Showing posts with label ಕೀರ್ತಿಸಿ ಜನರೆಲ್ಲ ಹರಿಯ ಗುಣ rangavittala. Show all posts
Showing posts with label ಕೀರ್ತಿಸಿ ಜನರೆಲ್ಲ ಹರಿಯ ಗುಣ rangavittala. Show all posts

Wednesday, 11 December 2019

ಕೀರ್ತಿಸಿ ಜನರೆಲ್ಲ ಹರಿಯ ಗುಣ ankita rangavittala

ರಾಗ ಸುರಟಿ, ಆದಿತಾಳ

ಕೀರ್ತಿಸಿ ಜನರೆಲ್ಲ ಹರಿಯ ಗುಣ ||ಪ||
ಕೀರ್ತಿಸಿ ಜನರು ಕೃತಾರ್ಥರಾಗಿರೊ ||ಅ.ಪ||

ಅವನು ವನದೊಳಗೆ ನಿತ್ಯದಿ
ಬಾಹ ಜನರ ಬಡಿದು
ಜೀವನ ಮಾಳ್ಪ ಕಿರಾತನು ಕೀರ್ತಿಸೆ
ತಾ ಒಲಿದಾತನ ಕೋವಿದನೆನಿಸಿದ ||೧||

ಅವನ ಪಾದರಜ ಸೋಕಲು
ಆ ವನಿತೆಯ ಜಡ
ಭಾವನ ತೊಲಗಿಸಿ ಆ ವನಿತೆಯನು
ಪಾವನ ಮಾಡಿದ ದೇವಾಧಿದೇವನ ||೨||

ಅಂದು ಶಬರಿ ತಾನು ಪ್ರೇಮದಿ
ತಿಂದ ಫಲವ ಕೊಡಲು
ಕುಂದು ನೋಡದೆ ಆನಂದದಿ ಗ್ರಹಿಸಿ
ಕುಂದದ ಪದವಿಯನಂದು ಕೊಟ್ಟವನ ||೩||

ದುಷ್ಟರಾವಣ ತಾನು ಸುರರಿಗೆ
ಕಷ್ಟಬಡಿಸುತಿರಲು
ಪುಟ್ಟಿ ಭುವನದೊಳು ಕುಟ್ಟಿ ಖಳರ ಸುರ-
ರಿಷ್ಟವ ಸಲಿಸಿದ ಸೃಷ್ಟಿಗೊಡೆಯನ ||೪||

ತನ್ನ ನಂಬಿದ ಜನರ ಮತ್ತೆ ತಾ-
ನನ್ಯರಿಗೊಪ್ಪಿಸದೆ
ಮುನ್ನಿನಘವ ಕಳೆದಿನ್ನು ಕಾಪಾಡುವ
ಘನ್ನಮಹಿಮ ಶ್ರೀರಂಗವಿಠಲನ್ನ ||೫||
********