ರಾಗ ಶಂಕರಾಭರಣ ಅಟತಾಳ
ಹೇವವೆಲ್ಲಿದುಹಯ್ಯ ವೈಕುಂಠಪತಿಗೆ ||ಪ ||
ಮೌನದಿಂ ಭಾರ್ಗವನು ಮಾತೆಯ ಶಿರ ತರಿದ || ಅ. ಪ||
ಒಬ್ಬ ಮಾವನ ಕೊಂದ , ಒಬ್ಬ ಮಾವನ ಎಸೆದ
ಒಬ್ಬ ಮಾವನ ಕೂಡೆ ಕಡಿದಾಡಿದ
ಒಬ್ಬ ಭಾವನ ಹಿಡಿದು ಹೆಡೆಮುಡಿಯ ಕಟ್ಟಿದ
ಒಬ್ಬ ಮೈದುನಗೆ ಬಂಡಿಬೋವನಾದ ||
ಕುಂಭಿನಿಗೆ ಪತಿಯಾದ , ಕುಂಭಿನಿಗೆ ಸುತನಾದ
ಕುಂಭಿನೀಮಗನ ಸಂಹಾರ ಮಾಡ್ದ
ಅಂಬುಧಿಗೆ ಪಿತನಾದ , ಅಂಬುಧಿಗೆ ಸುತನಾದ
ಅಂಬುಧಿಜಾತೆಗೆ ಸ್ವಾಮಿಯಾದ ||
ಬೊಮ್ಮ(?)ನಾ ಸಂಹರಿಸಿ ಅವರ ಮಕ್ಕಳನು
ಈ ಮಹಿಯೊಳಗೆ ಅವರ ಹತಮಾಡಿದ
( / ಮೊಮ್ಮನನು ಮಲಗಿಸಿದ ಅವರ ಹೆಮ್ಮಕ್ಕಳನು
ಯಿಮ್ಮೈಯವರಿತು ಸಂಹಾರ ಮಾಡಿದ)
ರಮ್ಯ ಮೂರುತಿ ಪುರಂದರವಿಠಲ ದೇವೇಶ
ಬೊಮ್ಮಮೂರುತಿಗೇಕೆ ಬಂಧುಬಳಗ ? ||
***
ಹೇವವೆಲ್ಲಿದುಹಯ್ಯ ವೈಕುಂಠಪತಿಗೆ ||ಪ ||
ಮೌನದಿಂ ಭಾರ್ಗವನು ಮಾತೆಯ ಶಿರ ತರಿದ || ಅ. ಪ||
ಒಬ್ಬ ಮಾವನ ಕೊಂದ , ಒಬ್ಬ ಮಾವನ ಎಸೆದ
ಒಬ್ಬ ಮಾವನ ಕೂಡೆ ಕಡಿದಾಡಿದ
ಒಬ್ಬ ಭಾವನ ಹಿಡಿದು ಹೆಡೆಮುಡಿಯ ಕಟ್ಟಿದ
ಒಬ್ಬ ಮೈದುನಗೆ ಬಂಡಿಬೋವನಾದ ||
ಕುಂಭಿನಿಗೆ ಪತಿಯಾದ , ಕುಂಭಿನಿಗೆ ಸುತನಾದ
ಕುಂಭಿನೀಮಗನ ಸಂಹಾರ ಮಾಡ್ದ
ಅಂಬುಧಿಗೆ ಪಿತನಾದ , ಅಂಬುಧಿಗೆ ಸುತನಾದ
ಅಂಬುಧಿಜಾತೆಗೆ ಸ್ವಾಮಿಯಾದ ||
ಬೊಮ್ಮ(?)ನಾ ಸಂಹರಿಸಿ ಅವರ ಮಕ್ಕಳನು
ಈ ಮಹಿಯೊಳಗೆ ಅವರ ಹತಮಾಡಿದ
( / ಮೊಮ್ಮನನು ಮಲಗಿಸಿದ ಅವರ ಹೆಮ್ಮಕ್ಕಳನು
ಯಿಮ್ಮೈಯವರಿತು ಸಂಹಾರ ಮಾಡಿದ)
ರಮ್ಯ ಮೂರುತಿ ಪುರಂದರವಿಠಲ ದೇವೇಶ
ಬೊಮ್ಮಮೂರುತಿಗೇಕೆ ಬಂಧುಬಳಗ ? ||
***
pallavi
hEvavellahudayya vaikuNTha patige
anupallavi
maunadim bhArgavanu mateya shira tarida
caraNam 1
obba mAvana konda obba mAvana eseda obba mAvana kUDe kaDidADida
obba bhAvana hiDidu heDemuDiya kaTTida obba maidunage baNDiya bOvanAda
caraNam 2
kumbhinige patiyAda kumbhinige sutanAda kumbhinI magana samsAra mADda
ambudhige pitanAda ambudhige sutanAda ambudhIjAtege svAmiyAda
caraNam 3
bommanA samharisi avana makkalanu I mahiyoLage avara hatamADida
ramme vaikuNTha pati purandara viTTala bomma mUrutigEke bandhu baLaga
***
ಹೇವವೆಲ್ಲಿಹುದಯ್ಯ ವೈಕುಂಠಪತಿಗೆ
ಮೌನದಿಂ ಭಾರ್ಗವನು ಮಾತೆಯ ಶಿರವ ತರಿದ
ಒಬ್ಬ ಮಾವನ ಕೊಂದ ಒಬ್ಬ ಮಾವನ ಎಸೆದ
ಒಬ್ಬ ಮಾವನ ಕೂಡೆ ಕಡಿದಾಡಿದ
ಒಬ್ಬ ಭಾವನ ಹಿಡಿದು ಹೆಡೆಮುರಿಯ ಕಟ್ಟಿದ
ಒಬ್ಬ ಮೈದುನಗೆ ಬಂಡಿಯ ಬೋವನಾದ
ಕುಂಭಿನಿಗೆ ಪತಿಯಾದ ,ಕುಂಭಿನಿಗೆ ಸುತನಾದ
ಕುಂಭಿನೀ ಮಗನ ಸಂಹಾರ ಮಾಡಿದ
ಅಂಬುಧಿಗೆ ಪಿತನಾದ , ಅಂಬುಧಿಗೆ ಸುತನಾದ
ಅಂಬುಧೀಜಾತೆಗೆ ಸ್ವಾಮಿಯಾದ
ಬೊಮ್ಮನ ಸಂಹರಿಸಿ ಅವನ ಮಕ್ಕಳನು
ಈಮಹಿಯೊಳಗವರ ಹತಮಾಡಿದ
ರಮ್ಮೆ ವೈಕುಂಠಪತಿ ಪುರಂದರವಿಠಲ
ಬೊಮ್ಮ ಮಾರುತಿಗೇಕೆ ಬಂಧು ಬಳಗ
***
ವ್ಯಾಖ್ಯಾನ : ಶ್ರೀಮತಿ. ಪದ್ಮ ಶಿರೀಷ
ಶ್ರೀಮತ್ಪುರಂದರದಾಸಾರ್ಯರ ಅದ್ಭುತವಾದ ಮುಂಡಿಗೆ
ಶ್ರೀ ಹರಿವಾಯುಗುರುಗಳ ಆಶೀರ್ವಾದದಿಂದ ಅರ್ಥ ನಿರೂಪಣೆಯ ಅಲ್ಪ ಪ್ರಯತ್ನ
👇🏾👇🏾👇🏾👇🏾👇🏾👇🏾👇🏾👇🏾
ವೈಕುಂಠಪತಿಯಾದ ಶ್ರೀಮನ್ನಾರಾಯಣ ಮೂರ್ತಿ ಅನಿಮಿತ್ತಬಂಧುವಾದ್ದರಿಂದ ಆತನಿಗೆ ಯಾವ ದೋಷವೂ ಇಲ್ಲಾ ಅನ್ನುವದನ್ನು ಇಲ್ಲಿ ಹೇಳುತ್ತಿದ್ದಾರೆ ನಮ್ಮ ಶ್ರೀ ದಾಸರಾಯರು... ...
ಅವತಾರಗಳಲ್ಲಿ ಆತನು ಮಾಡಿದ ಯಾವದೇ ಕಾರ್ಯಗಳು ಲೌಕಿಕದೃಷ್ಟಿಯಿಂದ ನಮ್ಮಂತಹ ಅಲ್ಪ ಮಾನವರಿಗೆ ಹೇಯ ವೆನಿಸದರೂ ಆತನು ಮಾಡಿದ ಪ್ರತಿಯೊಂದು ಕಾರ್ಯಗಳೂ ಆತನ ಅದ್ಭುತ ಮಹಿಮೆ ಎಂಬುದನ್ನು ದಾಸರು ಇಲ್ಲಿ ಹೇಳುತ್ತಿದ್ದಾರೆ .....
ತನ್ನನ್ನು ಹಡೆದ ತಾಯಿಯಾದ ರೇಣುಕೆಯನ್ನೇ ವಿಚಾರಮಾಡದೇ ಕೊಂದ ಭಾರ್ಗವನಾದ ಇವನಿಗೆ ನಾಚಿಕೆ ಇಲ್ಲವೇ ಇಲ್ಲಾ... ಅನ್ನುವಂತೇ....
ಒಬ್ಬ ಮಾವನ ಕೊಂದ= ಹಿಂಸೆಯೇ ಪ್ರತಿರೂಪನಾದ ಕಂಸನನ್ನು ಶ್ರೀಕೃಷ್ಣನಾಗಿ ಕೊಂದವನು , ಸೋದರಮಾವನನ್ನೇ ಕೊಂದ ಈತನಿಗೆ ನಾಚಿಕೆ ಎಲ್ಲಿದೆ ಅಲ್ವಾ ? ಹೀಗೆ ಬಂಧುಗಳನ್ನೇ ಕೊಂದ ನಾಚಿಕೆಗೇಡಿ ಈತನು... ನಮ್ಮ ಶ್ರೀಹರಿ... ಅಂತಾರೆ ಶ್ರೀ ದಾಸಾರ್ಯರು.....
ಒಬ್ಬ ಮಾವನ ಎಸೆದ= ಶ್ರೀರಾಮನು ಸಮುದ್ರಕ್ಕೆ ಸೇತುವೆ ನಿರ್ಮಿಸಲು ಮೂರುದಿವಸ ಸಮುದ್ರ ದಂಡೆಯ ಮೇಲೆ ಮಲಗಿದನು .ಸಮುದ್ರ ರಾಜನಾದರೂ ಸಹಕರಿಸಲಿಲ್ಲ, ಕೋಪಗೊಂಡ ರಾಮದೇವರು ಬಾಣವನ್ನು ಹೂಡಿ ಸಮುದ್ರದ ನೀರನ್ನೇ ಒಣಗಿಸಿ ದೂರ ಸರಿಸಿದನು . ಇದೇ ಸಮುದ್ರ ರಾಜನು ತನ್ನಲ್ಲಿ ಪ್ರಾದುರ್ಭವಿಸಿದ ಲಕ್ಷ್ಮೀದೇವಿಯನ್ನು ಶ್ರೀ ನಾರಾಯಣನಿಗೆ ವಿವಾಹ ಮಾಡಿಕೊಟ್ಟಿದ್ದರಿಂದ ಹೆಣ್ಣುಕೊಟ್ಟ ಮಾವನಾಗಿರುವನು . ಈ ಮಾವನನ್ನೇ ದೂರ ಎಸೆದವನು ನಮ್ಮ ಪರಮಾತ್ಮನು...
ಒಬ್ಬ ಮಾವನ ಕೂಡೆ ಕಡಿದಾದಡಿದ-- ಜಾಂಬವತಿಯನ್ನು ಜಾಂಬವಂತನು ಶ್ರೀಕೃಷ್ಣನಿಗೆ ಪರಿಣಯಮಾಡಿಕೊಟ್ಟಿದ್ದರಿಂದ ಜಾಂಬವಂತ ಶ್ರೀಕೃಷ್ಣನಿಗೆ ಮಾವನಾದನು . ಶ್ಯಮಂತಕ ಮಣಿಗಾಗಿ ಬಂದ ಶ್ರೀಕಷ್ಣನು ಜಾಂಬವಂತನ ಕೂಡ ಇಪ್ಪತ್ತೆಂಟುದಿನಗಳ ಕಾಲ ಯುದ್ಧಮಾಡಿದನು . ಹೀಗಾಗಿ ತನ್ನ ಮಾವನ ಜೋಡಿ ಕಡಿದಾಡಿದನು ಅಂತ..
ಒಬ್ಬ ಭಾವನ ಹಿಡಿದು ಹೆಡೆಮುರಿಯ ಕಟ್ಟಿದ--- ಕುಂಡಿನ ಪುರದ ರಾಜ ಭೀಷ್ಮಕನ ಮಗ ರುಕ್ಮಿ . ಅವನ ಸಹೋದರಿಯೇ ರುಕ್ಮಿಣಿಯು ಶ್ರೀಕೃಷ್ಣನನ್ನು ವರಿಸಿದಳು .ರಾಕ್ಷಸ ವಿವಾಹ ವಿಧಿಯಿಂದ ಅಪಹರಿಸಿ ಮದುವೆಯಾದನು .... ರುಕ್ಮಿಣಿಯನ್ನು ಕುಂಡಿನ ಪುರಕ್ಕೆ ಮರಳಿ ಕರೆತರದೇ ಪುರಪ್ರವೇಶ ಮಾಡಲಾರೆ ಎಂದು ಪ್ರತಿಜ್ಞೆಗೈದು ರುಕ್ಮಿಯು ಯುದ್ಧಕ್ಕೆ ಹೊರಟಿದ್ದನು . ಶ್ರೀಕೃಷ್ಣನು ಈ ಹೆಂಡತಿಯ ಅಣ್ಣನಾದ್ದರಿಂದ ಭಾವನೆನಿಸಿದ ರುಕ್ಮಿಯನ್ನು ಸೋಲಿಸಿ ಐದು ಶಿಖೆಗಳನ್ನು ಬಿಟ್ಟು ಮುಂಡನ ಮಾಡಿಸಿ ಕಳುಹಿಸಿದ್ದರಿಂದ ಒಬ್ಬ ಭಾವನ ಹಿಡಿದು ಹೆಡೆಮುರಿಯ ಕಟ್ಟಿದ ಅಂದಿದ್ದಾರೇ ಶ್ರೀ ಪುರಂದರದಾಸಾರ್ಯರು.......
ಒಬ್ಬ ಮೈದುನನಿಗೆ ಬಂಡಿಯ ಬೋವನಾದ-- ಶ್ರೀಕೃಷ್ಣನು ತನ್ನ ತಂಗಿಯಾದ ಸುಭದ್ರೆಯನ್ನು ಅರ್ಜುನನಿಗೆ ವಿವಾಹ ಮಾಡಿ ಕೊಟ್ಟಿದ್ದರಿಂದ ಅರ್ಜುನನು ಕೃಷ್ಣ ಪರಮಾತ್ಮನಿಗೆ ಭಾವಮೈದುನನಾದ . ಈ ಮೈದುನನಿಗೆ ಮಹಾಭಾರತಯುದ್ಧದಲ್ಲಿ ಸಹಾಯ ಮಾಡುವ ನಿಮಿತ್ತ ರಥದ ಸಾರಥ್ಯವನ್ನು ವಹಿಸಿದ್ದನ್ನೇ - ಒಬ್ಬ ಮೈದುನನಿಗೆ ಬಂಡಿಯ ಬೋವನಾದ , ಬೋವ ಅಂದರೇ ಸಾರಥಿ.. ಹೀಗಾಗಿ ಸಾರಧಿಯಾದ ಎಂದಿದ್ದಾರೆ...
ಕುಂಭಿಣಿಗೆ ಪತಿಯಾದ-- ಕುಂಭಿಣಿ ಎಂದರೆ ಭೂಮಿ , ವರಾಹಾವತಾರದಲ್ಲಿ ಭೂಮಿಯನ್ನು ತನ್ನ ಎಡದ ತೊಡೆಯಲ್ಲಿ ಕೂಡಿಸಿಕೊಂಡು ಪತ್ನಿಯಾಗಿ ಸ್ವೀಕರಿಸಿದನು .... ಹೀಗಾಗಿ ಕುಂಭಿಣಿಯ ಪತಿಯಾದ.....
ಕುಂಭಿನಿಗೆ ಸುತನಾದ= ಕುಂಭಿನಿಗೆ ಪತಿಯಾದವನು ಪುನಃ ಕುಂಭಿನಿಗೆ ಸುತನಾಗವದು ಅಂದರೇಇಲ್ಲಿ.... ಕುಂಭಿನಿ ಅಂದರೆ ಯಶೋದೆ . ಯಾಕೆ ಅಂದರೆ ನಂದಗೋಪನು ಕುಂಭದಲ್ಲಿಡಬಹುದಾದ ಹಾಲು ,ಮೊಸರು , ಮುಂತಾದ ವಸ್ತುಗಳನ್ನು ಮಾರಿ ಜೀವಿಸುತ್ತಿದ್ದ ಗೋಪರ ಒಡೆಯನಾದ್ದರಿಂದ ನಂದಗೋಪನಿಗೆ ಕುಂಭಿ ಎಂದು ಕರೆಯುವರು . ಆ ಕುಂಭಿಯ ಪತ್ನಿ ಯಶೋದಾದೇವಿ ಕಡಿಂದ ಕುಂಭಿನಿ ಎನಿಸಿಕೊಳ್ಳುವಳು . ಈ ಕುಂಭಿನಿಯಾದ ಯಶೋದೆಗೆ ಶ್ರೀಕಷ್ಣನು ಮಗನಾದ್ದರಿಂದ ಕುಂಭಿನಿಗೆ ಸುತನಾದ ಎಂದಿದ್ದಾರೆ ... ಅಲ್ಲದೇ ಯಶೋದೆ ಗೆ ಮೂಲರೂಪದ ಹೆಸರು ಧರ ಅಂತ .. ಹೀಗಾಗಿ ಕುಂಭಿನಿಗೆ ಸುತನಾದ ಧರಾಸುತ ಅಂತನೂ ಅರ್ಥ ಬರುತ್ತದೆ....
ಕುಂಭಿನೀ ಮಗನ ಸಂಹಾರ ಮಾಡಿದ= ಕುಂಭಿನಿ ಎಂದರೆ ಭೂದೇವಿ . ಭೂದೇವಿಯ ಮಗ ನರಕಾಸುರ . ಈ ನರಕಾಸುರನನ್ನು ಸಂಹಾರ ಮಾಡಿದ್ದರಿಂದ ಈ ಮಾತು ಹೇಳಿದ್ದಾರೆ ...
ಅಥವಾ ಇನ್ನೊಂದು ರೀತಿ ನೋಡಿದರೇ ವಸುದೇವನ ತಂಗಿ ಶೃತಶ್ರವೆ ಇವಳಿಗೂ ಕುಂಭಿನಿ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು , ಇವಳ ಪತಿ ದಮಘೋಷ (ಚೇದಿರಾಜ) ಇವರಿಬ್ಬರ ಪುತ್ರನೇ ಶಿಶುಪಾಲ , ಈ ಶಿಶುಪಾಲನನ್ನು ರಾಜಸೂಯಯಾಗದ ಸಂದರ್ಭದಲ್ಲಿ ಶ್ರೀಕೃಷ್ಣನು ಕೊಂದಿದ್ದರಿಂದ ಈ ಮಾತು ಹೇಳಿದ್ದಾರೆ ...... ಎಂದು ತಿಳಿಯಬಹುದು
ಅಂಬುಧಿಗೆ ಪಿತನಾದ= ಗಂಗಾನದೀ ಜನಕ ಅಂತ ಅರ್ಥ . ತ್ರಿವಿಕ್ರಮನ ಪಾದದಿಂದ ಜನಿಸಿದ ಗಂಗೆಯು ಭಗವಂತನ ಪುತ್ರಿ ಎನಿಸಿದ್ದಾಳೆ....
ಅಂಬುಧಿಗೆ ಸುತನಾದ==ಮತ್ಸ್ಯರೂಪ ಧರಿಸಿ ಕೃತಮಾಲಾ ನದಿಯಲ್ಲಿ ಸತ್ಯವೃತನಿಗಾಗಿ ಕಾಣಿಸಿಕೊಂಡಂತಹಾ ಮತ್ಸ್ಯರೂಪಿ ಪರಮಾತ್ಮನನ್ನೇ ಇಲ್ಲಿ ಅಂಬುಧಿಯ ಸುತ ಎನ್ನಲಾಗಿದೆ ...
ಅಂಬುಧಿಜಾತೆಗೆ ಸ್ವಾಮಿಯಾದ= ಅಂಬುಧಿ ಅಂದರೆ ಸಮುದ್ರ. ಸಮುದ್ರದಲ್ಲಿ ಜನಿಸಿದವರು ಶ್ರೀಲಕ್ಷ್ಮೀದೇವಿಯರು, ಲಕ್ಷ್ಮೀದೇವಿಯರನ್ನು ವಿವಾಹವಾಗಿ ಸ್ವಾಮಿಯೆನಿಸಿದ .....
ಬೊಮ್ಮನ ಸಂಹರಿಸಿ ಅವನ ಮಕ್ಕಳನು
ಈ ಮಹಿಯೊಳಗವರ ಹತಮಾಡಿದ
ಪ್ರಳಯಕಾಲದಲ್ಲಿ ಬ್ರಹ್ಮನನ್ನು ಭಗವಂತನು ನುಂಗುವನು... ಆದ್ದರಿಂದ ಬ್ರಹ್ಮನ ಸಂಹರಿಸಿ ಎಂದಿದ್ದಾರೆ .
ಸೃಷ್ಟಿಕಾಲದಲ್ಲಿ ಬ್ರಹ್ಮದೇವರ ಮಕ್ಕಳಾದ ಮರೀಚಿಋಷಿಗಳ ಪುತ್ರರಾದ ಕಶ್ಯಪರ ಪತ್ನಿ ದಿತಿಯ ಮಕ್ಕಳೇ ದೈತ್ಯರು . ಈ ದೈತ್ಯರು ಬ್ರಹ್ಮದೇವರಿಂದ ಅವಧ್ಯತ್ವವನ್ನು ಪಡೆದಿದ್ದರೂ ಸಹಾ ಅನೇಕ ಅವತಾರಗಳನ್ನು ಮಾಡಿ ಬ್ರಹ್ಮದೇವರ ವರಕ್ಕೆ ಧಕ್ಕೆ ಬಾರದಂತೆ ಸಂಹರಿಸಿದ್ದಾನೆ ....
ಈ ರೀತಿಯಾಗಿ ಅನೇಕ ಅವತಾರಗಳನ್ನು ಎತ್ತಿ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಿದ ರಮಾಪತಿಯಾದ ಈ ವೈಕುಂಠಪತಿಗೆ , ಬ್ರಹ್ಮದೇವರು , ಮಾರುತಿ , ರುದ್ರದೇವರು , ಹೀಗೆ ಬಂಧು-ಬಳಗದ ಅವಶ್ಯಕತೆ ಇದೆಯೇ ? ಸರ್ವಥಾ ಇಲ್ಲ ಎಲ್ಲರಲ್ಲೂ ನಿಂತು ಆ ಯಾ ಹೆಸರಿನಿಂದಲೇ ಕರೆಸಿಕೊಂಡು ಸರ್ವಪ್ರೇರಕನಾದ, ಸರ್ವಶಕ್ತನಾದ, ಸರ್ವತಂತ್ರಸ್ವತಂತ್ರನಾದ ನಮ್ಮ ನಾರಾಯಣನಿಗೆ ಈ ಬಂಧುಬಳಗ ಯಾಕೆ ಬೇಕು ? ಭಕ್ತರಿಗೆ ಒಲಿದು ಭಕ್ತರ ಹೃದಯದಲ್ಲಿ ನೆಲೆಗೊಳ್ಳುವ ನಮ್ಮ ನಾರಯಣನಿಗೆ ಯಾವ ಬಂಧುಬಳಗದ ಅವಶ್ಯಕತೆಯೂ ಇಲ್ಲವೇಯಿಲ್ಲ ಎನ್ನುವದನ್ನು ಶ್ರೀಮತ್ಪುರಂದರದಾಸರು ಇಲ್ಲಿ ನಮ್ಮ ಕಲ್ಪನೆಗೂ ನಿಲುಕದಂತಹಾ ಅತ್ಯಧ್ಭುತ ಮಹಿಮೆಗಳನ್ನು ವರ್ಣಿಸುವದರ ಮುಖಾಂತರ ಶ್ರೀಹರಿಯು ಅನಿಮಿತ್ತಬಾಂಧವ ಎಂಬುದನ್ನು ನಿರೂಪಿಸಿದ್ದಾರೆ......
ಇಂಥಹಾ ಅದ್ಭುತವಾದ ಮುಂಡಿಗೆಗಳ, ಪದಗಳ ಮುಖಾಂತರ ಹರಿಯ ಶ್ರೇಷ್ಠ ಗುಣಗಾನವನ್ನು ಮಾಡುತ್ತಾ ನಮ್ಮೆಲ್ಲರಿಂದ ಮಾಡಿಸುವಂಥಹಾ ಶ್ರೀ ಪುರಂದರದಾಸರೂ ಹಾಗೂ ಎಲ್ಲಾ ಶ್ರೇಷ್ಠ ದಾಸರಿಗೂ ಅನಂತಾನಂತ ನಮಸ್ಕಾರಗಳು ಅವರ ಪಾದಪದ್ಮಗಳಿಗೆ ಅರ್ಪಿಸುತ್ತಾ....
-Smt. Padma Sirish
ನಾದನೀರಾಜನದಿಂ ದಾಸಸುರಭಿ🙏🏽
****