ಶ್ರೀ ವೇಣುಗೋಪಾಲದಾಸರ ಕೃತಿ
ರಾಗ ಹಿಂದೋಳ ಏಕತಾಳ
ಯನ್ನ ಸ್ವಾಮಿ ಸರ್ವ ಸ್ವಾಮಿ ।
ಭಿನ್ನ ರಹಿತ ಅಖಿಳ ಜಗದಂತರ್ಯಾಮಿ ಯನಗಾವ ಗತಿಯೋ ॥ ಪ ॥
ಬಂದ ಕಾರ್ಯವಾಗಲಿಲ್ಲ । ಇಂದು ಬ್ರಹ್ಮದೇವ ಧರಿಸಿ ।
ಮುಂದೆಗತಿ ಯಾವುದಯ್ಯ ।
ಸಿಂಧುಶಯನ ಅರವಿಂದ ನಯನಾ ॥ 1 ॥
ನಿತ್ಯವಲ್ಲ ದೇಹ ಆಯು । ಹೊತ್ತು ಅಳಿದು ಹೋಗುತ್ತಿದೆ ।
ಮತ್ತೆ ಕಾಯ ಈ ಪರಿಯ ಬಾಹೊ ।
ದೆಂತೊ ನೀ ಕಾವೊದೆಂತೋ ॥ 2 ॥
ಹೇಸಿ ವಿಷಯ ಸುಖವ ನಾನು । ಲೇಸುಯಂದು ತಿಳಿದು ಮಮತೆ ।
ಪಾಶದೊಳು ಕಟ್ಟು ।
ಕ್ಲೇಶಪಡುವೆ ಮೇಲೆ ಆಸೆ ತೊಡುವೆ ॥ 3 ॥
ಉನ್ಮತ್ತತನದಿ ಸಕಲ । ಸನ್ಮಾರ್ಗವ ಜರಿದು ಸತತ ।
ಮನ್ಮಥನ ಪೊಂದಿದೇನೊ ನಿನ್ನ ಮರದು ।
ವಿಧಿ ಧರ್ಮ ತೊರದು ॥ 4 ॥
ವಾಮಲೋಚನಿಯರ ಕಂಡು । ನಾ ಮನಸಾ ಮಾಡಿ ಕೂಟಾ ।
ಕಾಮಿಸುವೆ ಕಲುಷಿಯಾಗಿ ।
ನೇಮದಿಂದ ಅಲ್ಲಿ ಪ್ರೇಮದಿಂದ ॥ 5 ॥
ಮತ್ತೆ ಉದರ ಬಾಧೆಯಿಂದ । ಕೃತ್ಯ ದುಷ್ಟ ಮಾಡಿಕೊಳುತ್ತ ।
ಭೃತ್ಯನೆನಿಪೆ ದುರುಳರಿಗೆ ।
ಸತ್ಯವಾಗಿ ಪುರುಷಾರ್ಥ ನೀಗಿ ॥ 6 ॥
ನಿರಯವಾರ್ತಿ ಕೇಳಿ ಮನವಾ । ಯರಗಿಸುವೆ ಭೋಗಂಗಳಿಗೆ ।
ನರಹರಿಯೆ ಕಾಯೊ ನಿನ್ನ ।
ಸ್ಮರಣೆಯಿಂದ ಬಲು ಕರುಣದಿಂದ ॥ 7 ॥
ಪರರ ವಿತ್ತ ಪದವಿ ಕಂಡು । ಹರುಷ ಕ್ಲೇಶದೊಳಗೆ ಸಿಲುಕಿ ।
ಇರಳು ಹಗಲು ಯೇಕವಾಗಿ ।
ತೊಳಲುವೆನೊ ಅತಿ ಬಳಲುವೆನೋ ॥ 8 ॥
ಆಗದೆನಗೆ ಅಬುಜನಾಭ । ಭಾಗವತವ ಕೇಳೆ ಮನಸು ।
ಹ್ಯಾಗೆ ನಿನ್ನ ದಾಸರವ ।
ನಾಗುವೆನೊ ಭವ ನೀಗುವೆನೋ ॥ 9 ॥
ಧೈರ್ಯವಾಗದೆನಗೆ ಭಕ್ತ । ವರ್ಯರನ್ನು ಪೊಂದುವುದಕ್ಕೆ ।
ಚೌರ್ಯದಾಸನಾದೆ ಖ್ಯಾತಿ ಸಿರಿಯ ।
ಬಯಸಿ ಮನ ಧುರ್ಯಗೊಳಿಸಿ ॥ 10 ॥
ದೀನರಕ್ಷಕ ದಿವಿಜರೊಡಿಯ । ದಾನವಾರಿ ಜ್ಞಾನಪೂರ್ಣ ।
ವೇಣುಗೋಪಾಲವಿಠಲ ಕ -।
ರುಣಿ ಸಲಹೋ ನಿನ್ನ ಸ್ಮರಣಿ ಬಲವೊ ॥ 11 ॥
********