Audio by Mrs. Nandini Sripad
ರಾಗ ಪಂತುವರಾಳಿ
ಧ್ರುವತಾಳ
ದೇಹ ಜೀರಣವಾಯಿತೊ ಧನ
ನೇಹ ಜೀರಣವಾಗದೊ
ಕಣ್ಣು ಕಿವಿ ಮಂದವಾದವೊ
ಹೆಣ್ಣು ಮಣ್ಣಿನಾಶೆ ಮಂಣಾಗದು
ಕಾಲು ಕೈ ಜವಗುಂದಿದವು ಭೋಗ
ಲೋಲತೆಯು ಜವಗುಂದದೋ
ಪಾಪ ಕೋಟಿಗಳು ಮಾಡಿದೆ ಅನುತಾಪ
ಮನದೊಳಿನಿತಿಲ್ಲ ಜರೆನರೆಯಿಂದ
ನೆರೆಹೊರೆ ಹೇಸಿತು ಶರೀರದೊಳು ಹೇಯವಿನಿತ್ತಿಲ್ಲ
ಸಂದು ಹೋಯಿತು ಕಾಲವೆಲ್ಲವು
ಮುಂದಣಗತಿಗೆ ದಾರಿ ದೋರದು
ಅನಾದಿಯಿಂದ ನಾ ನಿನ್ನವನೆನಿಸಿದೆ
ಎನ್ನ ಕೇಡು ನಿನ್ನದಲ್ಲವೆ
ಇನ್ನಾದರು ದಯದಿಂದ ನೋಡಿ
ನಿನ್ನ ಭಕ್ತಿಯನಿತ್ತು ಮನ್ನಿಸಬೇಕಯ್ಯ
ಎನ್ನನ್ನು ಶ್ರೀ ಕೃಷ್ಣ ॥ 1 ॥
ಮಠ್ಯತಾಳ
ಹರಿನಾಮ ಹರಿಪಾದ ತೀರಥವಿರಲು
ದುರಿತದ ಭಯವ್ಯಾಕೆ ನರಕದ ಭೀತ್ಯಾಕೆ
ಹರಿದಿನ ಹರಿದಾಸರ ಪದರಜವಿರಲು
ದುರಿತದ ಭಯವ್ಯಾಕೆ ನರಕದ ಭೀತೇಕೆ
ಹರಿಯ ಪಕ್ಕದೊಳಿದ್ದಂಗೆ ಕರಿಯ ಭಯ ಉಂಟೆ
ಸಿರಿಪತಿ ಶ್ರೀಕೃಷ್ಣನ ದಾಸರ ಸಂಗವಿರಲು
ದುರಿತ ತಿಮಿರಕ್ಕೆ ತರಣಿ ತಾನಲ್ಲವೆ ॥ 2 ॥
ತ್ರಿಪುಟತಾಳ
ಯಮ ಪಟ್ಟಣದ ಬಟ್ಟಿ ಕಷ್ಟವಾದಡೆ ಏನು
ಯಮಯಾತನೆ ಅತಿ ಘೋರವಾದಡೆ ಏನು
ಯಮಕಿಂಕರು ಭಯಂಕರರಾದಡೆ ಏನು
ಕಮಲನಾಭನ ದಾಸರಿಗೆ ಅಂಜಿಕೆ ಉಂಟೆ
ನಮೋ ನಮೋ ಸಿರಿಕೃಷ್ಣ ಎಂದರೋಡುವರಯ್ಯಾ
ಯಮ ಭಟರು ತಮ್ಮಾಳ್ದನಾಜ್ಞೆಯ ನೆನೆನೆನೆದು ॥ 3 ॥
ಅಟ್ಟತಾಳ
ಆವನ್ನ ಚಿತ್ತವು ಅಚುತನ್ನ ಮೆಚ್ಚದು
ಆವನ್ನ ನಾಲಿಗೆ ಶ್ರೀಲೋಲನೆನ್ನದು
ಆವನ ಶಿರ ಬಲಿ ಬಂಧನಗೆರಗದು
ಆವ ಜನುಮದಲ್ಲಿ ಮರದು ನೆನೆಯದಿರೆ
ಆವನೆ ನರಾಧಮ ನರಕ ಪಾಥೀಕನು
ಸಿರಿಕೃಷ್ಣ ನವರು ವೈಕುಂಠ ಪಥಿಕರು ॥ 4 ॥
ಆದಿತಾಳ
ಸಾಂಕೇತವಾಗಲಿ ಪಾರಿಹಾಸ್ಯವಾಗಲಿ
ಅಣಕದಿಂದಾಗಲಿ ಡಂಭದಿಂದಾಗಲಿ
ಒಮ್ಮೆ ಬಿದ್ದಾಗಲಿ ಮತ್ತೆ ಎದ್ದಾಗಲಿ ನಮೊ
ತಾಕಿದಾಗ ಮತ್ತಾವಾಗಲಾಗಲಿ
ನಮೋ ನಮೋ ಸಿರಿಕೃಷ್ಣ ಎಂಬ ಘೋಷ
ಮುಕುತಿ ಕನ್ನಿಕಿಯ ಮದುವಿ ವಾದ್ಯಘೋಷ ॥ 5 ॥
ಜತೆ
ಸಂತತದಲಿ ನಿನ್ನ ನಾಮ ನಾಲಿಗೆಯಲಿ
ಅಂತಿ ಕಾಲದಲಿ ವಿಶೇಷವಾಗಲಿ ಶ್ರೀಕೃಷ್ಣ ॥
***********