Showing posts with label ಪ್ರತಿ ಪ್ರತಿ ದಿವಸಕ್ಕೆ ಬೇಡುವ vijaya vittala ankita suladi ಸಾಧನ ಸುಳಾದಿ PRATI PRATI DIVASAKKE BEDUVA SADHANA SULADI. Show all posts
Showing posts with label ಪ್ರತಿ ಪ್ರತಿ ದಿವಸಕ್ಕೆ ಬೇಡುವ vijaya vittala ankita suladi ಸಾಧನ ಸುಳಾದಿ PRATI PRATI DIVASAKKE BEDUVA SADHANA SULADI. Show all posts

Sunday 1 August 2021

ಪ್ರತಿ ಪ್ರತಿ ದಿವಸಕ್ಕೆ ಬೇಡುವ vijaya vittala ankita suladi ಸಾಧನ ಸುಳಾದಿ PRATI PRATI DIVASAKKE BEDUVA SADHANA SULADI

Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ  ಸಾಧನ ಸುಳಾದಿ 


(ಅಸಾರ ಸಂಸಾರ , ದೇಹ ಅನಿತ್ಯ , ಸಕಲ ಜಡವಸ್ತು ಅಸಾರ. ಶ್ರೀಹರಿಯೆ ಮುಖ್ಯ ಕರ್ತನೆಂದು ವಿಷಯ ವೈರಾಗ್ಯ ತಾಳುವಿಕೆ. (ದಾಸರ ಸ್ವಾನುಭವ)) 


 ರಾಗ ಬಿಲಹರಿ 


 ಧ್ರುವತಾಳ 


ಪ್ರತಿ ಪ್ರತಿ ದಿವಸಕ್ಕೆ ಬೇಡುವ ಬಗೆಯುಂಟು

ಅತಿಶಯವಲ್ಲ ಕೇಳು ಅನಾದಿಯ

ಪತಿತಪಾವನ ನೀನು ನಿನಗೆ ಬಿನ್ನೈಪದೇನು

ಗತಿಮಾರ್ಗ ಒಂದಲ್ಲದೆ ಅಧಿಕ ಉಂಟೆ

ಕ್ಷಿತಿಯೊಳು ನೋಡಿದರು ನಿತ್ಯವಾದ ವಸ್ತುಗಳು

ಸತತದಲ್ಲಿ ಕಾಣೆಯಾಲೋಚಿಸೆ

ಅತಳಾದಿ ಏಳು ಲೋಕ ಸಪ್ತಸಮುದ್ರ ಸ -

ಪುತ ದ್ವೀಪ ಮೇರು ಶೈಲಾಗ್ರ ಭಾಗ

ದ್ವಿತೀಯ ಭುವನ ಸ್ವಾಹ ಮಹಾಜನೋ ತಪೊ ಸತ್ಯ

ಮಿತ ಕಾಲವಲ್ಲದೆ ಮೆಚ್ಚ ಸಲ್ಲ

ಚ್ಯುತವಾಗಿ ಪೋಗುತಿದೆ ಕ್ಲಪ್ತಕಾಲ ದೇವ

ಹಿತವಾಗುವದೇ ಮಹಾಯೋಗಿ ಜನಕೆ

ಶತಧೃತಿ ಮಹಪದವಿ ನಿಶ್ಚಯವಲ್ಲ ಸರ್ವ -

ಶೃತಿಯಲಿ ಪೇಳುತಿದೆ ನಂಬುವದಲ್ಲ

ಕ್ಷಿತಿಪ ಚಕ್ರವರ್ತಿಗಳು ಮಹಾಸಂಪತ್ತಿನಿಂದ

ಶತ ಸಹಸ್ರ ನೂರುಲಕ್ಷ ಕೋಟಿ ವರುಷ

ಪ್ರತಿರಹಿತರಾಗಿ ಏಕ ಛತ್ರಾಧೀಶ್ವರರೆನಿಸಿ

ಕೃತಕಾರ್ಯದಿಂದಲ್ಲಿ ಇದ್ದವರು

ಕೃತಯುಗಾದಿಯಲ್ಲಿ ನಿಂದಿರಲಿಲ್ಲ

ಹತಭಾಗ್ಯ ಮಾನವರನೆಣಿಸಿಲ್ಯಾಕೆ

ಸತಿಪುತ್ರ ಬಂಧು ಬಳಗ ಮಿಗಿಲಾದವರು ಸಂ -

ಗತಿ ಕಾಣೋ ಇಹದಲ್ಲಿ ತಮ್ಮ ಸುಖಕ್ಕೆ

ಗತಿಗೆ ಕಾರಣವಲ್ಲ ನಶ್ವರ ಲೋಕ ಪ್ರ -

ಕೃತಿ ಬದ್ದ ಜೀವರಯ್ಯಾ ಲಾಭದವರೇ

ರತಿಪತಿ ಜನಕ ನಮ್ಮ ವಿಜಯವಿಟ್ಠಲ ನಿನ್ನ

ತುತಿಸುವ ಸೌಭಾಗ್ಯ ಅನಂತಕಾಲಕ್ಕೆ ಕೊಡು ॥ 1 ॥ 


 ಮಟ್ಟತಾಳ 


ಭಗವಂತನೆ ಕೇಳು ಅವರಿವರನ ತೋರಿ

ಮಗುಳೆ ಮಗುಳೆ ನುಡಿದು ಬೇಡಿಕೊಂಬುವದ್ಯಾಕೆ

ಜಗದೊಳಗೆನಗೀ ಸಂಸಾರಾಂತರದಿ

ಮಿಗೆ ಮನಸಿಗೆ ಅನುಭವವದು ಕೇಳು

ಮಗನು ಪೋದದು ಕಂಡೆ ಮನಕೆ ಒಪ್ಪುವ ಶಿಷ್ಯ

ಜಿಗಳಿ ಪೋದುದು ಕಂಡೆ ಕಾಯದಲ್ಲಿರಲಿಕ್ಕೆ

ನಗು ನಗುತ ಇನಿತು ಆಗಿ ಪೋದುದಕೆ ಕೈ -

ಮುಗಿದು ವಂದಿಪೆನಯ್ಯಾ ಭವದೊಳು ಸುಖವಿಲ್ಲಾ

ಗಗನ ಗಮನ ಸಿರಿ  ವಿಜಯವಿಟ್ಠಲರೇಯ 

ತ್ರಿಗುಣ ಕಾರ್ಯಗಳಿಂದ ತಿರುಗುವದೇ ಸಿದ್ದ ॥ 2 ॥ 


 ತ್ರಿವಿಡಿತಾಳ 


ಅನ್ಯ ಖಂಡಗಳಲ್ಲಿ ಹತ್ತುಸಾವಿರ ವರುಷ

ಪುಣ್ಯ ಪ್ರಭಾವದಿಂದ ದೇವಮಾನ

ಗಣ್ಯವಿಲ್ಲದೆ ಬದುಕಿ ಬಲವಂತರಾಗಿ ಸು -

ವರ್ಣ ಪೋಲುವ ಕಾಂತಿಯುಕ್ತರಾಗಿ

ಇನ್ನು ವನಿತೆಯರಿಂದ ನಾನಾ ಕ್ರೀಡೆಗಳಿಂದ

ಚೆನ್ನಾಗಿ ಸುಖಿಸಿ ಸಂತಾನ ಪಡೆದು

ಮನ್ನಣೆ ಮುದದಲಿ ಇದ್ದ ಜನರು ತಮ್ಮ

ಪುಣ್ಯ ತೀರಿದ ಮೇಲೆ ಭಾರತದಲ್ಲೀ

ಜನ್ಮತೆತ್ತುವರಾಗಿ ಸಂಸಾರದಲಿ ಸಿಲ್ಕಿ

ಬನ್ನ ಬಡಲಿಬೇಕು ಇಹಲೋಕದಿ

ಮುನ್ನೆ ಚತುರಯುಗ ಬಾಳಿದವರು ಮತ್ತೆ

ಸನ್ನದ್ಧರಾಗಿದ್ದ ತ್ರಯೋದಶ ಮನು

ಛಿನ್ನ ವಿಲ್ಲದಲೆ ಎಪ್ಪತ್ತೊಂದು ಮಹಾಯುಗ ಅ -

ನನ್ಯ ಭೂಮಿಪರಾಗಿ ಇದ್ದವರು

ಕಣ್ಣಿವೆಯನು ಹಾಕಿ ತೆಗೆವ ಕಾಲದೊಳು ಸಂ -

ಪನ್ನ ಭಾಗ್ಯ ಒಡನೆ ಕೊಂಡೊಯ್ದರೆ

ನಿನ್ನಿಚ್ಛೆಯಲಿ ತಾನೆ ಪೋಗುವ ಐಶ್ಚರ್ಯ

ತನ್ನಿಂದಲಿ ತಾನೆ ನಿಲಬಲ್ಲದೇ

ಅಣಕವು ಆಗಿದೆ ನಿನಗೆ ಈ ಪರಿಯಲಿ

ಬನ್ನ ಬಡುವವ ನಾನೆ ಬಲ್ಲೆನಯ್ಯಾ

ಮನ್ನಿಸು ಮಹಾರಾಯ ವಿಜಯವಿಟ್ಠಲರೇಯ 

ವಿಣ್ಮೂತ್ರದೊಳು ಬಂದು ಹೊರಳಲಾರೆನೊ ನಾನು ॥ 3 ॥ 


 ಅಟ್ಟತಾಳ 


ಎಂಥೆಂಥ ರಾಯರು ಏನಾದರು ನೋಡು

ಎಂಥೆಂಥ ಮನುಗಳು ಇಂದ್ರ ಚಂದ್ರಾದ್ಯರು

ಪಂಥವುಳ್ಳ ರುದ್ರ ಸರಸಿಜ ಸಂಭವ

ಇಂಥ ಇಂಥವರಿಗೆ ಸಂಸಾರ ನಿತ್ಯವೆ

ಸಂತೆ ಕೂಟದ ಪೂಜೆ ಯಾರಿಗಾದರು ನೋಡು

ಕಂಥೆಗೆ ಸೂತ್ರ ಹಾಕಿದಂತೆ ಇಪ್ಪದು

ಪಂಥದಲ್ಲಿ ಬಾಳುವದಕೆ ಕಾರಣ

ಅಂಥಾದ್ದೆ ಸರಿ ದೇವ ಇಹ ಹೇಯವೆಂದು

ಗ್ರಂಥ ಮೂಲದಲ್ಲಿ ಪೇಳಿದೆ ಪೇಳಿದೆ

ಮಂಥನವನು ಮಾಡಿ ಸಂಕೀರ್ತನೆ ಸ -

ತ್ಪಂಥವ ಪಿಡಿದು ಹೃದಯದೊಳಗಿದ್ದ

ಗ್ರಂಥಿ ಹರಿಸಿಕೊಂಬ ಯೋಗ ಮಾರ್ಗವೆ ಬೇಕು

ಚಿಂತಿತ ಫಲದಾಯ ವಿಜಯವಿಟ್ಠಲರೇಯ 

ಸಂತರ ಮನೋಹರ ಸಕಲ ಯೋಗೇಶ್ವರ ॥ 4 ॥ 


 ಆದಿತಾಳ 


ಶ್ವಾಸದಂತೆ ಗಾತ್ರ ದಿವಸ ದಿವಸ ಬಿಡದೆ

ನಾಶನವಾಗುತಿದೆ ಕಣ್ಣಿಗೆ ಕಾಣಿಸದು

ದೋಷ ಪುಂಜದಿಂದ ಭರಿತವಾಗಿದೆ

ಹೃಷಿಕೇಶನೆ ಬಿನ್ನಹ ಲಾಲಿಸು ನೀಕ್ಷಿಸು

ಈ ಶರೀರ ಸ್ಥಿತಿ ಈ ಪರಿ ಇರಲಿಕ್ಕೆ

ಆಶೆ ಮಾಡುವ ಮನುಜ ಅವನೇವೇ ಬಲು ಮೂರ್ಖ

ದೇಶದೊಳಗೆ ಸರ್ವ ವಿಚಿತ್ರ ಪದಾರ್ಥ

ಏಸೇಸು ಇದ್ದರೇನು ನೆಚ್ಚಿಕೆ ಇಲ್ಲವೊ

ವಾಸುದೇವನೆ ನಿನ್ನ ಕರುಣವುಂಟೆ ಸತ್ಯ

ಸುಷುಪ್ತಿ ಕಾಲದ ಪುಣ್ಯ ಬರುವಂತೆ ಮಾಡು

ಭೂಷಣ ಭೂತಿಮನ ಬಹುಮಾನ ಬಲತೇಜ

ಭಾಸುರ ಕೀರ್ತಿ ಧೈರ್ಯ ನಾನಾ ಸಂಪತ್ತು ನಿನ್ನ

ದಾಸೋಹಂ ಎಂದೆನಿಪ ಮಾತಿನೊಳಗೆ ಅಕ್ಕು

ಲೇಶವಾದರು ಇದಕೆ ಪ್ರತಿಕೂಲ ಬಾರದಂತೆ

ಈಶ ಇಂದಿರೇಶ ಪಾಲಿಸು ಬೇಡಿಕೊಂಬೆ

ಭೂಸುರ ದೇಹವಿರಲಿ ಇದೇ ಮತದ ಜ್ಞಾನದಿಂದ

ಶೇಷ ಪೂರ್ತಿಯಾಗಲಿ ಸಾಧನ ಸರ್ವೇಶ

ವಾಸ ವಿಲಾಸ ಉಲ್ಲಾಸ ವಿಜಯವಿಟ್ಠಲ 

ಮೀಸಲ ಮನದೈವ ನಿನ್ನಿಚ್ಛೆ ಎಂತಾಹದೊ ॥ 5 ॥ 


 ಜತೆ 


ಸಂಪತ್ತು ಸ್ಥಿರವಲ್ಲ ಇಹದಲ್ಲಿ ಬಯಸೋದು

ಸಂಪೂರ್ಣ ಷಡೈಶ್ವರ್ಯ ವಿಜಯವಿಟ್ಠಲ ಕೃಷ್ಣಾ ॥

****