮತೆ ಒಂದಿರೆ ನಾನು ಒಂದು ಬೇಡುವದಿಲ್ಲ ॥ 1 ॥
ಮಟ್ಟತಾಳ
ನಿನ್ನ ಧ್ಯಾನವ ಕೊಡೊ ಎನ್ನ ಧನ್ಯನ ಮಾಡೊ
ನಿನ್ನ ಮಂಗಳ ಗುಣವನ್ನೆ ಕೀರ್ತನೆ ಗೈಸೊ
ನಿನ್ನ ಕಥಾಮೃತವನ್ನೆ ಕುಡಿಸೊ ನಿತ್ಯ
ನಿನ್ನವರ ಸಂಗ ಜನ್ಮ ಜನ್ಮದಲಿರೆ
ಅನ್ಯ ವಿಷಯದಲ್ಲಿ ಇನ್ನು ಇಡಿಸದಿರೊ
ನಿನ್ನ ಭಕ್ತರಂತೆ ಎನ್ನ ಯೋಗ್ಯತೆ ಅಲ್ಲ
ಇನ್ನೇನಾದರೂ ಘನ್ನ ಜ್ಞಾನಿಗಳವರು
ನಿನ್ನ ಚರಣ ಕಮಲವನ್ನು ಬಿಡುವರಲ್ಲ
ಎನ್ನಯ ಗತಿಗಳು ಇನ್ನೆಷ್ಟು ಪೇಳಲಿ
ಎನ್ನಯ ತಪ್ಪುಗಳು ಅನಂತವಿದ್ದರು
ಅನ್ಯರ ದುರ್ಗುಣವನ್ನೆ ಎಣಿಸಿ ಎಣಿಸಿ ಎನ್ನ ದಣಿಸುವದೈಯ್ಯಾ
ನಿನ್ನ ಕಡಿಗೆ ಮನ ಒಮ್ಮೆ ಪೋಗದು ಕೃಷ್ಣ
ಎನ್ನ ಬಾಳು ಸ್ವಾಮಿ ಇನ್ನು ಹೀಗಾಯಿತು
ಇನ್ನು ನಾ ಮೊರೆ ಇಟ್ಟೆ ಗುರುಶ್ರೀಶವಿಟ್ಠಲ ॥ 2 ॥
ತ್ರಿವಿಡಿತಾಳ
ನೀನೇವೆ ಸರ್ವಜ್ಞ ನಾನು ಪೇಳುವದೇನು
ನೀನೇವೆ ಸ್ವಾತಂತ್ರ ಏನಾಯಿತೆನ್ನಿಂದ
ನೀನೇವೆ ಪ್ರೇರಿಸಿ ನುಡಿಸಿದ ಕಾರಣದಿ
ನಾನು ನುಡಿದೆನಯ್ಯಾ ಕರುಣಾನಿಧೆ
ನೀನೆ ಎನ್ನಯ ದೇಹದೊಳಗೆ ಹೊರಗೆ ಇದ್ದು
ನಾನಾ ವ್ಯಾಪಾರವ ಮಾಡಿಸುವಾಗಲೆ
ನಾನೆ ಮಾಡುವೆನೆಂಬ ಆಹಂಕಾರ ಬಿಡಿಸಿನ್ನು
ನೀನೆ ಮಾಬುವೆನೆಂಬ ಸ್ಮೃತಿಯನಿತ್ತು
ಶ್ರೀನಾಥ ದಯದಿಂದ ನಾನಾ ಠಾವಿನಲ್ಲಿ
ಎನಗೆ ನಿನ್ನಯ ರೂಪ ತೋರಿಸಯ್ಯಾ
ನಿನ್ನಯ ಸ್ಮೃತಿಯೆ ಭಾಗ್ಯ ವಿಸ್ಮೃತಿ ಎಂದಿಗೂ ಬೇಡ
ಮೀನಕೇತನ ಜನಕ ಗುರುಶ್ರೀಶವಿಟ್ಠಲ
ಸಾನುರಾಗದಿ ಕಾಯೊ ಶರಣೆಂಬೆ ನಿನಗೆ ॥ 3 ॥
ಅಟ್ಟತಾಳ
ಇಂದಿರಾಪತಿ ನಿನ್ನ ಪೊಂದಿದವರ ಪಾದಾ ಪೊಂದಿದವ ನಾನು
ತಂದೆ ನಿನ್ನಯ ಮನಸಿಗೆ ತಂದು ಪಾಲಿಸು
ಹಿಂದಿನ ಜನುಮದಿ ಒಂದು ಸಾಧನ ಕಾಣೆ
ಇಂದಿನ ಜನುಮದಿ ಆದದ್ದು ಇಷ್ಟೇ
ಮುಂದೇನು ಮಾಡಿಪೆಯೊ ನೀನೆ ಬಲ್ಲಿ
ಮಂದಮತಿಗ ನಾನು ತಂದೆ ನಿನ್ನಯ ನಾಮಾ ಆ -
ನಂದದಿಂದಲಿ ನುಡಿಸೊ ಇದನೆ ಬೇಡಿಕೊಂಬೆ
ಸಂದರ್ಶನ ಹೃದಯ ಮಂದಿರದಲ್ಲಿತ್ತು
ಪೊಂದಿಕೊಂಡಿರೊ ಗುರುಶ್ರೀಶವಿಟ್ಠಲಾ ॥ 4 ॥
ಆದಿತಾಳ
ಕೃಷ್ಣಾ ಎನ್ನೊಡಿಯನೆ ಸೃಷ್ಟಾದ್ಯಷ್ಟಕರ್ತ
ಪುಟ್ಟಿದೆ ನಾ ಮುನ್ನೆ ಪುಟ್ಟಿಸೆಂದು
ಬಟ್ಟಿನೆ ದೈನ್ಯವ ವಿಟ್ಠಲ ದಯದಿ ನೀ
ಪುಟ್ಟಿಸಿ ದೇಹವ ಕೊಟ್ಟು ರಕ್ಷಿಸಲಿಲ್ಲೆ
ಎಷ್ಟೆಷ್ಟು ದಿವಸಕ್ಕೆ ಅಷ್ಟಷ್ಟೆ ಸಾಧನ ಮಾಡಿಸಿ
ಶಿಷ್ಟರ ದಯ ಪುಟ್ಟುವಂತೆ ಮಾಡಿ
ಶಿಷ್ಟಾಶಿಷ್ಟ ನಿನ್ನ ನಾಮ ನಾಲಿಗೆಯಲ್ಲಿ
ಘಟ್ಯಾಗಿ ನಂಬದೆ ಭ್ರಷ್ಟ ಜ್ಞಾನವನ್ನು ಕಟ್ಟಿಕೊಂಬೆನಯ್ಯಾ
ಇಷ್ಟಮೂರುತಿ ದಯವಿಟ್ಟು ಪೊರೆಯೊ ಗುರುಶ್ರೀಶವಿಟ್ಠಲಾ ॥ 5 ॥
ಜತೆ
ಪೊರೆವ ಧೊರೆಯು ನರಹರಿಯು ತಾ ಇರಲಾಗಿ
ಅರೆಮೊರೆಗೊಳಲೇಕೆ ಗುರುಶ್ರೀಶವಿಟ್ಠಲಾ ॥
ಶ್ರೀ ಗುರುಶ್ರೀಶವಿಟ್ಠಲದಾಸರ ಕಿರುಪರಿಚಯ :
ರಾಯಚೂರು ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ಗ್ರಾಮದಲ್ಲಿ ಜನಿಸಿದ ಶ್ರೀನರಸಿಂಹದಾಸರು , ಶ್ರೀಜಗನ್ನಾಥದಾಸರಲ್ಲಿ 12 ವರ್ಷ ಶಿಷ್ಯತ್ವ ವಹಿಸಿ ಅವರನ್ನು ಸೇವಿಸಿದರು. ಗುರುಗಳು ಅನುಗ್ರಹಿಸಿ , ಅವರ ಆಜ್ಞೆಯ ಪ್ರಕಾರ ಶ್ರೀ ಶ್ರೀಶವಿಠಲಾಂಕಿತ ಹುಂಡೇಕಾರ ದಾಸರಿಂದ " ಗುರುಶ್ರೀಶವಿಠಲ " ಎಂಬ ಅಂಕಿತ ಪಡೆದರು. ಗಂಗಾವತಿ ತಾಲೂಕಿನ ಕುಂಟೋಜಿ ಎಂಬ ಗ್ರಾಮದಲ್ಲಿ ಇದ್ದುದರಿಂದ ಇವರಿಗೆ ಕುಂಟೋಜಿ ದಾಸರೆಂದೂ ಕರೆಯುವರು. ಇವರು 6 ಸುಳಾದಿಗಳನ್ನು ರಚಿಸಿದ್ದಾರೆ. ಸಂಖ್ಯೆ ಕಡಿಮೆಯಾದರೂ ಅಸಂಖ್ಯ ಅಂತಃಶಕ್ತಿ ಈ ಸುಳಾದಿಗಳಲ್ಲಿ ಅಡಗಿದೆ.
******
🙏🙏🙏🙏