ರಾಗ - : ತಾಳ -
ಪರಮ ಸುಂದರ ಚರಣಾ ವೆಂಕಟರಮಣಾ ll ಪ ll
ಸಾರಿದೆನೋ ನಿನ್ನ ಚರಣ ಕಮಲಕೀಗ l
ಬೇರೇನು ಬಯಸೆನೋ ಕರುಣವ ತೋರೀಗ ll ಅ ಪ ll
ನಿರುತ ಸಿರಿಯು ತನ್ನ ಉದರದಲ್ಲಿಟ್ಟ ಚರಣ l
ಮರುತಾತ್ಮ ತಾ ನಿತ್ಯ ಪೂಜಿಪ ಚರಣ l
ಸರುವ ದೇವತೆಗಳು ಧ್ಯಾನಿಸುವ ಚರಣ l
ಮರೆಯದೆ ನೀಯನಗೆ ತೋರೈ ನಿನ್ನಯ ಚರಣ ll 1 ll
ಕುವರಿಯ ಶಾಪದಿಂ ಬಿಡಿಸಿದ ಚರಣ l
ಮಾವ ಕಂಸನನ್ನು ಕೆಡಹಿದ ಚರಣ l
ಗೋವನೆಲ್ಲವನು ಕಾಯ್ದ ಸಿರಿ ಚರಣ l
ಸಾವಧಾನದಿಯನ್ನ ಮನದಿ ನಿಲ್ಲಿಸೋ ಚರಣ ll 2 ll
ಕರಿರಾಜ ಗೊಲಿದಿಂದ ಕಾರುಣ್ಯ ನಿಧಿ ಚರಣ l
ವರಸತಿ ದ್ರೌಪತಿಯ ಕಾಯ್ದ ಶ್ರೀಚರಣ l
ಪುರಂದರದಾಸರ ಭಕ್ತಿಗೊಲಿದ ಚರಣ l
ಗುರುಶಾಮಸುಂದರ ತೋರೊ ನಿನ್ನಯ ಚರಣ ll 3 ll
***