Showing posts with label ಗುರುದಾಸರಾಯರೆನಗೆ vijaya vittala ankita ಆತ್ಮಕಥನ ಸುಳಾದಿ GURUDAASARAAYARENAGE ATMAKATHANA SULADI. Show all posts
Showing posts with label ಗುರುದಾಸರಾಯರೆನಗೆ vijaya vittala ankita ಆತ್ಮಕಥನ ಸುಳಾದಿ GURUDAASARAAYARENAGE ATMAKATHANA SULADI. Show all posts

Monday 23 November 2020

ಗುರುದಾಸರಾಯರೆನಗೆ vijaya vittala ankita ಆತ್ಮಕಥನ ಸುಳಾದಿ GURUDAASARAAYARENAGE ATMAKATHANA SULADI

 

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಪುರಂದರದಾಸರು ಸ್ವಪ್ನದ್ವಾರಾ ತಮಗೆ ನೀಡಿದ  ಅಂಕಿತಪ್ರದಾನದ ಆತ್ಮಕಥನ ಸುಳಾದಿ 


 ರಾಗ ಮೋಹನ 

 ಧ್ರುವತಾಳ 


ಗುರುದಾಸರಾಯರೆನಗೆ ದಾಸತ್ವ ನೀಡೋ ಕ್ರಮ

ಕರುಣದಿಂದಲ್ಲಿ ವ್ಯಾಸಕಾಶಿಯಲ್ಲಿ

ಹರುಷದಿ ಮನಮುಟ್ಟಿ ಪೇಳಿದ್ದೆ ಪೇಳುವೆನು

ನರಶಿರೋಮಣಿಗಳು ಕೇಳುವದು

ಶಿರಿ ಮಧ್ವಮುನಿಕೃತ ಸಿದ್ಧಾಂತ ಸಾರವನ್ನು

ಗುರು ವ್ಯಾಸಮುನಿ ಮುಖದಿಂದ ತಿಳಿದುಕೊಂಡು

ತರತಮ್ಯ ಪಂಚಭೇದ ಮೊದಲಾದ ತತ್ವಗಳ

ಪರಿಶೋಧನವಗೈದು ಮಂದರಿಗೆ

ಹರಿಕರುಣವ ಮಾಳ್ಪ ತತ್ವ ರಹಸ್ಯವನ್ನು 

ಪರಿ ಪರಿ ಸುಳಾದಿ ಪದ ಮುಖ ಪ್ರಾಕೃತದಿ

ಶಿರಿ ವಿಜಯವಿಟ್ಠಲನ ಪ್ರೀತಿಗೋಸುಗ

ತಿರಿಪಾದೋನ ಪಂಚಲಕ್ಷ ಪೇಳಿಹೆಂದು ॥ 1 ॥ 


 ಮಟ್ಟತಾಳ 


ಸಾಧು ಸಮ್ಮತವೆನಿಪಾ ಪಾದಗಳ ಪೂರೈಸುತ

ಮೋದ ಸಂಸ್ಕೃತವೆಂದು ಸಾದರದಲಿ ಪಠಿಸಿ

ಭೂಧರ ವಿಜಯವಿಟ್ಠಲನ್ನ 

ಪಾದವನೆ ಕಾಂಬುವದು ಸತ್ಯ ಸತ್ಯ ॥ 2 ॥ 


 ತ್ರಿವಿಡಿತಾಳ 


ಮುನಿಮಧ್ವ ಹೃದಯವೇ ಪ್ರಾಕೃತ ಗ್ರಂಥವಿದು

ಜನರಿಗೆ ಪೇಳಬೇಕಾದದೇ

ಘನವಾದ ತೈತರೇಯದಲ್ಲಿ ಪೇಳಿದ ಶಾಂತಿ

ಮನದಿ ಪೇಳಿಸುತ್ತ ತತ್ವಗಳ

ಅನುವಾಗಿ ತಿಳಿಸುತ್ತ ಶ್ರೀನಿವಾಸನ ಪಾದ -

ವನರುಹ ತೋರಬಹುದು ನಂಬಿದವರಿಗೆ

ವನಜನಾಭನ ಪಾದ ತುತಿಪಂಥ ಶಕ್ತಿಗೆ

ಘನಪದ ರೂಪದಂಕಿತವು ಕೊಟ್ಟು ಮತ್ತು

ಅನುನಯದಿಂದ ಶಾಂತಿ ಪೇಳಿಸಿ ತತ್ವಗಳ

ಮನದಿಂದರುಹ ಬಹುದು ಸುಗುಣರಿಗೆ

ಮನುಜರಿಗಂಕಿತವು ಶಾಂತಿಯು ಇಲ್ಲದಲೆ

ಅನುವಾಗಿ ಪೇಳ್ದ ತತ್ವಗಳು ವ್ಯರ್ಥ ಕಾಣೋ

ದನುಜದಲ್ಲಣ ವಿಜಯವಿಟ್ಠಲನ್ನ ದಾಸತ್ವ -

ತನ ಧರಿಸೋದು ಬಹು ಕಷ್ಟ ಕಷ್ಟವೆಂದು ॥ 3 ॥ 


 ಅಟ್ಟತಾಳ 


ಸ್ವತಂತ್ರ ದಾಸನು ತುತಿಸಲು ಫಲವೇನು

ಸತತ ಮಾಡುವ ಪುಣ್ಯ ಜಿತಕೆ ನಿಲ್ಲದಲೆ ಅ -

ಸತಿಯ ವ್ರತದಂತೆ ಚ್ಯುತವಾಗಿ ಪೋಪುದು

ಗತಿಗೆ ಸಾಧನವಿಲ್ಲ

ರತಿಪತಿ ಪಿತ ನಮ್ಮ ವಿಜಯವಿಟ್ಠಲನ್ನ 

ಅತಿ ದಯಪಡೆದವರ ಶಿಷ್ಯನಾಗದೆ ಗತಿ ಇಲ್ಲ ॥ 4 ॥ 


 ಆದಿತಾಳ 


ಗುರುದ್ವಾರವೆ ಗತಿ ಎಂಬ ಮಾನವನಿಗೆ

ಪರಮ ಶಾಂತನಿಗೆ ವರ ವೈಷ್ಣವನಿಗೆ

ದುರಬುದ್ಧಿ ಇರದವಗೆ ನಿರತಶಿಷ್ಯನಿಗೆ

ಉರುತರ ತತ್ವಗಳು ಅವಿರತ ಪೇಳಲು

ದೊರೆವನಾಕ್ಷಣದಲ್ಲಿ ವಿಜಯವಿಟ್ಠಲರೇಯ 

ಪರಮ ಹರುಷಪಟ್ಟು ನಲಿದಾಡುವನೆಂದು ॥ 5 ॥ 


 ಜತೆ 


ಗುರುರಾಯರಾಜ್ಞ ಸ್ವೀಕರಿಸುವ ನರರಿಗೆ

ಸಿರಿ ವಿಜಯವಿಟ್ಠಲನೆ ಪೊಳೆವನು ನಿಶ್ಚಯ ॥ 


 ಧ್ರುವತಾಳದ ನುಡಿ : 


 ನರಶಿರೋಮಣಿಗಳು = ಶ್ರೇಷ್ಠಜೀವರು ;

 ತಿರಿಪಾದೋನ = ಮೂರುಪಾದಕಡಿಮೆ (ಪಾದ = ಲಕ್ಷದಲ್ಲಿ 1/4 ಭಾಗ ) ; 


 ತ್ರಿಪುಟತಾಳದ ನುಡಿ : 


 ವನರುಹ = ಕಮಲ ;

 ವನಜನಾಭ = ಪದ್ಮನಾಭ ;

 ಮನದಿಂದರುಹಬಹುದು = ಮನಃಪೂರ್ವಕ , ಅರುಹಬಹುದು = ಹೇಳಬಹುದು ; 


 ಅಟ್ಟತಾಳದ ನುಡಿ : 


 ಜಿತಕೆ ನಿಲ್ಲದಲೆ = ಗೊತ್ತಾದ ಫಲಕೊಡದೆ ;

 ಅಸತಿಯ = ಪತಿವ್ರತೆಯಲ್ಲದವಳ ;

 ಗತಿ = ಮುಕ್ತಿ ; 


 ಆದಿತಾಳದ ನುಡಿ : 


 ನಿರತಶಿಷ್ಯನಿಗೆ = ಸದಾ ನಂಬಿರುವ ಶಿಷ್ಯನಿಗೆ ;

 ಉರುತರತತ್ವಗಳು = ಮಹಾ ಸಿದ್ಧಾಂತಗಳನ್ನು ;

 ಅವಿರತ = ಎಡಬಿಡದೆ , ಸದಾ ; 


 ಈ ಸುಳಾದಿಯ ರಚನೆಯ ಸಂದರ್ಭ : 


ಕಾಶಿಯಲ್ಲಿ ಮಣಿಕರ್ಣಿಕೆಯಲ್ಲಿ ಮಲಗಿದ್ದ ಶ್ರೀವಿಜಯದಾಸಾರ್ಯರಿಗೆ ಸ್ವಪ್ನದಲ್ಲಿ ಶ್ರೀಪುರಂದರದಾಸಾರ್ಯರು ದರ್ಶನವಿತ್ತು , ಶ್ರೀವಿಜಯವಿಟ್ಠಲ ಎಂಬ ಹರಿನಾಮವನ್ನು ಅಂಕಿತವನ್ನಾಗಿ ನೀಡಿದರು. ಗುರುಗಳಿಂದಲೇ ಅಂಕಿತಪ್ರದಾನವಾಗಬೇಕು. ಅಂಕಿತಪ್ರದಾನ ಮಾಡುವ ಕ್ರಮವೂ ಹೀಗಿದೆ. ಅಂಕಿತ ಸ್ವೀಕಾರ ಮಾಡುವ ವ್ಯಕ್ತಿ ಯಾವುದನ್ನು ತನ್ನ ಮುಖ್ಯ ಸಾಧನವೆಂದು ತಿಳಿಯಬೇಕು ಇತ್ಯಾದಿಗಳನ್ನು ಶ್ರೀಪುರಂದರದಾಸಾರ್ಯರು ಅಪ್ಪಣೆ ಕೊಡಿಸಿದರು. ಸ್ವಪ್ನದಿಂದ ಎಚ್ಚೆತ್ತೊಡನೆ ತಮಗೆ ಮೂಡಿದ ಈ ಭಾವನೆಯನ್ನು ತಮ್ಮಂದಿರೆದುರಿಗೆ ಅನುವಾದ ಮಾಡಿ , ಸಾಕ್ಷಾತ್ ಶ್ರೀಪುರಂದರದಾಸರಾಯರ ರೂಪದಿಂದ ಅಂಕಿತಪ್ರದಾನ ಮಾಡುವಾಗ ಹೇಳಿದ ಮಾತುಗಳ ಅಭಿಪ್ರಾಯವೇ ಈ ಸುಳಾದಿ. 


 ವಿವರಣೆ : 

 ಹರಿದಾಸರತ್ನಂ ಶ್ರೀಗೋಪಾಲದಾಸರು

*********