ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀವೆಂಕಟೇಶ ಸುಳಾದಿ
ರಾಗ ಅಠಾಣ
ಧ್ರುವತಾಳ
ಅರಸಿನ ಭೀತಿಯಿಂದ ಆತನ ಪಾದರಕ್ಷ
ಪರಿಚಾರಕನೊಬ್ಬ ಸತತ ಬಿಡದೇ
ಪರಮ ವಿಶ್ವಾಸದಲ್ಲಿ ಜೋಕೆ ಮಾಡಿದಂತೆ
ಹರಿ ನಿನ್ನ ಶರಣಾರ ಸರಸಿಜ ಭವಾದ್ಯರು
ನಿರತರ ವಂದಡಿ ತೊಲಗಿ ಪೋಗಾದೆ
ಪೊರವಾರು ಪರಿಪರಿ ಬಗೆಯಿಂದೊಲಿದೂ
ದುರಿತದ ಕಡಿಗೆ ನಿನ್ನಾ ನಂಬಿದವನ
ಕರಣಗಳೆರಗಗೊಡದೇ ಆವಾಗ
ಹರಿ ಭೀತಿ ನರನಿವ ನೀಚಾನಾದಾಡಾಗಲಿ
ಕರುಣಪಯೋನಿಧಿ ಭಕ್ತಾರಾಧೀನವಾದ
ಧೊರೆಯೆ ನಿನ್ನಾ ಬಲು ಲೀಲಿಗೆ ನಮೊ ನಮೊ
ಮರದೊಮ್ಮೆ ನೆನದಾಡೆ ಚನ್ನಾಗಿ ಚನ್ನಾಗಿ
ಬರುವ ಸ್ವಾತಂತ್ರ ಚಿನ್ಮಾತ್ರ ಮುನಿಸ್ತೋತ್ರ
ಧರೆಯೊಳು ನಿನ್ನಾ ಸರಿಯಾದ ದೈವವ
ಕುರುಹ ಕಾಣಿಸೋ ಕುಜನರಿಗೆ ಕುಠಾರ
ತಿರುವೆಂಗಳಪ್ಪ ತಿಮ್ಮಪ್ಪ ಶ್ರೀನಿವಾಸ
ಗಿರಿವಾಸ ವಿಜಯವಿಟ್ಠಲ ವೆಂಕಟ ತಂದೆ
ಶರಣಾರು ಕರೆವ ಸೊಲ್ಲಿಗೆ ಸೋಲುವ ಮಹಿಮ ॥ 1 ॥
ಮಟ್ಟತಾಳ
ಹುಲ್ಲ ಸರಿ ಮೇರುವ್ವಿಗೆ ಸಲ್ಲದು ಬೆಲೆ ಮಾಡಲು
ಮಲ್ಲನರನ ಪಾದದಲ್ಲಿ ಕಟ್ಟಿರಲದೆ
ಸಲ್ಲುವದು ಬಿರಿದು ಎಲ್ಲ ಲೋಕದ ಮಧ್ಯ
ಹುಲ್ಲಿಗೆ ಯಾದರು ಬಲ್ಲಿದನ ಬಳಿ -
ಯಲ್ಲಿ ಸೇರಿದರಿಂದ ಬಲ್ಲಿದಾತನವದಕೆ ಬರುವದು ಕಾಣಿರೊ
ಕಲ್ಲುನಾರಿಯ ಮಾಡಿದ ವಿಜಯವಿಟ್ಠಲರೇಯ
ಎಲ್ಲಿದ್ದರು ನಿನ್ನವಗೆ ಭೀತಿಯಿಲ್ಲ ॥ 2 ॥
ತ್ರಿವಿಡಿತಾಳ
ನಾನಾ ಯೋನಿಗಳಲ್ಲಿ ಬಂದು ಬೆಳೆದು ಬಿಡದೆ
ನಾನಾ ದೇಶದ ಮ್ಯಾಲೆ ತಿರಗಿ ತಿರಗೀ
ನಾನಾ ಠಾವಿನಲಿ ವಾಸವಾಗಿ ಇದ್ದು
ನಾನಾ ಉದಕ ಧಾನ್ಯಾ ಸವಿದು ಉಂಡು
ನಾನಿದ್ದರು ದೇವ ಅಲ್ಲೆಲ್ಲಿ ಪೊಂದಿದ
ಆ ನಿರ್ಜರರು ನಿನ್ನ ಪೊಂದಿದವ
ಜ್ಞಾನವೆ ಕೆಡದಂತೆ ರಕ್ಷಿಸುವರು ಸತತಾ
ಏನೆಂಬೆನೈ ನಿನ್ನ ಧೊರೆತನಕೇ
ನಾನೆಲ್ಲಿ ಸರಿಗಾಣೆ ತ್ರಿಲೋಕದಲ್ಲಿ ಜಗ -
ತ್ಪ್ರಾಣನ್ನಾ ವಡಿಯಾನೆ ದಿವ್ಯ ಕಾಯ
ಜ್ಞಾನಾದ್ರಿ ವೆಂಕಟ ವಿಜಯವಿಟ್ಠಲರೇಯಾ
ನೀನೆಂದವನಿಗೆ ನಿತ್ಯ ನೀನೆ ಬೆನ್ನು ॥ 3 ॥
ಅಟ್ಟತಾಳ
ಕಾಮಂಜುತಲಿದೆ ಕ್ರೋಧಂಜುತಾಲಿದೆ
ಆ ಮದ ಮೋಹ ಮತ್ಸರ ವಂಜುತಲಿದೆ
ತಾಮಸ ಜನಗಳು ವಮ್ಯಾದರೂ ನಿನ್ನ
ನಾಮಾವೆ ಕೇಳುತ ಲಂಜುತ್ತಲಿಪ್ಪರು
ಸ್ವಾಮಿತೀರ್ಥವಾಸಾ ವಿಜಯವಿಟ್ಠಲ ವೆಂಕಟ
ಈ ಮಹಿಯೊಳು ನಿನ್ನ ಧೊರೆತನ ಮಿಗಿಲೊ ॥ 4 ॥
ಆದಿತಾಳ
ಜಗತ್ಪಾವನ ಜಗಜ್ಜೀವನ
ಜಗತ್ಕಾವನ ಕಾವನೈಯ್ಯಾ
ಜಗದ ಜಗದ ಜೀವನ ಜಗವ ಸೃಜಿಸಿ
ಜಗವ ನಿಲಿಸಿ ಜಗವ ಆಡಿಸುವೆ
ಜಗವೆ ನಿನ್ನ ಭೀತಿಯಲ್ಲಿ ಚಲಿಸುತಿಪ್ಪದು
ಜಗವ ಬಲ್ಲಿ ನಿನ್ನಾ ಸರ್ವ ಜಗವರಿಯದು
ಜಗವೆಲ್ಲ ನಿನ್ನ ಭಕ್ತನ ಪಾಲಿಸುತಿಪ್ಪದು
ಜಗವೆ ನಿನ್ನಯ ಗುಣಂಗಳೆಣಿಸುವದೂ
ಜಗದಾ ಧೊರಿಯೆ ಖಗಗಿರಿ ವೆಂಕಟ ವಿಜಯವಿಟ್ಠಲ ಪರಮದಯಾನಿಧಿ
ಜಗವೇ ನಿನ್ನಾಧೀನವಯ್ಯಾ ॥ 5 ॥
ಜತೆ
ಅರಸಿನಿಂದಲಿ ಅಧಿಕ ಭೃತ್ಯನಿಗೆ ಪಾಲಿಸುವ
ಹಿರಿಯಾರಿಪ್ಪರು ಬಿಡದೆ ವಿಜಯವಿಟ್ಠಲ ಧೊರಿಯೆ ॥
*********