Audio by Vidwan Sumukh Moudgalya
ಶ್ರೀ ವಿಜಯದಾಸಾರ್ಯ ವಿರಚಿತ
ಚತುರ್ದಕ ವಿಧ ತಾರತಮ್ಯ ಕರ್ಮ ಜ್ಞಾನ ಭಕ್ತಿ ಯೋಗಗಳ ಸಾಧನ ವಿಚಾರ, ಸಾಧನ ಕಲ್ಪ ಬಿಂಬದರ್ಶನ ಪ್ರಮಾಣ ಜ್ಞಾನವ್ಯಾಪ್ತಿ ಸುಳಾದಿ
ರಾಗ : ಶಂಕರಾಭರಣ
ಧ್ರುವತಾಳ
ಸ್ವರಮಣ ಸ್ವತಂತ್ರ ಸುಗುಣ ಸಾಕಾರ ಸುಂದರ
ಪರಬೊಮ್ಮ ಸರ್ವಜ್ಞ ವ್ಯಾಪ್ತ ವ್ಯಕ್ತಾವ್ಯಕ್ತ
ನಿರುಪಾಧಿಕ ಭಕ್ತಪಾಲ ನಿಸ್ಸಂಗ ಅಪ್ರಾಕೃತ
ಶರೀರ ನಿರವಕಾಶ ಪ್ರಮೇಯಭರಿತ
ಹರಿ ಸರ್ವೋತ್ತಮ ನಿತ್ಯ ನಿಖಿಳೈಶ್ವರ್ಯ ಭೂಮ
ಸರ್ವದ ಲಿಂಗ ಸೂಕ್ಷ್ಮ ಸ್ಥೂಲ ದೇಹದ ತತ್ವದಲ್ಲಿ
ಪೊರೆವಗೋಸುಗ ವಸತಿಯಿಪ್ಪ ಈಶಾ
ಪರಿಪೂರ್ಣ ಪ್ರಭು ಪ್ರಣವ ಪ್ರತಿಪಾದ್ಯ ಇಂದಿರೆ-
ಯರಸ ಪರತತ್ವ ನಾನಾರೂಪ ಸುಪ್ರತಾಪ
ಎರಡೊಂದು ಯೋಗ್ಯರನ್ನು ನೋಡಿ ಮುಕ್ತಿ ಜೀವರ
ತರತಮ್ಯ ಚತುರ್ದಶ ಬಗೆ ನೇಮಿಸಿ
ಹಿರಿದಾಗಿ ಅಂಶಾನಂದ ಬಲಜ್ಞಾನ ದೇಶ ಕಾಲ
ಮರಳೆ ಅಪರೋಕ್ಷಲಯ ಸೃಷ್ಟಿ ಪದ
ತರುವಾಯ ಅವೇಶ ಗುಣ ಲಕ್ಷಣ ಕಾಂತಿ
ಪರಿಯಿಂತು ಮಾಡಿದ ಸಾಂಶ ಜನಕೆ
ನರಗಾಯಕ ವಿಡಿದು ತೃಣಾಂತ ಗುಣಿಸುವುದೀ
ಪರಿಯಾಗಿಪ್ಪುದು ಗ್ರಹಿಸಬೇಕು
ಸರುವ ಜೀವರನ್ನು ಸೃಜಿಸಿತತ್ತತ್ಸಾಧನವ
ಪರಿಮಿತ ಮಾಡಿ ಇಪ್ಪಾ ಸ್ವಾಭಾವಿಕಾ
ಹರಿ ಸತ್ಯ ಸಂಕಲ್ಪ ಅನಾದಿ ಸಿದ್ಧಾ
ಕರ್ಮ ಮಾರ್ಯದೆಯಿಂದಲಿ ಸಾಧನೆ ಮಾಡಿಸಿ
ಕರಣು ಶುದ್ಧಿಯಾಗಲು ಭಕ್ತಿ ಪ್ರಸಾದ ಬಲು
ಗುರು ವುಪದೇಶ ಜ್ಞಾನ ಪ್ರಬಲವಿತ್ತು
ಹರಿ ತನ್ನ ಖಂಡಾಖಂಡ ಧ್ಯಾನ ಕ್ರಮದಿಂದ
ದರ್ಶನ ಕೊಡುವ ಅನುಭವಪ್ರಕಾರ
ಚರಿಸುವ ಕರ್ಮಜ್ಞಾನ ಭಕುತಿಯೋಗ್ಯರಿಗೆ ಶ್ರೀ
ಯರಸನು ಪ್ರತ್ಯೇಕ ಪ್ರತ್ಯೇಕ ಜೀವರಲ್ಲಿ
ವರ ಮೂರ್ತಿದರ್ಶನ ಸ್ವಯೋಗ್ಯರಿಗೆ ತಾ
ಸದ್ಗುರು ದೊರಕದಲೆ ಪ್ರಾಪ್ತಿಯಿಲ್ಲಾ
ಸ್ಥಿರವಾಗಿ ತಿಳಿವುದು ದೇಶಕಾಲ ವೇದಾಕ್ಷರ ಜೀ-
ವ ರಮಾ ಈಶ ಈ ಜಡೇಂದ್ರಿಯಂಗಳಿಗೆ
ಸ್ಮರಣೆ ಪುಟ್ಟದು ಕಾಣೊ ಹರಿ ಗೋಚರಿಸುವದೆತ್ತ
ಸ್ವರೂಪೇಂದ್ರಿಯಂಗಳಿಗೆ ಕೇವಲ ಸ್ಪಷ್ಟ
ಹರಿಯಿಚ್ಛೆಯಿಂದ ಇಂತಾಗುವದೋ ತಾ-
ತ್ಪರ್ಯಾರ್ಥ ತಿಳಿವುದು ಗ್ರಂಥದಲ್ಲಿ
ವರ ಮೂರ್ತಿ ನಮ್ಮ ವಿಜಯವಿಠ್ಠಲರೇಯ
ಶರಣ ಜನಕ್ಕೆ ತನ್ನ ಪುರದಲ್ಲಿಡುವನು॥೧॥
ಮಟ್ಟತಾಳ
ತೃಣ ಮೊದಲು ಮಾಡಿ ಮನುಜ ಗಂಧರ್ವರಿಗೆ
ಎಣಿಸು ನಿರಂಶರು ಪ್ರತೀಕಾಲಂಬನರು ಎನ್ನಿ
ಜನುಮ ಜನುಮ ಧರಿಸಿ ಪಾಪ ಪುಣ್ಯಗಳಿಂದ
ಗಣನೆಯಿಲ್ಲದೆ ಯಿಲ್ಲಿ ಸುಖ ದು:ಖವನುಂಡು
ಕೊನೆಗೆ ಬರುತ ಬರುತ ಅನಿಷ್ಟದಿಂದಲಿ ಕರ್ಮವನೆ ಎಸಗಿ
ಅನುದಿನದಲ್ಲಿ ಮನಕೆ ಹೇಯವನು ಪುಟ್ಟಿ
ಜನುವ ಸಾಸಿರ ತೆತ್ತಿ ತತ್ಸಾಧನೆ ಮಾಡಿ
ಇನಿತರೊಳಗೆ ಹತ್ತು ಜನುಮದಲೀ ಜ್ಞಾನ
ಮನಸಿಲಿ ಸಂಪಾದಿಸಿ ತನು ಶುದ್ದನಾಗಿ ಸದ್ಭಕ್ತಿಮೂರು
ಜನುಮಕೆ ಕೈಕೊಂಡು ಹೃದಯ ಸ್ಥಾನ ದರು-
ಶನವಾಗುವದಯ್ಯಾ ವಾಸನ ಮಯವೆನ್ನಿ
ಅನಿಲನ ದಯದಿಂದ ಸಹಸ್ರಧದಿ ಮೂರು
ಜನುಮಕ್ಕೆ ವೈರಾಗ್ಯ ಜ್ಞಾನ ಭಕುತಿ ಪಡೆದು
ಮನಸಿಜನಯ್ಯನ ಕಾಣುವರು ಬಿಡದೆ
ಪ್ರಣತನಾಗುವ ಕೇವಲ ನಿಷ್ಕಾಮದಲ್ಲಿ
ಜನುಮ ಜನುಮಕ್ಕೆ ಕ್ರಮಾತು
ನೆನಿಸುವರು ಇವರೆ ಕರ್ಮಯೋಗಿಗಳೆನ್ನು
ಅನಿಮಿತ್ತ ಬಂಧು ವಿಜಯವಿಠ್ಠಲರೇಯ
ಮನುಜ ಗಾಯಕ ತನಕ ಈ ಪರಿ ನಡಿಸುವ ॥೨॥
ರೂಪಕತಾಳ
ಭಗವದ್ದರ್ಶನ ಲಾಭ ತೃಣ ಕ್ರಿಮಿ ಕೀಟ ಕಾ-
ದಿಗಳ ಕಾಲ ಪರಿಮಿತ ಪಾದೋನ ಘಟಕಾ
ಯುಗಳ ದೃಷ್ಟಿಗಳಿಂದ ನೋಳ್ಪರು ಪ್ರದೀಪದಿ
ಬಗೆಯಾಗಿ ಬದರಿ ಪ್ರಮಾಣದಂತೆ ನಿತ್ಯಾ
ಮಗುಳೆ ವೃಕ್ಷ ಜೀವ ಘಟಿಕಾ ಪರಿಮಿತ ಪ-
ನ್ನಗ ತಲ್ಪನ್ನ ದಶ ದೀಪಾದುನ್ನತ ಮನ
ತೆಗೆಯದಲೆ ಕಾಂಬೋರು ಅಂಗುಟ ಮಾತ್ರ ಮಿತಿ
ಖಗ ಮೃಗ ಪಶು ಮಿಕ್ಕ ಜೀವರಾಶಿಗಳು ಘ-
ಳಿಗೆ ಸಾರ್ಧಕಾಲ ನೂರು ದೀಪದ ಕಾಂತಿ
ಮಿಗೆ ಮನುಜೋತ್ತಮರು ಚತುರ್ಗುಣೋಪಾಸಕರು
ಅಗಣಿತ ಮಹಿಮನ್ನ ಮಿಂಚಿನೋಪಾದಿಯಲಿ ಹೃದ್-
ಗಗನದಲಿ ನೋಳ್ಪರು ತಮ್ಮ ಎರಡು ಘಳಿಗೆ
ಪೋಗಳಲೇನು ನೃಪರು ದಶಮಿಂಚಿನಂತೆ ಘ-
ಳಿಗೆ ಮೂರು ಪರಯಂತ ಬಿಂಬನನೀಕ್ಷಿಪರು
ತಗಲಿ ಮನುಜ ಗಂಧರ್ವ ಜನ ನೋಡುವ
ಬಗೆ ಕೇಳು ಇಪ್ಪತ್ತು ಮಿಂಚಿನಂದದಿ ಘ-
ಳಿಗೆ ನಾಲ್ಕು ಸಿದ್ಧವೋ ತಮ್ಮ ತಮ್ಮ ಸ್ಥೂಲ ಹೃ-
ದ್ಗಗನದಲ್ಲಿದರೊಳು ತಾರತಮ್ಯ ಪ್ರಕಾಶ
ಯುಗ ಪೇಳುವುದೇನು ಇವರ ಪರಿಯಂತ ಕ-
ಣ್ಣಿಗೆ ತೋರ್ಪ ಹರಿ ಮಂಟಪ ಸಹಿತ ಇಲ್ಲದಲೆ
ಪಗೆದಲ್ಲಣ ನಮ್ಮ ವಿಜಯವಿಠ್ಠಲರೇಯ
ಯುಗ ಯುಗದಲ್ಲಿ ಜ್ಞಾನ ವ್ಯಕ್ತಿ ಮಾಡಿ ಕೊಡುವಾ॥೩॥
ಝಂಪಿತಾಳ
ಏನೆಂಬೆ ಇಲ್ಲಿ ಪರಿಯಂತ ನಿರಂಶರು
ನಾನಾ ಯೋನಿ ಜನ್ಮ ಇವರಿಗುಂಟು
ಜ್ಞಾನ ಶೂನ್ಯರಯ್ಯಾ ಅಪರೋಕ್ಷದ ಪರಿಯಂತ
ಕಾಣರು ಸತ್ಸಂಗ ಲೇಶಮಾತ್ರ
ಮಾಣು ಈ ಪರಿಯಂತೆ ಮುಂದೆ ಕೇಳುವುದು ಸುಪ-
ರ್ವಾಣ ಗಂಧರ್ವ ಕರ್ಮದೇವತನಕಾ
ಜ್ಞಾನ ಯೋಗಿಗಳೆಂದು ಕರೆಸುವರು
ಭಾನು ಮಂಡಲದಂತೆ ಕಾಂಬಸಾಂಶರು
ಪ್ರಾಣಾಧಿಷ್ಠಾನದಲ್ಲಿ ಪ್ರತೀಕಾಲಂಬಾ
ನಾನಾ ಜನುಮ ಧರಿಸಿ ಅಂಶದಿಂದಲಿ ಬಳಲಿ
ಜ್ಞಾನ ವಿರಹಿತರಾಗಿ ಭವದಲಿದ್ದು
ಸ್ನಾನಾದಿ ಪುಣ್ಯದಿಂದ ಸದ್ಗತಿಗೆ ಬರಲು ನಿ-
ಧಾನಿಸಿ ಸತ್ಕರ್ಮ ನೂರುಜನ್ಮ
ತಾನು ಕೈಕೊಂಡು ಆಮೇಲೆ ಸಾವಿರ ಜನ್ಮ
ಮೇಣು ಧರಿಸಿ ಜ್ಞಾನವಂತನಾಹ
ಜ್ಞಾನ ಕರ್ಮದಿಂದ ಮುನ್ನೂರು ಜನ್ಮಕ್ಕೆ
ತ್ರಾಣನಾಗುವ ಸದ್ಭಕ್ತಿ ಪ್ರಾಪ್ತಿ
ಈ ನಿರಂತರ ಇನಿತು ಮಾಡಲಾಗಿ ಹರಿಯ
ಕಾಣುವ ಉಪಾಯವಿದು ಅಪರೋಕ್ಷವು
ಹೀನವಾಗದೊ ನಿತ್ಯ ಅಭಿವ್ಯಕ್ತಿ ಹರಿರೂಪ
ಭಾನುಮಂಡಲ ಕಾಂತಿ ಶೋಭಿಸುವದು
ಮಾಣದಲೆ ಆರು ಘಳಿಗೆ ಕಾಲ ಪರಿಮಿತ
ಮಾನಸದಲಿ ಹರಿಯ ನೋಳ್ಪರಯ್ಯಾ
ಕ್ಷೀಣವಿಲ್ಲದೆ ಕೃಷ್ಣಾಂಗ ಸಂಗ ಗೋಪಿಯರು
ಕಾಣುವರು ಘಳಿಗೆಂಟು ಸಹಸ್ರ ಐದು
ಭಾನುಮಂಡಲದಂತೆ ಮತ್ತೆ ಆ-
ಜಾನ ಕೃಷಾನ ಪುತ್ರರು ಸೋಳಸಾವಿರ ಜನ
ಈ ನಾಡಿ ಹತ್ತು ಪರಿಮಿತ ಅಯುತ ಮಂಡಲದಂತೆ
ನಾನಾ ಪ್ರಕಾರದಲಿ ನೋಡುವರು
ಮೌನಿಗಳಲ್ಲದೆ (ಮಾನದಲ್ಲಿದ್ದ)ದೇವತಿಗಳು ಕೋಟಿ
ಭಾನುಮಂಡಲದಂತೆ ಅರ್ಧ ದಿವಸ ಕಾಂಬುವರು
ಸಪ್ತದ್ವೀಪ ಲೋಕಸಹಿತ ವೈರಾಜ
ಧ್ಯಾನದಲ್ಲಿ ಕುಳಿತು ಭಕ್ತಿರಸದೀ
ಜ್ಞಾನಯೋಗಿಗಳು ದ್ವಿವಿಧ ಉಂಟು ಗುಣಿಸುವರು
ಗೌಣ ಅಧಿಕವಾಗಿ ಕ್ರಮ ವಿವರಾ
ಆನಂದಮೂರುತಿ ನಮ್ಮ ವಿಜಯವಿಟ್ಠಲರೇಯ
ಪ್ರಾಣನಾಗಿ ತನ್ನ ಭಕುತರನ ಪೊರೆವಾ॥೪॥
ತ್ರಿವಿಡಿತಾಳ
ಭಕುತಿಯೋಗಿಗಳಾಗಿ ವರಪುಶ್ಕರಾದ್ಯರು ತಾ-
ತ್ವಿಕರೆಂದೆನಿಸುವರು ಈ ಕಾಲಕ್ಕೆ
ಪ್ರಕಟವಾಗಿಪ್ಪರು ಅವರವರವರ ತಕ್ಕದ್ದು
ಸುಖದುಃಖ ಕೊಡುವರು ಉತ್ತಮರಿಂದ
ಸಕಲ ತೃಣಾದ್ಯರು ಸ್ವಹೃದಯದಲಿ ಶ್ರೀ
ಲಕುಮಿ ಅರಸನ್ನ ನೋಳ್ಪರು ದೀಪದಂತೆ
ಅಖಿಳ ವೈಭವವಿಲ್ಲ ಮಂಟಪ(ಪುಟ್ಟುವ)ಪರಿವಾರ
ತಕತಕ್ಕ ವಿಧವಿಲ್ಲ ಪ್ರಾರಂಭಕ್ಕೆ
ಅಕಳಂಕರಹುದಯ್ಯಾ ರುದ್ರಗಣ ಪರಿಯಂತ
ಚಕಿತ ತಾರತಮ್ಯ ಅರ್ಧ ಘಟಿಕಾ
ಸ್ವಕಳೆರವದಲ್ಲಿ ಇಂದುಕಾಂಬುವರಿಂತು
ತ್ವಕ್ಕಭಿಮಾನಿ ಮೊದಲಾದವರು
ಉಕುತಿ ಲಾಲಿಸುವದು ಬಹು ಸ್ಥೂಲ
ಹೃತ್ಕರ್ಣಿಕೆಯಲ್ಲಿ ವಿಶೇಷ ದರ್ಶನ ಲಾಭ
ಶಕುತಿವಂತರು ಕಾಣೋ ಅಪರೋಕ್ಷಕಾಲಕ್ಕೆ
ತ್ರಿಕರಣ ಶುದ್ಧದಲ್ಲಿ ತಮ್ಮ ಬಿಂಬಾ ಅ-
ಧಿಕವಾಗಿಕೋಟಿ ಆರಂಭಿಸಿ ವಾರಿಜ
ಸಖನಂತೆ ನೋಳ್ಪರು ದಿನಾನಂತ ತನಕಾ
ಅಖಿಳೇಶ್ವರನ ಕಾಂಬೋರು ತಾರತಮ್ಯಾ
ಭಕುತಿಮಾತುರದಿಂದ ವಿಶಿಷ್ಟವು
ಮಖ ಮಿಕ್ಕಾದ ಸತ್ಕರ್ಮಗಳು ನಿಶ್ಕಾ-
ಮುಖರಾಗಿ ಮಾಡುವರು ನಿಜರೂಪದಿ
ಭಕುತಿಗೋಸುಗವಲ್ಲ ಅಪ್ರತೀಕಾಲಂಬರಾ-
ರ್ಚಕರು ಕಾಣೋ ಇಲ್ಲಿ ದ್ವಿವಿಧವಕ್ಕು
ಮಕ್ಕಳ ಮಾಣಿಕ್ಯ ರಂಗ ವಿಜಯವಿಟ್ಠಲರೇಯ
ಮುಕುತಿಯ ಪಾಲಿಸುವ ಪ್ರಸಾದ ತ್ರಯದಿಂದ॥೫॥
ಅಟ್ಟತಾಳ
ದಶಯೋಜನ ವ್ಯಾಪ್ತಿ ತೃಣಕೀಟಕಾದಿ ದ್ವಿ-
ದಶ ಯೋಜನ ವ್ಯಾಪ್ತಿ ಪಕ್ಷಿ ಮೃಗಾದಿಗೆ
ಎಸೆವ ಮನುಜರಿಗೆ ಮಂಡಲ ಪರಿಯಂತ
ವಸುಮತ್ತೀಶ್ವರರಿಗೆ ಯೆಂಭತ್ತು ಯೋಜನ
ಮಿಸಕದೆ ಮರ್ತ್ಯ ಗಂಧರ್ವಜನಕೆ ಯೆ-
ಣಿಸುವುದು ಇನ್ನೂರು ನಾಲ್ಪತ್ತ್ಯೋಜನ
ಪುಸಿಯಲ್ಲ ನಿರ್ಜರ ಗಂಧರ್ವರಿಗೆ ಮೇರು
ಪೆಸರಾದ ಚಿರ ಪಿತ್ರರಿಗೆ ಭುವರ್ಲೋಕ
ವಸತಿ ಅಂತ್ಯ ಭಾಗ ಕೃಷ್ಣಾಂಗ ಸಂಗ ಸಂಚ-
ರಿಸಿದ ಗೋಪೇರಿಗೆ ಉಪಸ್ವರ್ಗಮಿತಿ
ತತ್ಸಮಾನ ಆಜಾನಜರಿಗೆ ದರ್ಶನ ಸ್ವರ್ಗಾಂತವೋ ಸಂ-
ತತವಾಗಿ ಯೋಗ್ಯತಾ ಕ್ರಮಾತು
ಮಿಸುಣಿಪ ವಿರಾಟ ವಿಗ್ರಹ ದರ್ಶನ ರಾ-
ಜಿಸುವರು ಕರ್ಮಜ ದೇವತಿಗಳು ನಿರಂತರಾ
ಪೆಸರುಂಟು ಇಲ್ಲಿ ಪರಿಯಂತ ಸಾಂಶ
ವೆಸರು ಕೇಳಿ ದೇವದಾಸರು ಯೆಂದು
ಚನ್ನಾಗಿ ದಶಯೋಜನದಿಂದ ಕರ್ಮದೇವರ ನೋಡೆ
ಹಸನಾದ ವಿಗ್ರಹ ಪೂಜಾಧಿಕಾರರು
ಬೆಸಸುವೆ ಪುಷ್ಕರಾದ್ಯ ಶಕ್ರಾಂತವೋ
ಬಿಸಜ ಭವಾಂಡ ಬಹಿಪೃಥ್ವಿಯಿಂದ
ವಶವಲ್ಲ ಮಾನಸ ತತ್ವಾಂತ ಸಂತತ ನೀಕ್ಷಿಸಿ ಧೇ-
ಣಿಸಿ ಉಪಾಸನೆಯ ಮಾಡುವರು
ಕುಸುಮನಾಭನ ಅನುಗ್ರಹಕೆ ಪಾತ್ರರು
ಕುಶಲವಂತರೆ ಸರಿ ನೋಳ್ಪರಲ್ಲಿ ತಾರತಮ್ಯ
ಬಿಸಿಗಣ್ಣ ಮಹದೇವ ಅಹಂಕಾರ ತತ್ವ ವ್ಯಾ-
ಪಿಸಿಕೊಂಡು ನೋಡುವ ಸಮಸ್ತ ಬಗೆಯಿಂದ
ದಿಶ ಸಪುತ ದ್ವೀಪವನಧೀ ಪರ್ವತ ಮೃಗ
ವಸುಮತಿರುಹ ವಾರಿಚರ ಸರ್ವಜೀವಾಧಿ
ಶಶಿ ಸೂರ್ಯ ಭುವರ್ಲೋಕ ಸ್ವರ್ಗ ಉಳಿದವೆಲ್ಲಾ
ಎಸಳು ಸ್ಥೂಲ ಸೂಕ್ಷ್ಮ ಸರ್ವ ವಿಷಯೀಕರಿಸಿ
ನಿಶೀ ಹಗಲೆನ್ನದೆ ಸಕಲಕಾಲ ದರ್ಶಿಗಳಾಗಿ
ತ್ರಸರೇಣು ಮೊದಲಾದ ಅಣು ಮಹತ್ತಿನಲ್ಲಿ
ಬಿಸಜಾಕ್ಷನ ನೋಳ್ಪರೋ ಅನಂತ ಬಗೆ
ಶಶಿವರ್ಣ ಕಾಯ ಶ್ರೀವಿಜಯವಿಟ್ಠಲ ಸುಮ-
ನಸರಿಂದ ಸೇವ್ಯಮಾನ್ಯನು ಕಾಣೋ ಸರ್ವದ॥೬॥
ಆದಿತಾಳ
ಗರುಡಾದಿಗಳಿಗೈವತ್ತು ಇಂದ್ರ ಜೀವರಿಗಿಪ್ಪತ್ತು
ಮರುತಾಹಂಕಾರ ಹದಿನೆಂಟು ಅನಿರುದ್ಧ ದಕ್ಷಾ-
ದ್ಯರು ಗುರು ಮನು ಶಚಿ ರತಿಗೆರಡೆಂಟು
ಮರುತ ದ್ವಾದಶ ಹತ್ತು ಸೂರ್ಯ ಚಂದ್ರಾದ್ಯರು
ವರುಣ ನಾರದವಿಡಿದು ಮಿತ್ರರಿಗೆ ಒಂಭತ್ತು
ಎರಡೆರಡು ನಾಲ್ಕು ವುಕ್ತಶೇಷರಿಗೆ ನಿಜವೆನ್ನಿ
ಮರಳಿ ಸನಕಾದಿಗಳಿಗೆ ಸಪ್ತ ಪರ್ಜನ್ಯ ಪು-
ಶ್ಕರ ತನಕ ಆರು ಕರ್ಮ ದೇವತಿಗಳಿಗೈದು
ಅರಿವದು ಆಜಾನುಜ ದೇವರು ಗೋಪಿಕಾಸ್ತ್ರೀಯರು
ಅರ್ಧಾಧಿಕ ಮೂರು ಚಿರಪಿತ್ರರು ಮೂರು
ಸುರ ಗಂಧರ್ವ ಮೂರರ್ಧ ಮೂರೆರಡು
ಅರಿವದು ನರಗಂಧರ್ವ ಮನುಜೋತ್ತಮ-
ರಿಗೆ ವೊಂದು ಅರೆಕಲ್ಪ ತೃಣಾಂತವಾಗಿಯಿನಿತು
ಪರಿಮಿತಿವುಂಟು ವೊಂದು ಪಾದೋನಪಾದಾರ್ಧವೂ
ಪರಮೇಷ್ಠಿ ಮಾನದಿಂದ ತಿಳಿವದು ತೃಣಾಂತಕೆ
ತರತಮ್ಯ ಅಪರೋಕ್ಷ ಚರ್ಮದೇಹ ಪರಿಯಂತ
ಪರಮಪುರುಷ ಹರಿ ವಿಜಯವಿಟ್ಠಲರೇಯ
ಕರುಣಾಂಬುಧಿ ಯಿಂತು ಮುಕುತಿಮಾರ್ಗವ ಕೊಡುವಾ॥೭॥
ಜತೆ
ಬೊಮ್ಮ ಜನಕ ನಮ್ಮ ವಿಜಯವಿಟ್ಠಲ ಸರ್ವೋ-
ತ್ತುಮ್ಮನ ಹೃದಯದಲ್ಲಿ ನಿಲ್ಲಿಸಿ ಧ್ಯಾನವ ಮಾಡೊ॥೮॥
****
ಸ್ವರಮಣ ಸ್ವತಂತ್ರ ಸುಗುಣ ಸಾಕಾರ... "
ಚತುರ್ದಕ ವಿಧ ತಾರತಮ್ಯ ಕರ್ಮ ಜ್ಞಾನ ಭಕ್ತಿ ಯೋಗಗಳ ಸಾಧನ ವಿಚಾರ, ಸಾಧನ ಕಲ್ಪ ಬಿಂಬದರ್ಶನ ಪ್ರಮಾಣ ಜ್ಞಾನವ್ಯಾಪ್ತಿ ಸುಳಾದಿ ,
ಶ್ರೀ ವಿಜಯದಾಸರ ರಚನೆ ,
ರಾಗ : ಶಂಕರಾಭರಣ
ಹಾಡಿರುವವರು : ಶ್ರೀ ಸುಮುಖ್ ಮೌದ್ಗಲ್ಯ
for sahitya
*****