..
kruti by ಲಕ್ಷ್ಮೀನಾರಯಣರಾಯರು Lakshminarayanaru
ಪರಿಪಾಲಿಸೈ ವರ ವೆಂಕಟೇಶ
ಚರಣಾಬ್ಜಯುಗ ಸ್ಮರಣೆಯನಿತ್ತು ಪ
ದುರಿತಾಧಿದೂರ ಪರತತ್ವಸಾರ
ಕಾರುಣ್ಯಪಾರ ವರನಿರ್ವಿಕಾರ ಅ.ಪ.
ಪರಮಾತ್ಮನೆ ಪೊರೆ ಎನ್ನುತ ಕರಿರಾಜ
ಮೊರೆಯಿಡುತಿರಲು ನೀ
ಗರುಡನ ಏರಿ ತ್ವರೆಯಿಂದ ಬಂದೆ
ಪರಮ ದಯಾಕರ ಶ್ರೀನಿವಾಸ 1
ಪಾಪಿಷ್ಠನು ಅಜಾಮಿಳನೆಂದು
ಕೋಪದಿ ಯಮ ಭಟರೆಳೆಯುತಿರೆ
ತಾಪಕೆ ತನ್ನ ಪುತ್ರನ ಕೂಗುತಲಿರೆ
ಕೃಪೆಯಿಂದ ನಿಜಪುರಕೆ ಒಯ್ದೆ 2
ಕನಕಾಚಲನಿಧಿ ಲಕ್ಷ್ಮೀಕಾಂತ
ಪ್ರಣತಾರ್ಥಿಹರ ಆನಂದಕರ
ವನಜಾಸನಾದಿ ಅಮಿಷಪಾಲ
ಸನಕಾದಿ ಯೋಗಿ ಮನ ಕುಮುದಲೋಲ 3
***