Showing posts with label ಉಪಜೀವ್ಯ ನಿಜಾನಂದ vijaya vittala ankita suladi ಕಪಿಲಾವತಾರ ಸುಳಾದಿ UPAJEEVYA NIJANANDA KAPILAVATARA SULADI. Show all posts
Showing posts with label ಉಪಜೀವ್ಯ ನಿಜಾನಂದ vijaya vittala ankita suladi ಕಪಿಲಾವತಾರ ಸುಳಾದಿ UPAJEEVYA NIJANANDA KAPILAVATARA SULADI. Show all posts

Thursday 23 September 2021

ಉಪಜೀವ್ಯ ನಿಜಾನಂದ vijaya vittala ankita suladi ಕಪಿಲಾವತಾರ ಸುಳಾದಿ UPAJEEVYA NIJANANDA KAPILAVATARA SULADI

Audio by Mrs. Nandini Sripad
 ..

ಶ್ರೀವಿಜಯದಾಸಾರ್ಯ ವಿರಚಿತ ಶ್ರೀಕಪಿಲಾವತಾರ ಸ್ತೋತ್ರ ಸುಳಾದಿ 


 ರಾಗ ತೋಡಿ 


 ಧ್ರುವತಾಳ 


ಉಪಜೀವ್ಯ ನಿಜಾನಂದ ಉದಧಿಶಯನ ಸರ್ವೇಶ

ಸಪುತ ಸಪುತ ಲೋಕಪಾಲಕ ಕಾಮೇಶ

ಉಪಜೀವ್ಯ ತಪೋಧನಪಾ ನಿಷ್ಟಪ ಪಾವನ ಪಾವಕ

ಜಪ ಶೀಲ ಸಿದ್ಧಮೂರ್ತಿ ಸಾಕಾರ ಸರ್ವಾಕಾರ

ಉಪದೇಶವ ತುಂಬುರಾದಿ ನಾರದ ವಂದಿತ ಪಾದಾ -

ನುಪಮೇಯ ರಮೆಯರಸ ಯೋಗಿಜಟಿ ವಲ್ಕಲವಾಸಾ

ತೃಪುತ ತ್ರಿಗುಣಾತೀತ ತ್ರಿಕಾಲ ಕಾಲನಾಮಕ

ವಿಪುಲ ಮಧ್ಯ ಯೋಗಶಾಸ್ತ್ರ ರಚನೆಗೈಸಿದ ಗತಿಪ್ರದ

ಕುಪಿತರಹಿತ ನಿರುತ ಅಪಾರ ಅನಾದಿ 

ಅಪ್ರತಿಹತ ದೇವಾ ಚಪಲನಯನ 

ಅಪರಿಚ್ಛಿನ್ನ ವ್ಯಾಪ್ತ ಬೊಮ್ಮಾಂಡ ಕಾರಣ

ಉಪಜೀವ್ಯ ತ್ರಿಕೋಟಿ ಕಪಿಗಳಯ್ಯಾ ಕನಕವರ್ಣ

ಕಪಿಲ ವೃಷಾಕಪಿ ಪತಿ ಅಪರಬುದ್ಧನ ನೋಡು ಎ -

ನ್ನಪರಾಧ ಕ್ಷಮೆ ಮಾಡಯ್ಯಾ ಕೃಪಣವತ್ಸಲ

ಉಪಹತಿಗಳನ್ನು ಬಿಡಿಸಯ್ಯಾ

ಉಪಜೀವ್ಯ ದೀಪುತ ವಿಜಯವಿಟ್ಠಲ 

ಕಪಿಲಾವತಾರ ಲಾವಣ್ಯ ॥ 1 ॥ 


 ಮಟ್ಟತಾಳ 


ಪದ್ಮಸಂಭವ ತನ್ನ ಛಾಯದಿಂದಲಿ ಪುಟ್ಟಿದ

ಕರ್ದಮಮುನಿ ದೇವಹೂತಿಯಲ್ಲಿ ಬಂದು

ಉದ್ಭವವಾದ ಶುಕ್ಲಶೋಣಿತ ರಹಿತ

ಈ ಧರೆಯೊಳಗೆ ನಿನ್ನ ನಂಬಿದ ಮಾನವಗೆ

ಹೃದ್ರೋಗವೇ ಇಲ್ಲ ಸುಹೃತ ಸುಪ್ರಭ ಪ್ರಭಾ ಮೂರುತಿ

ಶುದ್ಧ ವಿಜಯವಿಟ್ಠಲ ಕಪಿಲಾತ್ಮಕ

ಉದ್ಧರಿಸು ಎನ್ನ ಮನದೊಳಗೆ ನಿಂದು ॥ 2 ॥ 


 ತ್ರಿವಿಡಿತಾಳ 


ಮುನಿವರೇಣ್ಯ ಸ್ವಾಮಿ ಸ್ವತಂತ್ರ ಕರ್ತ ಸ -

ಜ್ಜನ ಮನೋಭೀಷ್ಟ ಭಯನಾಶಕ ಶಕ್ತ

ಜನನಿಗೆ ಜ್ಞಾನೋಪದೇಶವ ಪೇಳಿ ಸಾ -

ಧನ ಮಾರ್ಗ ತೋರಿ ಸಂಸಾರವೆಂಬೋ

ವನಧಿಯ ದಾಟಿಸಿ ಸ್ನೇಹ ಭಾವದಿಂದ

ನಿನಗೆ ನೀನೆ ಪೊಳೆದ ಭಕುತ ವಶನೇ

ವನಜ ಭವಾದಿಗಳು ನಿನ್ನ ಲೀಲೆಯ ನೋಡಿ

ಗುಣಿಸಿ ಎಣಿಸಿ ಮೈಮರದರದಕೋ

ಎಣೆಗಾಣೆನೋ ಸ್ವೇಚ್ಛಾ ಕ್ರೀಡಿಗೆ ಮಂಗಳ

ಖಣಿಯೆ ತುಳಸೀ ಪ್ರೀಯ ಅತುಳ ಕೀರ್ತಿ

ಪ್ರಣವ ಮೂರುತಿ ನಮ್ಮ ವಿಜಯವಿಟ್ಠಲರೇಯಾ 

ಮಣಿದು ನಮೋ ಎಂಬೆ ಸಾರ ಹೃದಯ ಬದ್ಧ ॥ 3 ॥ 


 ಅಟ್ಟತಾಳ 


ಆದಿಮನುವಿನ ಕಾಲದಲ್ಲಿ ಪುಟ್ಟಿ

ಭೇದಾರ್ಥ ಜ್ಞಾನವ ಶಿಷ್ಯರಿಗೆ ಪೇಳಿ

ವೇದ ವೇದಾಂತವ ತಿಳುಪಿ ಅಜ್ಞಾನವ

ಛೇದಿಸಿ ಬಿಟ್ಟ ಬಿಸಿಜದಳಾಂಬಕ

ಸಾಧು ಸಾಧು ಸಚ್ಚಿದಾನಂದಾತ್ಮಾ ವಿ -

ನೋದ ಮನುಜಕಾಯ ನಾರಾಯಣ ವರ -

ಬೋಧ ಮುದ್ರಹಸ್ತ ಶಶಿವರ್ಣ ಸಂಕಾಶ

ಆದಿತ್ಯವಂದಿತ ವಿಜಯವಿಟ್ಠಲರೇಯಾ 

ವೈಧಾತೃ ಸೇವ್ಯ ನಿರಾಕುಲ ಕಪಿಲಾ ॥ 4 ॥ 


 ಆದಿತಾಳ 


ಅರುಣೋದಯದಲೆದ್ದು ಕರಣ ಶುದ್ದಿಯಿಂದ

ಗುರು ಕಪಿಲ ಕಪಿಲನೆಂದು ಸ್ಮರಿಸಿದ ಮಾನವಗೆ

ನಿರುತ ಮಾಡಿದ ಮಹತ್ತರ ಕರ್ಮಬಂಧ

ಪರಿಹಾರವಾಗಿ ಪೋಗುವದು ಪರಮಜ್ಞಾನಿಯಾಹ

ಪರಿಮಾಣಕ್ಕೆ ತನ್ನ ಕುರುಹು

ತೋರಿಸಿ ಯಮನ ಬಾಧೆ ತಪ್ಪಿಸುವನು

ನಿರಯವಿದೂರ ಮನುಪಾತ್ರ ವಿಜಯವಿಟ್ಠಲ 

ಪೊರೆವ ಪ್ರಪನ್ನ ಜನರ ಹೃದಯದೊಳಗೆ ನಿಂದು ॥ 5 ॥ 


 ಜತೆ 


ಕಪಿಲ ಕಪಿಲ ದೇವ ದೇಶ ಕಾಲತಃ ಪೂರ್ಣ

ದ್ರುಪದನಂದನ ವರದ ವಿಜಯವಿಟ್ಠಲ ಮೂರ್ತಿ ॥

****