ಶ್ರೀ ಪುರಂದರದಾಸಾರ್ಯ ವಿರಚಿತ ಶ್ರೀಹರಿ ಸ್ವಾತಂತ್ರ್ಯ ಸುಳಾದಿ
ರಾಗ : ಭೈರವಿ
ಧೃವತಾಳ
ಹರಿ ನಡಿಯದಿರಲು ನಡಿಯಲಲ್ಲೀ ಜಗ
ಹರಿ ನುಡಿಯದಿರಲು ನುಡಿಯಲಲ್ಲೀ ಜಗ
ಹರಿ ನೋಡದಿರಲು ನೋಡಲಲ್ಲೀ ಜಗ
ಹರಿ ಮಾಡದಿರಲು ಮಾಡಲಲ್ಲೀ ಜಗ
ಹರಿ ಉಸರಿಕ್ಕಿದರೆ ಉಸರಿಕ್ಕದೀ ಜಗ
ಹರಿ ಎವೆ ಇಕ್ಕದಿರೆ ಎವೆ ಇಕ್ಕದೀ ಜಗ
ಹರಿ ಸರ್ವ ಪ್ರೇರಕ ಪುರಂದರವಿಠ್ಠಲ
ಹರಿ ಆಡಿಸಿದಂತೆ ಆಡುತಿಪ್ಪದಿ ಜಗ॥೧॥
ಮಟ್ಟತಾಳ
ಶಿರಿವತ್ಸ ಶಿರಿಧರ ಸುಮನಸನಿ-
ಕರ ಮಕುಟ ಮಂಡಿತ ಚರಣಾರವಿಂದ
ಗಿರಿಗೋವರ್ಧನಧರ ಪುರುಷೋತ್ತಮ
ವಾಮನ ವಾಸುದೇವ
ಪುರಂದರವಿಠ್ಠಲ ಪುಂಡರೀಕದಳನಯನ
ಪುರುಷೋತ್ತಮ॥೨॥
ತ್ರಿವಿಡಿತಾಳ
ಮುಂದೆ ನೃಕಂಠೀರವ ಕಂಬಿಕಾರನಾಗಿ
ನಂದಗೋಪ ನಂದನರು ಹಿಂದನ ಕಾವಲು
ಅಂಜದಿರೆ ಜೀವವೆ ತಂದೆ ತಾಯಿ ಶಿಶುವಿನ ಪೊರೆ-
ವಂದದಿ ರಾಮಲಕ್ಷ್ಮಣರು ಧನುರ್ಧಾರಿಗಳಾಗಿ
ಚಂದಲೈಧಾರೆ ಅಂಜಾದಿರೆಲೊ ಅನಿಮಿತ್ಯ
ಬಂಧು ತನು ಸಂಬಂಧಿ ಎಂತಲ್ಲ ಅನವರತ ಪು -
ರಂದರವಿಠ್ಠಲನ್ನ ಕಾವಲು ಘನವೋ॥೩॥
ಅಟ್ಟತಾಳ
ನೀನು ಮಹಾ ಮಹಿಮನೆಂದರಿತು ಮ-
ತ್ತೇನು ಶಂಕೆ ಇಲ್ಲದೆ ನಡಿ ನುಡಿಗೊಮ್ಮೆ
ನಾ ನಿರಂತರ ನೆನೆವೆನು ಅಡಿಗಢಿಗೆ
ಈ ಅಪರಾಧಕ್ಕೆ ತೋಂಡನೆಂದೆನಿಸು
ಮನೆ ಮುಂದೆ ಬಿಡದೆ
ಶ್ರೀನಾಥ ಪುರಂದರವಿಠ್ಠಲ ನಿನ್ನ
ತೋಂಡನಾಗಿ ನಾನಿರುತಿಪ್ಪೆ ನಿತ್ಯಾ॥೪॥
ಆದಿತಾಳ
ಆಂಜನೇಯನ ಕೂಡಿಕೊಂಡು ಆಗ
ಭುಂಜಿಸಬೇಕೆಂದು ರಾಮ ಕರಿಯಲಾಗಿ
ಎಂಜಲ ಹರಿವಾಣ ಎತ್ತಿಕೊಂಡು ಬಂದು
ಭುಂಜಿಸಿ ಉಣ ಕಲಿಸಿದ ಹನುಮಂತಾ
ಕಂಜಾಕ್ಷ ಪುರಂದರವಿಠ್ಠಲನ ಎಂಜಲ
ಎಂಜಲನಿತ್ತ ಸಕಲ ದೇವತಿಗಳಿಗೆ॥೫॥
ಜತೆ
ನಿತ್ಯಾನಿತ್ಯ ಸುವಸ್ತುಗಳಲ್ಲಿ
ನಿತ್ಯ ನಿತ್ಯ ಪುರಂದರವಿಠ್ಠಲ ॥೬॥
****