ಜಗದುದರನ ಸೊಸೆಯೆ ಶ್ರೀ ವಾಯು ಸತಿಯೆ
ಜಗದುದರನ ಸೊಸೆಯೆ ಪ.
ಸುಗುಣಿ ನಿನ್ನ ನಾ ಬಗೆ ಬಗೆ ವರ್ಣಿಸೆ
ಜಗದೊಳು ಖ್ಯಾತೆಯೆ ನಗಧರ ಪ್ರೀತೆಯೆ ಅ.ಪ.
ಸಾರಿ ಬಂದೆ ನಿನ್ನ ನಾರಿಮಣಿಯಳೆ
ತೋರೆ ಹರಿಪದ ಭೂರಿ ಕರುಣದಿ ನೀ
ನಿರೆ ಸರಸಿಜೋದ್ಭವ ಸತಿ ಪದಕೆ
ಸೇರುವೆ ಮುಂದಿನ ಕಲ್ಪದಿ ಪತಿ ಸಹ
ಭಾರತಿ ನಿನ್ನಯ ವಾರಿಜಪದವನು
ಸೇರಿ ಸುಖಿಸುವಂಥ ದಯ ತೋರೆ ನೀ 1
ದಾರಿ ತೋರಿ ನೀ ಪಾರುಗಾಣಿಸೆ
ತಾರತಮ್ಯದಿ ವಾರಿಜಾಂಬಕಿಯೆ
ಆರು ಅರಿಯದ ಹರಿಯ ಮಹಿಮೆಯ
ಸಾರತತ್ವ ನೀ ಪತಿಯಿಂದರಿತಿಹೆ
ಬಾರದು ಅಜ್ಞತೆ ನಿನಗೆ ಪ್ರಳಯದಿ
ನಾರಿ ರನ್ನೆ ಸರ್ವ ಬುದ್ಯಭಿಮಾನಿಯೆ 2
ಹಾರಪದಕವು ದೋರೆ ಕಂಕಣ
ನಾರಿ ನಿನ್ನನು ಯಾರು ವರ್ಣಿಪರೆ
ನಾರಿ ನಿನ್ನ ಪತಿದ್ವಾರದಿ ಎನ್ನ ಶ-
ರೀರದಿ ಸರ್ವನಿಯಾಮಕರೊಡನೆ
ತೋರೆ ಗೋಪಾಲಕೃಷ್ಣವಿಠ್ಠಲನ
ನೀರಜನಾಭನ ಶ್ರೀ ರಮೇಶನ 3
****