ಏನು ಸಾಧಿಸುವದೇನರಿದು ಜ್ಞಾನಗಮ್ಯ ಗುರುಮಾರ್ಗದೊರೆಯಲರಿಯದು ಪ
ನೀತಿಶಾಸ್ತ್ರವನೋದಿ ಪಂಡಿತನಾಗಲಿಬಹುದು ಶ್ರುತಿ ಸ್ಮøತಿಗಳ ತಿಳಿದು ತರ್ಕಸ್ಯಾಡಲಿಬಹುದು ಅತಿ ಬಲ್ಲತನದಿ ಯತಿಯನಿಸಿಕೊಳ್ಳಲಿಬಹುದು ಕ್ಷಿತಿಯೊಳು ಮೆರೆಯಲಿಬಹುದು ಸುತತ್ವ ಜ್ಞಾನಖೂನ ದೊರೆಯಲರಿಯದು 1
ಗೃಹತ್ಯಾಗಮಾಡಿ ಸಂನ್ಯಾಸಿ ಅಗಲಿಬಹುದು ದೇಹ ದಂಡಿಸಿ ವನವಾಸಿಯಾಗಲಿಬಹುದು ಗುಹ್ಯಗೊಪೆಯಲಿ ಸೇರಿ ತಪಸಿಯೆನಿಸಲಿಬಹುದು ಬಾಹ್ಯನಿಷ್ಠೆಯದೋರಬಹುದು ಸೋಹ್ಯ ಸದ್ಗುರುಮಾರ್ಗ ದೊರೆಯಲರಿಯದು 2
ಹಲವು ಕುಟಿಲದ ವಿದ್ಯವನು ಸಾಧಿಸಲಿಬಹುದು ಜಲದೊಳಗೆ ಮುಳಗಿ ಮಂತ್ರವನು ಜಪಿಸಲಿಬಹುದು ಸೀಲಿ ಸಾಲ್ವಳಿಯ ಸುಶಕುನ ಪೇಳಲಿಬಹುದು ಮ್ಯಾಲೆ ಜನರಂಜಿಸಲಿಬಹುದು ಮೂಲ ಮುಕ್ತಿ ಕೀಲ ತಿಳಿಯಲರಿಯದು 3
ಪೃಥ್ವಿಯನೆ ತಿರುಗಿ ಬಹುಭಾಷೆಯಾಡಲಿಬಹುದು ಮತಿವಂತನಾಗಿ ಕವಿತ್ವಮಾಡಲಿಬಹುದು ಗೀತರಾಗವು ಜಂತ್ರದೊಳು ನುಡಿಸಲಿಬಹುದು ಚದುರಂಗ ಪಗಡ್ಯಾಡಿ ಗೆಲಬಹುದು ಮತ್ತ ಮನ ಬೆರೆವ ಘನಸುಖವು ದೊರೆಯಲರಿಯದು 4
ಶೂರತನದಲಿ ಪರಾಕ್ರಮ ಹಿಡಿಯಲಿಬಹುದು ಧೀರಗುಣದಲಿ ಮಹಾಧೀರನೆನಿಸಲಿಬಹುದು ನೂರ್ಬಲದ ಪೌರುಷಲಿ ರಾಜ್ಯನಾಳಲಿಬಹುದು ಸಿರಿಸೌಖ್ಯದೊಳಿರಲಿಬಹುದು ಸಾರ ಸುಜ್ಞಾನಸುಖ ದೊರೆಯಲರಿಯದು 5
ಪರ್ವತಾಗ್ರದಲೇರಿ ಧರೆಗೆರಗಲಿಬಹುದು ಹರಿವ ನದಿಯನೆ ಹಾರಿ ಹೋಗಲಿಬಹುದು ಮೊರೆವುತಿಹ್ಯ ಸರ್ಪದಾ ವಿಷವು ಧರಿಸಲಿಬಹುದು ಕ್ರೂರ ಮೃಗದೊಳು ತಿರುಗ್ಯಾಡಬಹುದು ಪಥ ದೊರೆಯಲರಿಯದು 6
ಪೊಡವಿಯೊಳು ಹವಲು ವಿದ್ಯವ ಸಾಧಿಸಲುಬಹುದು ಬಡದ ಬವಣಿಯ ಬಟ್ಟು ನಾಡ ಶೋಧಿಸಬಹುದು ಗೂಢ ವಿದ್ಯದ ಮಾತು ಆಡಿ ತೋರಿಸಬಹುದು ಹಿಡಿದು ಮೌನವ ಕೂಡಬಹುದು ಮೂಢಮಹಿಪತಿ ಒಡಿಯನ ಕೃಪೆ ಪಡೆವದೆ ದುರ್ಲಭವು 7
***