Showing posts with label ಜನಿಸಲಾರೆನು ಜಗದೊಳಗೆ ಹರಿಯೆ vijaya vittala. Show all posts
Showing posts with label ಜನಿಸಲಾರೆನು ಜಗದೊಳಗೆ ಹರಿಯೆ vijaya vittala. Show all posts

Wednesday, 16 October 2019

ಜನಿಸಲಾರೆನು ಜಗದೊಳಗೆ ಹರಿಯೆ ankita vijaya vittala

ವಿಜಯದಾಸ  
ಉದಯರಾಗ
ಜನಿಸಲಾರೆನು ಜಗದೊಳಗೆ ಹರಿಯೆ ಪ

ಕನಸಿನೊಳು ನೆನೆಯೆ ಕಂಪನವಾಗುತಿದೆ ಮನಕೆ ಅ.ಪ

ವಾರಿಮಂಡಲ ವೃಷ್ಟಿಧಾರೆ ಧಾರುಣಿ ಜನಕ
ದ್ವಾರದಿಂ ಸರಿದುಪೋಗಿ-ಸಾಗಿ
ಜಾರಿ ಜನನೀ ಜಠರ ನಾರುವ ದುರ್ಗಂಧ
ಸೇರಿ ಬೊಬ್ಬುಳಿಯ ತೆರದಿ-ಭರದಿ
ವಾರಿವಾರಕೆ ಬೆಳೆದು ತಾರಿತಗಲಿ ಬಳಲಿ
ಶರೀರವನ್ನೆ ಪೊತ್ತು-ತೆತ್ತು
ಖಾರ ಕಟು ಲವಣಾದಿ ಘೋರತರ ಮಹಕ್ಲೇಶ
ವಾರಿಧಿಯೊಳಗೆ ಮುಳುಗಿ ಮರುಗಿ ಸೊರಗಿ 1

ಲೇಶಾವಕಾಶವಿಲ್ಲದ ದೇಶದೊಳು ಸನ್ನಿ
ವಾಸ ಉಲ್ಬಣದೊಳಿದ್ದು-ಕುದ್ದು
ಘಾಸಿಯಲ್ಲಿ ಪರಿತಾಪ ಸೂಸಲು ಹಾಹಾಯೆಂಬ
ಘೋಷಧ್ವನಿಯಿಂದ ಬೆದರಿ-ಅದರಿ
ರೋಷವಾಗಿದ್ದ ಕ್ರಿಮಿರಾಶಿ ಮುಖ ಕಾಟದಿಂ
ಏಸು ಬಗೆಯಿಂದ ನೊಂದು ಬೆಂದು
ಶ್ವಾಸ ಬಿಡುವುದಕೆ ವ್ಯತ್ಯಾಸವಾಹುದು ಮುಂದೆ
ಮೋಸಗೊಂಡು ಮತಿಗೆಟ್ಟು ಬೇಸರಿಕೆ ಅಕಟಕಟ 2

ಜಾನು ಮಧ್ಯದಲಿ ಶಿರಗೋಣು ತೂರಿಸಿಕೊಂಡು
ಮಾಣದಲೆ ಬಿಕ್ಕಿ ಬಿಕ್ಕಿ-ಸಿಕ್ಕಿ
ಏನೆಂಬೆ ಮಸೆದುಕ್ಕಿನ ಬಾಣ ಪೆಟ್ಟಿನ ಸಮ-
ಬೇನೆಯಿಂದಧಿಕವಾಗೆ ಮೈಗೆ
ಮೇಣು ಕೈಕಾಲುಗಳು ಕಾಣಿಕಾ ಕಾಲವಗ-
ಲಾನು ಚರಿಸದಾದೆನೊ ಇನ್ನೇನೊ
ಗಾಣ ತಿರುಗಿದಂತೆ ಗೇಣು ಬೈಲೊಳಗೆ ಈ
ಆ-ನನ ಮೇಲಡಿಯಾಗಿ ಬಂದೆ-ನೊಂದೆ 3

ಸೂತಿಕಾಮರುತ ಬೀಸಿದಾತುರಕೆ ಬೆಸಸುವ
ಯಾತನೆಗೆ ಕಾಣೆ ಲೆಖ್ಖ-ದು:ಖ
ಗಾತುರವು ಕಿರಿದಾಗಿ ಪೋತಭಾವವ ವಹಿಸೆ
ಭೂತಳಕೆ ಉಗ್ಗಿಬಿದ್ದು-ಎದ್ದು
ಶೀತೋಷ್ಣ ಮಲರೋಗ ಭೀತಿ ಲಾಲನೆಯಿಂದ
ಮಾತೆಯ ಮೊಲಿಯನುಂಡು-ಉಂಡು
ಆ ತರುವಾಯ ಉಪನೀತ ವಿವಹಗಳಲ್ಲಿ
ವ್ರಾತ ಕೈಕೊಂಡೆನಯ್ಯ ಜೀಯ 4

ಯೌವನದಿ ಚತುರ್ವಿಂಶತಿ ತತ್ವಜ್ಞಾನವ ಜರಿದು
ಯುವತಿಯರ ರೂಪಲಾವಣ್ಯ ನೋಡಿ-ಬಾಡಿ
ನೆವನೆವದಿ ಭೋಗಗಳ ಸವಿ ಸವಿದಿಪೇಕ್ಷಿಸಿ
ಭವನ ಭವನವÀನು ಪೊಕ್ಕು -ಸೊಕ್ಕು
ಅವರಿವರ ಜಾತಿಯೆನ್ನದೆ ಮಾತುಗಳನಾಡಿ
ದಿವರಾತ್ರಿಯಲ್ಲಿ ಹೊರಳಿ-ಉರುಳಿ
ಕವಿಜನರ ಧಿಕ್ಕರಿಸಿ ಕೋಣನಂತೆ ಸದಾ
ಕಾಲ ಕಳೆದೆ ಉಳಿದೆ 5

ಹೆಂಡ್ರು ಮಕ್ಕಳಿಗಾಗಿ ಎನ್ನ ಹಿತಮನೆ ಮರೆದು
ಕಂಡಕಂಡವರ ಕಾಡಿ-ಬೇಡಿ
ಉಂಡುಟ್ಟು ಸುಖಪಟ್ಟು ಪಾರತ್ರಯವ ಜರೆದು
ಕೊಂಡೆಯಲಿ ನಿಪುಣನಾಗಿ ತೂಗಿ
ಮಂಡೆಯನು ಬಲಿತ ಪಶುವಿನಂತೆ ಮದವೇರಿ
ಚಂಡ ವೃತ್ತಿಯಲಿ ನಡೆದು-ನುಡಿದು
ಹಿಂಡು ಮಾತೇನು ಈ ಜರೆನರೇ ಬಂದೆನ್ನ
ಲಂಡತನ ಪೋಗದಕಟ್ಟ-ಉಂಬೆ ವಿಕಟ 6

ನಾನಾ ಯೋನಿಗಳಲ್ಲಿ ಬರಲಾರೆ ಬರಲಾರೆ
ನಾನು ಪೇಳುವುದು ಏನೋ-ಇನ್ನೇನೊ
ನೀ ನೋಡಿದರೆ ಅನ್ಯ ಕಾವ ದೈವರ ಕಾಣೆ
ಮಾನಸದೊಳಗೆ ಒಮ್ಮೆ-ಇಮ್ಮೆ
ದೀನರಕ್ಷಕ ಬಿರುದು ಅನವರತ ನಿನ್ನದು
ಎಣಿಸದಿರು ಎನ್ನ ದೋಷ ಲೇಶ
ಶ್ರೀನಾಥ ವಿಜಯವಿಠ್ಠಲರೇಯ ನೀನೊಲಿದು
ಧ್ಯಾನದಲ್ಲಿ ಬಾರೊ ನಿಜ ಮೂರುತಿಯ ತೋರೊ 7
********