by yadugiriyamma
ಕೊಟ್ಟಿಗೋತ್ಸವ ಗೀತೆ
ಕೊಟ್ಟೊಗೋತ್ಸವ ನೋಡಿ ಸೃಷ್ಟಿಗೀಶ್ವರನ ಪ.
ವಾಸುದೇವನ ಸಹಸ್ರಸ್ತಂಭಮಂಟಪವ
ದಾಸರು ಬಂದು ಶೃಂಗಾರವ ಮಾಡಿ
ದೇಶದ ಮೇಲುಳ್ಳ ಬೊಂಬೆಗಳನು ರಚಿಸಿ
ಲೇಸಾದ ಮೇಲುಕಟ್ಟುಗಳ ಕಟ್ಟಿದರು 1
ಸೃಷ್ಟಿಗೀಶ್ವರನಾದ ರಂಗನಾಥನಿಗೆ
ಕೊಟ್ಟಿಗೋತ್ಸವವನ್ನು ನಡೆಸಬೇಕೆನುತ
ಕಟ್ಟಿ ಕಂಕಣವನ್ನು ನಾಲ್ಕುವೇದಗಳಿಂದ
ಭಟ್ಟರು ಓದಿ ಪೇಳಿದರು ಸಂಭ್ರಮದಿ 2
ವಜ್ರದ ಕಿರೀಟವಿಟ್ಟು ರತ್ನದಂಗಿಯ ತೊಟ್ಟು
ಅರ್ಜುನಸಖ ಸಂಭ್ರಮದಲಿ ಪೊರಟು
ಸ್ವರ್ಗದ ಬಾಗಿಲೊಳಗೆ ತಾ ನಿಂದು
ಮೂರ್ಜಗವೆಲ್ಲ ಮೋಹಿಸುತಲೆ ಬಂದು 3
ಮಂದಹಾಸದಲಿ ನಿಂದು ಮಂಟಪದಲಿ
ಬಂದ ಆಳ್ವಾರರಿಗಾಸ್ಥಾನವಿತ್ತು
ಚಂದದಿಂದ ದಿವ್ಯ ಪ್ರಬಂಧವ ಕೇಳಿ
ಒಂದುಅಂಕಣ ಬಿಡದೆ ಬಂದ ಶ್ರೀರಂಗ 4
ಸಂಕ್ರಾಂತಿಯಲಿ ಶಂಕರನ ಪ್ರಿಯನು
ಶಂಕೆ ಇಲ್ಲದೆ ಆಭರಣವನು ಧರಿಸಿ
ಪಂಕಜಮುಖಿಯರೊಡಗೊಂಡು ಹರುಷದ
ಲಂಕಾರವಾಗಿ ಬಂದನು ಮಂಟಪಕೆ 5
ಮತ್ತೆ ಮರುದಿನದಲ್ಲಿ ಭಕ್ತವತ್ಸಲನು
ಮುತ್ತಿನಅಂಗಿ ಮುಂಡಾಸನಳವಡಿಸಿ
ಮುತ್ತಿನಛತ್ರಿ ಚಾಮರ ಸೂರೆಪಾನದಿ
ಮುತ್ತರಸಿಯ ಮಂಟಪಕೆ ನಡೆತಂದ 6
ಅರ್ಥಿಯಿಂಬಂದು ತಾ ಅಶ್ವವನೇರಿ
ಮತ್ತೆ ಬೇಟೆಯಮೃಗವನೆ ಕೊಂದು ಸಂ
ಕ್ರಾಂತಿಯ ಪಾರ್ವೇಟೆಯನಾಡಿ
ಸಂತೋಷದಿ ಬಂದ 7
ನಾರಿವೇಷವ ಆಳ್ವಾರರಿಗೆ ಧರಿಸಿ
ಪೇರಿಯ ತಾ ಬಿಟ್ಟು ತೇಜಿಯನೇರಿ
ಚೋರತನವ ಮಾಡಿದ ಭಕ್ತರಿಗೆ
ಮೂಲಮಂತ್ರವ ಪೇಳಿ ಮುಕ್ತಿಯನಿತ್ತ 8
ಮಿಂದು ಮಡಿಯನುಟ್ಟು ಅಂದು ರಾತ್ರಿಯಲಿ ಹ
ನ್ನೊಂದು ವಿಧ ಭಕ್ಷ್ಯಗಳನು ತಾ ಗ್ರಹಿಸಿ
ಬಂದ ಆಳ್ವಾರರಿಗೆ ಮುಕ್ತಿಯನಿತ್ತು
ಬಂದು ಆಸ್ಥಾನದಿ ನಿಂದ ಶ್ರೀರಂಗ 9
ಭಕ್ತರು ಮಾಡಿದ ಪ್ರಬಂಧವನೆಲ್ಲ
ಭಕ್ತಿಯಿಂದಲೆ ಪೇಳಿದ ಆಚಾರ್ಯರಿಗೆ
ಯುಕ್ತಿ ತೋರಿದ ಪರಾಶರವ್ಯಾಸರಿಗೆ ಬ್ರಹ್ಮ
ರಥವನಿತ್ತ ಬ್ರಹ್ಮಾಂಡರೂಪ 10
[ಶೌ]ರಿಯು ತಾನಿರಲು ಮೇಘಮಂಡಲದಂತೆ
ತೋರುವುದು ತಾರಕೆಯಂತೆ ಮೈಯುಡುಗೆ
ವಾರಿಜನಾಭನ ಮುತ್ತಿನಂಗಿಯ ನೋಡು
ವವರಿಗೆ ತಾ ಆನಂದವಾಗಿಹುದು 11
ಕ್ಷೀರಸಾಗರದಲ್ಲಿ ಪವಡಿಸಿಹ ಹರಿಗೆ
ಕ್ಷೀರಬಿಂದುಗಳು ಮೈಯೊಳಗೆ ಬಿದ್ದಂತೆ
ವಾರಿಜನೇತ್ರಗೆ ವಜ್ರದನಾಮವು
ಧರಿಸಿದರು ಹೇಮದ ಪಾದಹಸ್ತಗಳ 12
ಮುತ್ತಿನಂಗಿಸೇವೆ ನೋಡಬೇಕೆನುತ
ಹತ್ತುಸಾವಿರ ಪ್ರಜೆ ಬಂದು ನಿಂತಿರಲು
ಇತ್ತು ಕಾಣಿಕೆಯನು ನೋಡಿ ವೆಂಕಟರಂಗನ
ಮುಕ್ತರಾದೆವೆಂದು ಭಕ್ತರು ನುಡಿದರು 13
****