Audio by Mrs. Nandini Sripad
ಶ್ರೀ ಬ್ರಹ್ಮದೇವರ ಸ್ತುತಿ
ಸತ್ಯಲೋಕವೆ ಸದನ ತತ್ವಾಭಿಮಾನಿಗಳು
ಭೃತ್ಯರೆನಿಸುವರು ಮಹಲಕ್ಷ್ಮೀ । ಮಹಲಕ್ಷ್ಮೀಜನನಿ ಪುರು-
ಷೋತ್ತಮನೆ ಜನಕನೆನಿಸುವ ॥ 1 ॥ ॥ 98 ॥
ಚತುರದಶಲೋಕಾಧಿಪತಿಯೆನಿಪ ನಿನಗೆ ಸರ -
ಸ್ವತಿಯು ನಿಜರಾಣಿ ವಿಹಗೇಂದ್ರ । ವಿಹಗೇಂದ್ರಶೇಷಪಾ -
ರ್ವತಿಪರಾತ್ಮಜರು ಎನಿಸೋರು ॥ 2 ॥ ॥ 99 ॥
ದ್ವಿಶತಕಲ್ಪದಿ ತಪವೆಸಗಿ ಅಸುದೇವ ಪೊಂ -
ಬಸಿರಪದ ಪಡೆದೆ ಹರಿಯಿಂದ । ಹರಿಯಿಂದ ಮಿಕ್ಕ ಸುಮ -
ನಸರಿಗುಂಟೇ ಈ ಭಾಗ್ಯ ॥ 3 ॥ ॥ 100 ॥
ಋಜುಗಣಾಧೀಶ್ವರನೆ ಅಜಪದವಿಗೋಸುಗದಿ
ಭಜಿಸಿದವನಲ್ಲ ಹರಿಪಾದ । ಹರಿಪಾದಸೇವೆಯು ಸ -
ಹಜವೆ ಸರಿ ನಿನಗೆ ಎಂದೆಂದು ॥ 4 ॥ ॥ 101 ॥
ಚತುರಾಸ್ಯ ತತ್ವದೇವತೆಗಳಂತರ್ಯಾಮಿ
ನುತಿಸಿ ಬಿನ್ನೈಪೆ ಅನುಗಾಲ । ಅನುಗಾಲ ಭಕ್ತಿ ಶಾ -
ಶ್ವತವಾಗಿ ಇರಲಿ ಹರಿಯಲ್ಲಿ ॥ 5 ॥ ॥ 102 ॥
ಸತ್ಯಲೋಕೇಶನೆ ಬಳಿತ್ಥಾದಿ ಶ್ರುತಿವಿನುತ -
ಮೃತ್ಯುಂಜಯಾದಿ ಸುರಪೂಜ್ಯ । ಸುರಪೂಜ್ಯ ಭಕ್ತರ ವಿ -
ಪತ್ತು ಪರಿಹರಿಸಿ ಸಲಹಯ್ಯ ॥ 6 ॥ ॥ 103 ॥
ಇನಿತಿದ್ದ ಬಳಿಕ ನೀ ಸಲಹದಿಪ್ಪುದು ನಮ್ಮ
ಅನುಚಿತನುಚಿತವೋ ನೀ ಬಲ್ಲಿ । ನೀ ಬಲ್ಲಿ ಶಾರದಾ -
ವನಿತೆಯ ರಮಣ ದಯವಾಗೋ ॥ 7 ॥ ॥ 104 ॥
ಸತ್ವಾತ್ಮಕಶರೀರ ಮಿಥ್ಯಾದಿಮತಗಳೊಳು
ಉತ್ಪತ್ತಿ ಸಂಪತ್ತು ಕೊಡದಿರು । ಕೊಡದಿರೆನಗೆಂದೂ ಸಂ -
ಪ್ರಾರ್ಥಿಸುವೆ ನಿನಗೆ ನಮೊ ಎಂದು ॥ 8 ॥ ॥ 105 ॥
ಮಾತರಿಶ್ವನೆ ನಿನ್ನ ಪ್ರೀತಿಯೊಂದೇ ಜಗ -
ನ್ನಾಥವಿಠ್ಠಲನ ಕರುಣಕ್ಕೆ । ಕರುಣಕ್ಕೆ ಕಾರಣೆಮ -
ಯಾತನೆಯು ಬರಲು ನಾನಂಜೆ ॥ 9 ॥ ॥ 106 ॥
************
ವ್ಯಾಖ್ಯಾನ :
ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.
ಶ್ರೀ ಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿ
ಶ್ರೀ ಬ್ರಹ್ಮದೇವರ ಸ್ತುತಿ
ಸತ್ಯಲೋಕವೆ ಸದನ ತತ್ತ್ವಾಭಿಮಾನಿಗಳು
ಭೃತ್ಯರೆನಿಸುವರು ಮಹಲಕ್ಷ್ಮೀ । ಮಹಲಕ್ಷ್ಮೀಜನನಿ ಪುರು -
ಷೋತ್ತಮನೆ ಜನಕನೆನಿಸುವ ॥ 1 ॥ ॥ 98 ॥
ಅರ್ಥ : ಸತ್ಯಲೋಕವೆ = ಸತ್ಯಲೋಕವೆಂಬುದೇ , ಸದನ = (ಬ್ರಹ್ಮದೇವನ ) ವಾಸಸ್ಥಳವು ; ತತ್ತ್ವಾಭಿಮಾನಿಗಳು = ತತ್ತ್ವಾಭಿಮಾನಿಗಳಾದ ರುದ್ರಾದಿ ದೇವತೆಗಳು , ಭೃತ್ಯರೆನಿಸುವರು = ಕಿಂಕರರಾಗಿರುವರು , ಮಹಲಕ್ಷ್ಮೀ = ಶ್ರೀ ಮಹಾಲಕ್ಷ್ಮೀದೇವಿಯೇ , ಜನನಿ = ತಾಯಿಯು ; ಪುರುಷೋತ್ತಮನೆ = ಪುರುಷೋತ್ತಮನಾದ ಶ್ರೀಹರಿಯೇ , ಜನಕನು ಎನಿಸುವ = ತಂದೆಯಾಗಿರುವನು.
ವಿಶೇಷಾಂಶ : (1) ಲೋಕಗಳು 14 - ಭೂಲೋಕ , ಅಂತರಿಕ್ಷ, ಸ್ವರ್ಗ, ಮಹರ್ಲೋಕ , ಜನಲೋಕ, ತಪೋಲೋಕ, ಸತ್ಯಲೋಕ ಇವು 7 ಮತ್ತು ಭೂಮಿಯ ಕೆಳಗಿರುವ ಅತಲ , ವಿತಲ, ಸುತಲ, ತಲಾತಲ, ಮಹಾತಲ, ರಸಾತಲ , ಪಾತಾಲಗಳೆಂಬುವು 7 , ಇವುಗಳಲ್ಲಿ ಸತ್ಯಲೋಕವು ಎಲ್ಲಕ್ಕೂ ಮೇಲಿದೆ. ಅದು ಬ್ರಹ್ಮದೇವನ ಲೋಕವು.
(2) ಬ್ರಹ್ಮದೇವನಿಗೆ ರಮಾನಾರಾಯಣರೇ ತಾಯಿತಂದೆಗಳು - ಅವರಿಂದ ಜನಿಸಿದವನು. ಬ್ರಹ್ಮಾಂಡಸೃಷ್ಟಿಗೆ ಪೂರ್ವದಲ್ಲಿಯೇ ವಾಸುದೇವರೂಪಿಯಾದ ಪರಮಾತ್ಮ ಮತ್ತು ಮಾಯಾನಾಮಕಳಾದ ಲಕ್ಷ್ಮೀದೇವಿ ಇವರಿಂದ ಬ್ರಹ್ಮನು ಸೃಷ್ಟನಾದನು. ನಂತರ ಬ್ರಹ್ಮಾಂಡದೊಳಗೆ ಪರಮಾತ್ಮನ ನಾಭಿಕಮಲದಿಂದ ಜನಿಸಿದನು. ದೇವತೆಗಳ ಉತ್ಪತ್ತಿಯೂ ರಮಾನಾರಾಯಣರ ವಿಹಾರವೂ ಅತ್ಯಂತ ವಿಲಕ್ಷಣವಾದವುಗಳು. ಸರ್ವಥಾ ಲೌಕಿಕ ಸ್ತ್ರೀಪುರುಷರ ವಿಹಾರ ಮತ್ತು ಅವರಿಂದಾಗುವ ಉತ್ಪತ್ತಿಗಳಂತೆ ಎಂದು ತಿಳಿಯಕೂಡದು. ಹಾಗೆ ಭಾವಿಸುವುದರಿಂದ ಮಹಾನ್ ಅನರ್ಥವುಂಟೆಂಬುದನ್ನು ನಿತ್ಯ ಗಮನದಲ್ಲಿಡಬೇಕು.
(3) ಜೀವರು ಸ್ವರೂಪತಃ ನಿತ್ಯರಾದರೂ , ದೇಹತಃ ನಾಶವುಳ್ಳವರಾದ್ದರಿಂದ 'ಕ್ಷರ' ಪುರುಷರೆಂದು ಕರೆಯಲ್ಪಡುವರು. ನಿತ್ಯವಾದ ಅಪ್ರಾಕೃತ ದೇಹವುಳ್ಳ ಮಹಾಲಕ್ಷ್ಮಿಯು 'ಅಕ್ಷರ'ಪುರುಷಳು. ಕ್ಷರ, ಅಕ್ಷರ ಪುರುಷರಿಗಿಂತ ಭಿನ್ನನೂ , ಉತ್ತಮನೂ , ವಿಲಕ್ಷಣನೂ ಆದ ಶ್ರೀಹರಿಯು 'ಪುರುಷೋತ್ತಮ'ನು.
ತತ್ತ್ವಾಭಿಮಾನಿಗಳಾದ ದೇವತೆಗಳು ಸಹ ಕ್ಷರಪುರುಷರೇ. ಆದರೆ ಸರ್ವಥಾ ಅಸ್ಮದಾದಿಗಳಂತಲ್ಲ. ಅಪಾರವಾದ ಜ್ಞಾನಾದಿಗುಣವುಳ್ಳವರು. ಅವರೂ ಸಹ ಬ್ರಹ್ಮದೇವನ ಸೇವಕರು.
ಚತುರದಶಲೋಕಾಧಿಪತಿಯೆನಿಪ ನಿನಗೆ ಸರ -
ಸ್ವತಿಯು ನಿಜರಾಣಿ ವಿಹಗೇಂದ್ರ । ವಿಹಗೇಂದ್ರಶೇಷಪಾ -
ರ್ವತಿಪರಾತ್ಮಜರು ಎನಿಸೋರು ॥ 2 ॥ ॥ 99 ॥
ಅರ್ಥ : ಚತುರದಶಲೋಕಾಧಿಪತಿಯು = ಹದಿನಾಲ್ಕು ಲೋಕಗಳಿಗೆ ಅಧಿಪತಿಯೆಂದು , ಎನಿಪ = ಪ್ರಸಿದ್ಧನಾದ , ನಿನಗೆ, ಸರಸ್ವತಿಯು = ಸರಸ್ವತೀದೇವಿಯು , ನಿಜರಾಣಿ = ನಿಯತಪತ್ನಿಯು , ವಿಹಗೇಂದ್ರಶೇಷಪಾರ್ವತಿಪರು = ಗರುಡ , ಶೇಷ , ಪಾರ್ವತೀಪತಿಯಾದ ರುದ್ರ , ಇವರು , ಆತ್ಮಜರು = ಮಕ್ಕಳು , ಎನಿಸೋರು = ಎಂದು ಪ್ರಸಿದ್ಧರಾಗಿರುವರು.
ವಿಶೇಷಾಂಶ : (1) ಸತ್ಯಲೋಕದಲ್ಲಿ ವಾಸ ಮಾಡಿದರೂ ಅದೊಂದೇ ಲೋಕಕ್ಕೆ ಬ್ರಹ್ಮದೇವನು ಅಧಿಪತಿಯಲ್ಲ - ಹದಿನಾಲ್ಕು ಲೋಕಗಳಿಗೂ ಪ್ರಭುವು.
(2) ಹಿಂದಿನ ನುಡಿಯಿಂದ ತಾಯಿತಂದೆಗಳನ್ನೂ , ಭೃತ್ಯರನ್ನೂ ಹೇಳಿ , ಈಗ ಪತ್ನೀಪುತ್ರರನ್ನು ಹೇಳುತ್ತಾರೆ. ಯದ್ಯಪಿ ಬ್ರಹ್ಮನು ಸರಸ್ವತಿಯಲ್ಲಿ ಶೇಷನನ್ನೂ , ವಾಯುದೇವನು ಭಾರತಿಯಲ್ಲಿ ಗರುಡನನ್ನೂ ಉತ್ಪಾದಿಸಿದರು. ರುದ್ರನು ಬ್ರಹ್ಮನ ಲಲಾಟದಿಂದ ಜನಿಸಿದ ಪುತ್ರನು. ವಾಯು ಬ್ರಹ್ಮರು ಸಮರಾದ್ದರಿಂದಲೂ , ವಾಯುದೇವನೇ ಮುಂದಿನ ಬ್ರಹ್ಮನಾಗಲಿರುವನಾದ್ದರಿಂದಲೂ , ಗರುಡನನ್ನೂ ಬ್ರಹ್ಮನ ಮಗನೆಂದೇ ಹೇಳಲಾಗಿದೆ.
ದ್ವಿಶತಕಲ್ಪದಿ ತಪವೆಸಗಿ ಅಸುದೇವ ಪೊಂ -
ಬಸಿರಪದ ಪಡೆದೆ ಹರಿಯಿಂದ । ಹರಿಯಿಂದ ಮಿಕ್ಕ ಸುಮ -
ನಸರಿಗುಂಟೇ ಈ ಭಾಗ್ಯ ॥ 3 ॥ ॥ 100 ॥
ಅರ್ಥ : ಅಸುದೇವ = ಪ್ರಾಣರಿಗೆ (ಜೀವರಿಗೆ) ದೇವನಾದ ನೀನು , ದ್ವಿಶತಕಲ್ಪದಿ = 200 ಬ್ರಹ್ಮಕಲ್ಪಗಳಲ್ಲಿ , ತಪವ = ತಪಸ್ಸನ್ನು , ಎಸಗಿ = ಮಾಡಿ , ಹರಿಯಿಂದ = ಶ್ರೀಹರಿ ಪ್ರಸಾದದಿಂದ , ಪೊಂಬಸಿರಪದ = ಬ್ರಹ್ಮ (ಹಿರಣ್ಯಗರ್ಭ) ಪದವಿಯನ್ನು , ಪಡೆದೆ = ಹೊಂದಿರುವಿ , ಮಿಕ್ಕ = ಉಳಿದ (ಇತರರಾದ) , ಸುಮನಸರಿಗೆ = ದೇವತೆಗಳಿಗೆ , ಈ ಭಾಗ್ಯ = ಸತ್ಯಲೋಕಾಧಿಪತ್ಯದ ಮಹಾಭಾಗ್ಯವು , ಉಂಟೇ = ಇರುವುದೇ? ( ಎಂದಿಗೂ ಇಲ್ಲ ).
ವಿಶೇಷಾಂಶ : (1) ಬ್ರಹ್ಮಪದವು ಋಜುಗಣದ ಜೀವರಿಗೆ ಮಾತ್ರ ಮೀಸಲಾದುದು - ಅನ್ಯರಿಗೆ ಯಾವ ಸಾಧನೆಯಿಂದಲೂ ಅದು ಲಭಿಸದು.
(2) ಋಜುಗಣದ ಜೀವರ ಸಾಧನ ಕಾಲವು 200 ಬ್ರಹ್ಮಕಲ್ಪಗಳು. ಇವರು ಅನಾದಿಕಾಲದಿಂದ ಪೂರ್ಣಶಾಸ್ತ್ರವುಳ್ಳವರು ; ಅಷ್ಟುಮಾತ್ರವಲ್ಲ , ಭಗವಂತನ ಅಪರೋಕ್ಷವೂ , ಸಾಕ್ಷಾದ್ದರ್ಶನವೂ ಅನಾದಿಯಿಂದ ಇವರಿಗುಂಟು. ಮೊದಲಿನ 100 ಕಲ್ಪಗಳಲ್ಲಿ ಶ್ರೀಹರಿಧ್ಯಾನದಲ್ಲಿ ನಿರತರಾಗಿರುವರು. ವಿಶೇಷಾಪರೋಕ್ಷವನ್ನು ಪಡೆದು 101ನೇ ಕಲ್ಪದಿಂದ ಬ್ರಹ್ಮಪದಪ್ರಾಪ್ತಿಗಾಗಿ ವಿಶೇಷಸಾಧನವೂ ಪ್ರಾರಬ್ಧಕರ್ಮಕ್ಷಯವೂ ಆರಂಭವಾಗುವುದು. ಈ ಕಾಲದಲ್ಲಿ ಭಗವದ್ರೂಪಗಳಲ್ಲಿ ಹೆಚ್ಚು ಸ್ಪಷ್ಟತೆಯೂ , ಅಧಿಕರೂಪಗಳ (ಬಹುರೂಪಗಳ) ಅಪರೋಕ್ಷಲಾಭವೂ ದೊರೆಯುತ್ತ , ಸಾಧನವು ಮುಂದುವರಿಯುವುದು. ಋಜುಗಳ ಪ್ರಾರಬ್ಧವು ಸುಖಮಾತ್ರಪ್ರಾಪಕವು; ದುಃಖಪ್ರಾರಬ್ಧವೆಂಬುದು ಅವರಿಗೆ ಇಲ್ಲವೇ ಇಲ್ಲ. 199ನೆಯ ಕಲ್ಪದಲ್ಲಿ ವಾಯುಪದಕ್ಕೆ ಬರುವರು. 200ನೆಯ ಕಲ್ಪದಲ್ಲಿ ಬ್ರಹ್ಮಪದವಿಯನ್ನು ಹೊಂದಿ, ಸಹಭೋಗವನ್ನನುಭವಿಸಿ , ಸಾಯುಜ್ಯ (ಸರ್ವಾಂಗಸಾಯುಜ್ಯ) ಮುಕ್ತಿಯನ್ನು ಹೊಂದುತ್ತಾರೆ.
(3) ಋಜುಗಳಿಗೆ ದುಃಖ ಅಜ್ಞಾನಗಳ ಸ್ಪರ್ಶ ಯಾವ ಕಾಲಕ್ಕೂ ಇಲ್ಲ. ಇತರ ತತ್ತ್ವಾಭಿಮಾನಿ ದೇವತೆಗಳಿಗೆ ಅಲ್ಪಮಾತ್ರ ಸ್ಪರ್ಶವುಂಟು. ಆದರೆ, ಕಾಲವಿಶೇಷಗಳಲ್ಲಿ ಮಾತ್ರ. ಇವರೂ ಸಹ ಅನಾದಿಕಾಲದಿಂದ ಭಗವಂತನ ಸಾಮಾನ್ಯಾಪರೋಕ್ಷವುಳ್ಳವರೇ. ಸಾಧನಾನಂತರದಲ್ಲಿ ಸ್ವಬಿಂಬರೂಪವು ಹೆಚ್ಚು ಸ್ಪಷ್ಟವಾಗುತ್ತಾ , ಅವರವರ ತಾರತಮ್ಯಾನುಸಾರವಾಗಿ , ಆವರಣರಹಿತ ಸೂರ್ಯನಂತೆ ತೋರುತ್ತದೆ.
ಇದೇ ಪ್ರಮೇಯವನ್ನು ಶ್ರೀಜಗನ್ನಾಥದಾಸಾರ್ಯರೇ ತಮ್ಮ ಹರಿಕಥಾಮೃತಸಾರ ಗ್ರಂಥದಲ್ಲಿ ಹೀಗೆ ನಿರೂಪಿಸಿರುವರು :
ಸಾಧನಾತ್ಪೂರ್ವದಲಿ ಈ ಋ -
ಜ್ವಾದಿತಾತ್ತ್ವಿಕರೆನಿಪ ಸುರಗಣ -
ನಾದಿಸಾಮಾನ್ಯಾಪರೋಕ್ಷಿಗಳೆಂದು ಕರೆಸುವರು ।
ಸಾಧನೋತ್ತರ ಸ್ವಸ್ವಬಿಂಬ ಉ -
ಪಾದಿರಹಿತಾದಿತ್ಯನಂದದಿ
ಸಾದರದಿ ನೋಡುವರು ಅಧಿಕಾರಾನುಸಾರದಲಿ ॥
ಋಜುಗಣಾಧೀಶ್ವರನೆ ಅಜಪದವಿಗೋಸುಗದಿ -
ಭಜಿಸಿದವನಲ್ಲ ಹರಿಪಾದ । ಹರಿಪಾದಸೇವೆಯು ಸ -
ಹಜವೆ ಸರಿ ನಿನಗೆ ಎಂದೆಂದು ॥ 4 ॥ ॥ 101 ॥
ಅರ್ಥ : ಋಜುಗಣಾಧೀಶ್ವರನೆ = (ಅಮುಕ್ತ) ಋಜುಗಣದ ಜೇವರಲ್ಲಿ ಶ್ರೇಷ್ಠವಾದ ಆಧಿಪತ್ಯವನ್ನು ಹೊಂದಿರುವ ಹೇ ಬ್ರಹ್ಮದೇವ! ಅಜಪದವಿಗೋಸುಗದಿ = ಬ್ರಹ್ಮಪದವಿಯನ್ನು ಹೊಂದಲಿಕ್ಕಾಗಿ ,(ನೀನು) ಹರಿಪಾದ = ಶ್ರೀಹರಿಪಾದವನ್ನು , ಭಜಿಸಿದವನಲ್ಲ = ಸೇವಿಸಿದವನಲ್ಲ , ನಿನಗೆ , ಎಂದೆಂದು = ಎಲ್ಲ ಕಾಲಕ್ಕೂ (ಅನಾದ್ಯನಂತಕಾಲದಲ್ಲಿ) , ಹರಿಪಾದಸೇವೆಯು = ಶ್ರೀಹರಿಚರಣ ಭಜನೆಯು , ಸಹಜವೇ ಸರಿ = ಸ್ವಾಭಾವಿಕವಾದುದೇ ಆಗಿದೆ.
ವಿಶೇಷಾಂಶ : ಏಕಾಂತಭಕ್ತರು ಯಾರೂ ಭೋಗಾರ್ಥವಾಗಿ ಮೋಕ್ಷವನ್ನೂ ಕೋರುವುದಿಲ್ಲ. ತತ್ತ್ವಾಭಿಮಾನಿಗಳೆಲ್ಲರೂ ಏಕಾಂತಭಕ್ತರೇ. ಸಾಮಾನ್ಯವಾಗಿ ದೇವತೆಗಳೆಲ್ಲ ಏಕಾಂತಭಕ್ತರು. ವಾಯುಬ್ರಹ್ಮರು ಏಕಾಂತಭಕ್ತರಲ್ಲಿ ಶ್ರೇಷ್ಠರು. ಇತರ ಏಕಾಂತಭಕ್ತರು ಅವಿಚ್ಛಿನ್ನವಾದ ಹರಿಧ್ಯಾನ , ಹರಿಭಜನೆ , ಹರಿಸೇವಾದಿಗಳು ದೊರೆಯಬೇಕೆಂಬುದರಿಂದ ಮೋಕ್ಷವನ್ನು ಇಚ್ಛಿಸುವರು . ಬ್ರಹ್ಮವಾಯುಗಳಾದರೋ ಇವೆಲ್ಲವೂ ಅಮುಕ್ತ್ಯಾವಸ್ಥೆಯಲ್ಲಿಯೇ ತಮಗೆ ಸಿದ್ಧವಾಗಿರುವುದರಿಂದ , ಯಾವ ಕಾರಣದಿಂದಲೂ ಮೋಕ್ಷವನ್ನು ಅಪೇಕ್ಷಿಸುವುದೇ ಇಲ್ಲ. ಶ್ರೀಹರಿಯ ಆಜ್ಞೆಯೆಂದು ಶ್ರೀಹರಿದತ್ತವಾದ ಮೋಕ್ಷವನ್ನು ಸ್ವೀಕರಿಸುತ್ತಾರೆ.
ಚತುರಾಸ್ಯ ತತ್ತ್ವದೇವತೆಗಳಂತರ್ಯಾಮಿ
ನುತಿಸಿ ಬಿನ್ನೈಪೆ ಅನುಗಾಲ । ಅನುಗಾಲ ಭಕ್ತಿ ಶಾ -
ಶ್ವತವಾಗಿ ಇರಲಿ ಹರಿಯಲ್ಲಿ ॥ 5 ॥ ॥ 102 ॥
ಅರ್ಥ : ತತ್ತ್ವದೇವತೆಗಳಂತರ್ಯಾಮಿ = ತತ್ತ್ವಾಬಿಮಾನಿ ದೇವತೆಗಳ ಒಳಗಿದ್ದು ನಿಯಾಮಕನಾದ , ಚತುರಾಸ್ಯ = ಹೇ ಚತುರ್ಮುಖ ! ನುತಿಸಿ = ( ನಿನ್ನನ್ನು ) ಸ್ತುತಿಸಿ ( ಮಹಿಮೆಗಳನ್ನು ಕೊಂಡಾಡಿ ) , ಬಿನ್ನೈಪೆ = ಪ್ರಾರ್ಥಿಸುತ್ತೇನೆ ; ಹರಿಯಲ್ಲಿ = ಶ್ರೀಹರಿಯಲ್ಲಿ , ಅನುಗಾಲ = ಸರ್ವದಾ , ಭಕ್ತಿ = ಭಕ್ತಿಯು , ಶಾಶ್ವತವಾಗಿ ಇರಲಿ = ಏಕಪ್ರಕಾರ ಸ್ಥಿರವಾಗಿರಲಿ.
ವಿಶೇಷಾಂಶ : (1) ' ಸರ್ವೇಂದ್ರಿಯಾಭಿಮಾನಿಸ್ಥಮುಖ್ಯಪ್ರಾಣಸ್ಥ - ವಿಷ್ಣುನಾ ' ಎಂಬ ಪ್ರಮಾಣವಾಕ್ಯದಿಂದ , ಇಂದ್ರಿಯಾಭಿಮಾನಿಗಳಲ್ಲಿ ಸಹ ಇದ್ದು , ವಾಯುದೇವರು ಅವರಿಗೂ ನಿಯಾಮಕರೆಂದು ಸಿದ್ಧವಾಗುತ್ತದೆ. ಶ್ರೀವಿಷ್ಣುವು ಇಂದ್ರಿಯಾಭಿಮಾನಿಗಳಲ್ಲಿರುವ ವಾಯುದೇವರಿಗೂ ನಿಯಾಮಕನಾಗಿದ್ದಾನೆ.
(2) ' ಚತುರಾಸ್ಯ ' : ಬ್ರಹ್ಮನಿಗೆ ಐದು ಮುಖಗಳಿದ್ದವು. ಅವುಗಳಲ್ಲಿ ಒಂದನ್ನು ರುದ್ರನು ಶ್ರೀವಿಷ್ಣುಪ್ರೇರಣೆಯಿಂದ ಕತ್ತರಿಸಿದನು. ' ಅಹಂ ರುದ್ರಾಯ ಧನುರಾತನೋಮಿ ಬ್ರಹ್ಮದ್ವಿಷೇ ಶರವೇ....' (ಅಂಭ್ರಣೀಸೂಕ್ತ) ಎಂಬಲ್ಲಿ ಈ ವಿಷಯವು ಪ್ರಸಕ್ತವಾಗಿದೆ. ಅಂಭ್ರಣೀನಾಮಕಳಾದ ಮಹಾಲಕ್ಷ್ಮಿಯು ರುದ್ರನ ಶಾಸನಕ್ಕಾಗಿ ಧನುಸ್ಸನ್ನು ಕೈಗೆ ತೆಗೆದುಕೊಂಡೆನೆಂದು ಹೇಳುತ್ತಾಳೆ. ಅಂಭ್ರಣೀದೇವಿಯು ಬ್ರಹ್ಮ ರುದ್ರರಿಗೆ ಸಹ ಸೃಷ್ಟಿಸಂಹಾರಕರ್ತಳೆಂದೂ , ಪದದಾನ ಮಾಡುವವಳೆಂದೂ ಈ ಸೂಕ್ತದಲ್ಲಿ ಹೇಳಲಾಗಿದೆ. ದ್ವೇಷಿ , ಹಿಂಸಕನೆಂಬ ಶಬ್ದಗಳು , ರುದ್ರನು ಬ್ರಹ್ಮನಿಂದ ಅವರನೆಂಬುದನ್ನೂ , ದೋಷಸ್ಪರ್ಶವುಳ್ಳವನೆಂಬುದನ್ನೂ ಸೂಚಿಸಲಿಕ್ಕೆ ಮಾತ್ರ ಇರುತ್ತವೆಂದು ತಿಳಿಯಬೇಕು.
ಸತ್ಯಲೋಕೇಶನೆ ಬಳಿತ್ಥಾದಿ ಶ್ರುತಿವಿನುತ -
ಮೃತ್ಯುಂಜಯಾದಿ ಸುರಪೂಜ್ಯ । ಸುರಪೂಜ್ಯ ಭಕ್ತರ ವಿ -
ಪತ್ತು ಪರಿಹರಿಸಿ ಸಲಹಯ್ಯ ॥ 6 ॥ ॥ 103 ॥
ಅರ್ಥ : ಮೃತ್ಯುಂಜಯಾದಿ ಸುರಪೂಜ್ಯ = ರುದ್ರಾದಿ ದೇವತೆಗಳಿಂದ ಪೂಜ್ಯನೂ , ಬಳಿತ್ಥಾದಿಶ್ರುತಿವಿನುತ = ಬಳಿತ್ಥಾದಿಸೂಕ್ತಗಳಲ್ಲಿ (ವೇದಗಳಲ್ಲಿ) ಪ್ರತಿಪಾದ್ಯವಾದ , ಮಹಿಮೆಗಳುಳ್ಳವನೂ ಆದ , ಸತ್ಯಲೋಕೇಶನೆ = ಸತ್ಯಲೋಕಾಧಿಪತಿಯಾದ ಹೇ ಬ್ರಹ್ಮದೇವ ! ಭಕ್ತರ = ( ನಿನ್ನ ) ಭಕ್ತರ , ವಿಪತ್ತು = (ಭಯ , ದುಃಖ , ಅಜ್ಞಾನಾದಿಗಳಿಂದ ಸಂಭವಿಸುವ) ಕಷ್ಟಗಳನ್ನು , ಪರಿಹರಿಸಿ = ನೀಗಿ , ಸಲಹಯ್ಯ = ರಕ್ಷಿಸು.
ಇನಿತಿದ್ದ ಬಳಿಕ ನೀ ಸಲಹದಿಪ್ಪುದು ನಮ್ಮ -
ಅನುಚಿತನುಚಿತವೋ ನೀ ಬಲ್ಲಿ । ನೀ ಬಲ್ಲಿ ಶಾರದಾ -
ವನಿತೆಯ ರಮಣ ದಯವಾಗೋ ॥ 7 ॥ ॥ 104 ॥
ಅರ್ಥ : ಇನಿತಿದ್ದ ಬಳಿಕ = ನಿನ್ನ ಮಹಿಮೆಯನ್ನು ಹೀಗೆ ತಿಳಿದು ನಿನ್ನಲ್ಲಿ ಭಕ್ತಿ ಮಾಡಿದ ನಂತರವೂ , ನೀ = ನೀನು , ನಮ್ಮ = ನಮ್ಮನ್ನು , ಸಲಹದಿಪ್ಪುದು = ರಕ್ಷಣೆ ಮಾಡದಿರುವುದು , ಅನುಚಿತನುಚಿತವೋ = ಯೋಗ್ಯವಲ್ಲ - ಸರಿಯಲ್ಲ , ಎಂಬುದನ್ನು , ನೀ = ನೀನು , ಬಲ್ಲಿ = (ಸರ್ವಜ್ಞನಾದ್ದರಿಂದ) ತಿಳಿದೇ ಇರುವಿ ; ಶಾರದಾರಮಣ = ಸರಸ್ವತೀಪತಿಯಾದ ಹೇ ಬ್ರಹ್ಮದೇವ ! ದಯವಾಗೋ = ಕೃಪೆ ಮಾಡಿ ಕಾಪಾಡು.
ವಿಶೇಷಾಂಶ : ' ಅನುಚಿತನುಚಿತವೋ ' ಎಂಬಲ್ಲಿ ಅನುಚಿತ - ಅನುಚಿತ ಎಂದು ದ್ವಿರುಕ್ತಿಯಿರುವುದರಿಂದ ನೀನು ಸಲಹದಿರುವುದು ನಿಶ್ಚಯವಾಗಿಯೂ ಅನುಚಿತವೇ ಸರಿ - ಉಚಿತವಲ್ಲವೇ ಅಲ್ಲ ; ಆದ್ದರಿಂದ ರಕ್ಷಿಸಬೇಕೆಂಬರ್ಥವು ಲಭಿಸುತ್ತದೆ. ' ದಯವಾಗೋ ' ಎಂಬ ಭಕ್ತಿಯುಕ್ತ ವಿಶೇಷ ಪ್ರಾರ್ಥನೆಯೂ ಕೂಡುತ್ತದೆ.
ಸತ್ವಾತ್ಮಕಶರೀರ ಮಿಥ್ಯಾದಿಮತಗಳೊಳು
ಉತ್ಪತ್ತಿ ಸಂಪತ್ತು ಕೊಡದಿರು । ಕೊಡದಿರೆನಗೆಂದೂ ಸಂ -
ಪ್ರಾರ್ಥಿಸುವೆ ನಿನಗೆ ನಮೊ ಎಂದು ॥ 8 ॥ ॥ 105 ॥
ಅರ್ಥ : ಸತ್ವಾತ್ಮಕಶರೀರ = ಪ್ರಚುರಸತ್ತ್ವಗುಣದಿಂದಾದ ದೇಹವುಳ್ಳ , ಹೇ ಬ್ರಹ್ಮದೇವ ! ಮಿಥ್ಯಾದಿಮತಗಳೊಳು = ಮಾಯಾವಾದ ಮೊದಲಾದ ಮತಾನುಯಾಯಿಗಳಲ್ಲಿ (ನಿಮ್ಮ ಮತೀಯರಲ್ಲದ ಅನ್ಯರಲ್ಲಿ) , ಎನಗೆ = ನನಗೆ , ಉತ್ಪತ್ತಿ = ಜನ್ಮವನ್ನೃ , ಸಂಪತ್ತು = ಅವರ ಜ್ಞಾನ (ಮದಾದಿಗಳಿಂದ ಮೋಕ್ಷ ಪ್ರತಿಬಂಧಕವಾಗುವುದಾದ್ದರಿಂದ ) ಐಶ್ವರ್ಯಾದಿಗಳನ್ನು , ಎಂದೂ = ಯಾವ ಕಾಲಕ್ಕೂ , ಕೊಡದಿರು = ಕೊಡಬೇಡ , ನಿನಗೆ ನಮೊ ಎಂದು = ನಿನ್ನನ್ನು ನಮಸ್ಕರಿಸಿ , ಸಂಪ್ರಾರ್ಥಿಸುವೆ = ಬಹುಪರಿಯಿಂದ (ಭಕ್ತಿಪೂರ್ವಕ) ಪ್ರಾರ್ಥಿಸುತ್ತೇನೆ.
ವಿಶೇಷಾಂಶ : 'ಸತ್ತ್ವಮಹಾಸತ್ತ್ವ ಸೂಕ್ಷ್ಮಸತ್ತ್ವಶ್ಚತುರ್ಮುಖಃ । ' (ಗೀ.ಭಾ) ಮತ್ತು ' ವಿಶುದ್ಧಸತ್ತ್ವಬ್ರಹ್ಮಾದೇಃ ಶರೀರೇ ಸಂಸ್ಥಿತೋ ಹರಿಃ " (ಭಾಗ.ತಾ) ಇತ್ಯಾದಿ ಪ್ರಮಾಣಗಳಿಂದ ಬ್ರಹ್ಮದೇವರ ದೇಹವು ಶುದ್ಧಸತ್ತ್ವಾತ್ಮಕವೆಂದು ಸಿದ್ಧವಾಗುತ್ತದೆ. ಯದ್ಯಪಿ ಮಹತತ್ತ್ವಕ್ಕೆ ಅಭಿಮಾನಿಗಳಾದ ಇವರ ದೇಹವು ಮಹತ್ತತ್ತ್ವಾತ್ಮಕವಾದುದೇ.
ಮಾತರಿಶ್ವನೆ ನಿನ್ನ ಪ್ರೀತಿಯೊಂದೇ ಜಗ -
ನ್ನಾಥವಿಟ್ಠಲನ ಕರುಣಕ್ಕೆ । ಕರುಣಕ್ಕೆ ಕಾರಣೆಮ -
ಯಾತನೆಯು ಬರಲು ನಾನಂಜೆ ॥ 9 ॥ ॥ 106 ॥
ಅರ್ಥ : ಮಾತರಿಶ್ವನೆ = ಹೇ ಬ್ರಹ್ಮದೇವ ! ನಿನ್ನ , ಪ್ರೀತಿಯೊಂದೇ = ಪ್ರಸನ್ನತೆ ಮಾತ್ರ , ಜಗನ್ನಾಥವಿಟ್ಠಲನ = ಜಗದೊಡೆಯನಾದ ವಿಟ್ಠಲನ , ಕರುಣಕ್ಕೆ = ದಯಾಪಾತ್ರನಾಗಲಿಕ್ಕೆ , ಕಾರಣ = ಕಾರಣವು ; ನಾನು , ಯಮಯಾತನೆಯು = ನರಕದುಃಖಗಳು (ಯಮಶಾಸನವು) , ಬರಲು = ಬಂದರೂ , ಅಂಜೆ = ಹೆದರುವುದಿಲ್ಲ.
ವಿಶೇಷಾಂಶ : ನೀನು ಪ್ರಸನ್ನನಾದರೆ ಶ್ರೀಹರಿಯ ಪ್ರಸಾದಕ್ಕೆ ಪಾತ್ರನಾಗುವೆನು. ನಿಮ್ಮ ಉಭಯರ ಪ್ರಸಾದವಿರಲು , ಯಮಯಾತನೆಗಳು ಬರಲು ಅವಕಾಶವೇ ಇಲ್ಲ. ಪ್ರಬಲವಾದ ಕಾರಣಗಳಿಂದ ಬರಬಹುದೆಂದೂ ಹೆದರುವ ಕಾರಣವಿಲ್ಲ ; ಪರಿಹಾರವು ನಿಮ್ಮಿಂದಲೇ ಆಗುವುದು. ಇದು ಶಾಸ್ತ್ರಪ್ರಮಾಣ ಸಿದ್ಧ.
ವ್ಯಾಖ್ಯಾನ :
ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.
**********