ಧ್ರುವತಾಳ
ಒಂದು ವೇಳೆ ನಗಿಸುವಿ ಒಂದು ವೇಳೆ ಅಳಿಸುವಿ
ಒಂದು ವೇಳೆ ಅಳಿಸುವಿ ನಗಿಸುವಿ ಹಿಂದೆ ಮಾಡಿದವನ್ಯಾರೋ
ಇಂದು ನುಡಿದು ನುಡಿಸುವನ್ಯಾರೋ ಇಂದು ಹಿಂದು
ಮುಂದುನೀನೇಗತಿ ನಂದನಂದನ ಮುಕುಂದ ಮಾಧವ
ಸಿಂಧುಶಯನ ಅರವಿಂದನಯನ ಬಂಧುವು ನೀನೆ
ಎನಗೆ ಬಳಗವು ನೀನೆ
ತಂದೆ ತಾಯಿಯು ನೀನೆ ಅನ್ಯರ ಕಾಣೆ
ಕಂದನೆಂತೆಂದು ಬಂದು ಸಲಹೈಯ್ಯ
ಸಂದೇಹ ಬ್ಯಾಡ ನಿನ್ನ ನಂಬಿದವನೋ ನಾನು
ಮುಂದಿನ ದಾರಿಕಾಣದೆ ಬಳಲುತ್ತಿರುವೆ
ಕಂದಿಕುಂದಿದೆನು ಮನದೊಳಗೆ ಭಕ್ತ-
ಬಾಂಧವ ಶ್ರೀಕೃಷ್ಣವಿಠಲನೆ ನೀನು ಅಂದು ಇಂದೆನ್ನದೆ
ಇಂದೇಸಲಹೋ ದ್ವಂದ್ವ ಪಾದಗಳಿಗೆ ನಮೋನಮೋ 1
ಮಟ್ಟತಾಳ
ಯಾರು ಒಲಿದು ಮಾಡುವದೇನು ಯಾರು
ಮುನಿದು ಮಾಡುವುದೇನು
ಊರುಜನರೆಲ್ಲ ನಕ್ಕಾರಾಗುವುದೇನು ಊರನಾಳುವ
ಧೊರೆ ಮನ್ನಿಸಿದರೇನು ಮುನಿದರೇನು
ಘೋರ ಸಂಸಾರಶರಧಿಯ ದಾಟಿಸಬಲ್ಲರೆ
ಮರಳಿ ಮರಳಿ ಬರುವ ಜನನ ಮರಣಂಗಳ
ಹರಿಸಿ ಪೊರೆಯ ಬಲ್ಲರೇನೋ ಕಂಸಾರಿ
ಸಿರಿ ಪದ್ಮಜವಂದ್ಯ ಅತುಳಮಹಿಮ ನಮ್ಮ
ಸಿರಿ ಕೃಷ್ಣವಿಠಲನ ಚರಣಸರೋಜವಲ್ಲದೆ
ಬೇರೆ ತಾರಕವಿಲ್ಲ ಶರಣು, ಶರಣು, ಶರಣು 2
ತ್ರಿವಿಡಿತಾಳ
ಇಲ್ಲಿ ನೀನೇಗತಿ ಅಲ್ಲಿ ನೀನೇ ಗತಿ
ಎಲ್ಲೆಲ್ಲು ನೀನೇ ಗತಿ ಮಲ್ಲ ಮರ್ಧನನೆ
ಬಲ್ಲವರಾರು ನಿನ್ನ ಸಾಕಲ್ಯ ಶರಣೈಯ್ಯ
ಗೊಲ್ಲನೆನಿಸಿ ಗೋಪಿಯರಿಗೊಲಿದೆ
ಚೆಲ್ವಸುಂದರಿಯಾಗಿ ಅಸುರರನಳಿದೆ
ಬಲಿಯ ತುಳಿದು ಬಾಗಿಲಕಾಯ್ದೆ
ಮೆಲ್ಲನೆ ದುರ್ಯೋಧನನ ಹಾರಿಸಿದೆ
ಹುಲ್ಲಿನಿಂದಲಿ ಕಾಕಾ ಸುರನ ತುಳಿದೆ
ಹುಲ್ಲೆನೆಪದಿ ಸತಿಯನಗಲಿಕೆ ನಟಿಸಿದೆ
ಕ್ಷುಲ್ಲ ಬೈಯ್ಗಳ ಬೈಯ್ದವನ ಇಂಬಿಟ್ಟುಕೊಂಡೆ
ಸೊಲ್ಲಲಾಲಿಸಿ ನರಸಿಂಹ ನೀನಾದೆ
ಸುಳ್ಳು ಬೋಧಿಸಿ ಬತ್ತಲೆ ನಿಂದೆ
ಪುಲ್ಲನಾಭನಾಗಿ ಮಗನ ಪಡೆದೆ
ನಲ್ಲ ನಿರುಪಮ ಶ್ರೀ ಕೃಷ್ಣ ವಿಠಲನೆ
ಬಲ್ಲಿದರಿಗತಿ ಬಲ್ಲಿದನು ಅಪ್ರತಿಮಲ್ಲ
ನಿಲ್ಲೋ ಎನ್ನ ಮನದಿ ಸರ್ವದಾ ದೇವಾದಿದೇವ
ದೇವಾದಿದೇವ 3
ಅಟ್ಟತಾಳ
ಸ್ನಾನ ಸಂಧ್ಯಾವಂದನದಿ ಮೆಚ್ಚಿಸಲರಿಯೆ
ಮೌನ ಜಪತಪ ನೇಮ ಹೋಮ ಒಂದನರಿಯೆ
ದಾನ ಧರ್ಮಗಳ ಸುಳಿವನ್ನರಿಯೆ
ಅನುದಿನಶ್ರವಣ ಮನನಾದಿ ಸಾಧನ ವನರಿಯೆ
e್ಞÁನಮಾರ್ಗದ ಧೂಳಿ ಸಹ ಕಂಡರಿಯೆ
ತನುಮನ ಧನ ಪ್ರಾಣಗಳನೊಪ್ಪಿಸಿದೆನೊ
ಶ್ರೀನಿವಾಸ ಜಯತೀರ್ಥ ವಾಯ್ವಂತರ್ಗತ ಶ್ರೀಕೃಷ್ಣವಿಠಲ
ನಿನ್ನ ನಾಮ ಉಣ್ಣಿಸಿ ಕಾಯೋ ನಿನ್ನ ನಾಮ
ಉಣ್ಣಿಸಿ ಕಾಯೋ 4
ಆದಿತಾಳ
ಏನುಮಾಡಿದರೇನು ಏನು ಓದಿದರೇನು
ಕಾನನ ದೊಳಗೆ ತಿರುಗಿ ಬೆಂಡಾದರೇನು
ದಾನವಾಂತಕ ನಿನ್ನ
ದಯವಾಗೋ ತನಕ ನಾನು ನಾನು ಎಂದು
ಹೀನ ಮಾನವನಾದೆ ನೀನು ನೀನು ನಿನ್ನಾಧೀನವು
ಶ್ರೀನಿವಾಸಾಮಾನಾಭಿಮಾನವು ನಿನ್ನ ದೈಯ್ಯ ದೇವ
ಸಾನುರಾಗದಲಿ ನಿನ್ನ ನಿಜದಾಸನ ಮಾಡೋ
ವಾಣಿಪಿತ ಶ್ರೀಜಯತೀರ್ಥ ವಾಯ್ವಂತರ್ಗತ ಶ್ರೀಕೃಷ್ಣ ವಿಠಲ
ನಿನ್ನಡಿಗಳಿಗೆ ನಮೋನಮೋ ಎಂಬೆ ಶರಣು 5
ಜತೆ
ಹರಿಯೇ ಗತಿ ಹರಿಯೇ ಮತಿ ಹರಿಯೇ ದೈವ
ಹರಿಯೇ ಸರ್ವವು ಶ್ರೀಕೃಷ್ಣವಿಠಲನ ಮೊರೆ ಹೊಕ್ಕು ಬೇಗನೆ
ಸೂರೆಗೊಳಿರೋ ಮುಕುತಿ, ಸೂರೆಗೊಳಿರೋ ಮುಕುತಿ ||
****