..
ಧ್ರುವತಾಳ
ಬಂದೆನ್ನ ಕಾಯೊ ಕರುಣದಿಂದ ಕೈಪಿಡಿದು
ದೀನ ಬಂಧುವೆ | ಒಂದೂರು ಮಂದಿರಾರ್ಯ | ಸಂದೇಹವ್ಯಾಕೆ
ನಿನ್ನ ಪೊಂದಿದ ಸತ್ಯಶಿಷ್ಯವೃಂದದೊಳಗೆ ನಾ ಕಡೆಯವನೋ
ತಂದೆ ನೀನಗಲಿದಕೆ ನೊಂದೆನೊ ನಾ ಭವ
ಬಂಧದೊಳಗೆ ಬಿದ್ದು ಬಹುವಿಧದಿ
ಬಂಧುರ ಮಹಿಮನೆ | ನಿನ್ಹೊರತು
ನಮಗಿನ್ನು ಹಿಂದು ಮುಂದು
ಯಾರು ಗತಿಯಿಲ್ಲವೋ | ಕಂದನ ಕುಂದುಗಳ
ಮನಕೆ ನೀ ತಾರದಲೆ
ಕಣ್ಣೆರೆದು ಈಕ್ಷಿಸಿ ಎನ್ನೊಳಿದ್ದ | ಮಂದಮತಿಯ ಬಿಡಿಸಿ
ಮಧ್ವಶಾಸ್ತ್ರವ ತಿಳಿಸೋ | ಮಂದರಕುಜ ಭಕ್ತಸಂದೋಹಕೆ |
ಹಿಂದೆ ವರದಾತನೆಂದೆನಿಸಿದ ಕರ್ಮಂದಿಗಳರಸರ ಕ್ಷೇತ್ರದಲ್ಲಿ |
ಬಂದ ಸಮಯವೆನ್ನ ಬಿನ್ನಪ ಚಿತ್ತಕೆ | ತಂದು ತವಕದಿಂದ
ಭೂಸುರರ ಸಂದಣಿಯಲ್ಲಿ ನಿನ್ನ ಮಹಿಮೆ ಪ್ರಕಟಿಸಿ
ಇಂದುವಿನಂತೆ ಪೊಳೆದು ಮೆರೆದ ಕರುಣೀ
ಅಂದಿನಾರಭ್ಯ ನೀನೆ ಸ್ವರೂಪೋದ್ಧಾರಕರ್ತನೆಂದು
ದೃಢನಾಗಿ ನಂಬಿ ತ್ವತ್ವಾದಕೆ ವಂದಿಸಿ ಮೊರೆ ಇಡೆ
ಸಂಶಯ ಬಿಡು ಇನ್ನು ಇಂದು ನೀನು ನಮ್ಮ ಛಾತ್ರಮಾಲೆಯಲ್ಲಿ
ಸಂದವನೆಂದು ಮನದಿ ಭಾವಿಸಿದೆವು | ಎನುತ ಛಂದದಿ
ನೀನಭಯವಚವಿತ್ತೆ ಸಿಂಧು ಪೋಲುವ ಕರುಣಿ
ಸುಜ್ಞಾನ ಸದ್ಭಕ್ತಿ ಕುಂದದ ವೈರಾಗ್ಯ ಭಾಗ್ಯವ ಕೊಟ್ಟು
ದ್ವಂದೈಕ ಧಾಮ ಶಾಮಸುಂದರವಿಠಲನ ಒಂದೇ ಮನದಿ
ಭಜಿಪಾನಂದ ಭಾಗ್ಯವ ನೀಡೋ 1
ಮಟ್ಟತಾಳ
ಅನುಪಮಸುಚರಿತ್ರ | ಅನುದಿನದಲಿ ಎನ್ನ
ಅಣುಗನೆಂದರಿತೊಂದು ಕ್ಷಣವಗಲದೆ ಇದ್ದು
ಬಿನುಗು ಬುದ್ಧಿಯ ಕಳದು | ಧನದಾಶೆಯ ಕಡಿದು
ಮನದ ಚಂಚಲ ಬಿಡಿಸಿ | ಹನುಮ ಭೀಮಾನಂದ
ಮುನಿಕೃತ ಪಾದವನಜ ಸೇವಿಪುದಕೆ
ತನುವಿಗೆ ಬಲವಿತ್ತು ದಿನದಿನದಲಿ
ನೆನೆಯುವ ಸಂಪದ ಗುಣನಿಧಿಯನುಗ್ರಹಿಸೋ 2
ತ್ರಿವಿಡತಾಳ
ವಿಧಿ ಭವ ಮೊದಲಾದ ಬುಧರು ಹರಿಯಾಜ್ಞೆಯಲಿ
ಮದಡಾರುದ್ಧರಿಸಲು ಜಗದಿ ಬಂದು | ಸುಧೆಯಂತೆ ಸವಿಯಾದ
ಮಧುರ ಕನ್ನಡದಲ್ಲಿ | ಮುದದಿ ರಚಿಸಿದಂಥ | ಪದಸುಳಾದಿಗಳಲ್ಲಿ
ಹುದುಗಿದ ವೇದಾರ್ಥ ತ್ವತ್ವಾದಾಶ್ರಿತರಿಗೆ | ವಿಧ ವಿಧದಿಂದಲಿ
ಬೋಧಿಸುತಾ | ವದಗಿದ ಅಜ್ಞಾನ ಸದೆದು ಸುಮತಿ ಕೊಟ್ಟು
ಸದಾಚಾರ ಸಂಪನ್ನನೆನಿಸಿ | ಅವರ ಬದಿಗನು ನೀನಾಗಿ
ಸುಕ್ಷೇಮ ಚಿಂತಿಸಿ | ಅಧಮರಿಂದಲಿ ಬಾಧೆ ಬಾರದಂತೆ
ಸದಯನೆ ಸಲಹಿದ ಕಾರಣದಿಂದಲಿ | ವಿದಿತವಾಯಿತು
ನಿನ್ನ ಮಹಿಮೆ ಮನಕೆ ಪದೆ ಪದೆ ಪ್ರಾರ್ಥಿಪೆ ಸದಮಲಗಾತ್ರನೆ
ಅಧೋಗತಿ ತಪ್ಪಿಸಿ ಬಿಡದೆ ಒಲಿದು | ಯದುಕುಲೋದ್ಭವ
ಶಾಮಸುಂದರವಿಠಲನ್ನ | ಹೃದಯಸದನದಲ್ಲಿ
ಪೊಳೆವಂತೆ ಕೃಪೆಮಾಡು 3
ಅಟ್ಟತಾಳ
ಗುರುವರ ಶ್ರೀ ನರದ್ವಿರದಾರಿ ನಾಮಕ | ವರ್ಣಿಸಲಳವಲ್ಲ
ನಿನ್ನುಪಕಾರವು | ಜ್ವರಬಹುಜನರಿಗೆ ಪರಿಹಾರ ಮಾಡಿದಿ
ತುರಗ ಕಚ್ಚಿದ ಘಾಯ ತಕ್ಷಣ ಮಾಯಿಸಿದಿ | ಶರಣಗೆ
ಬಂದಪಮೃತ್ಯು ಓಡಿಸಿದಿ | ಅರಿಯದರ್ಭಕಿ ಹೋಮಕುಂಡದಿ ಬೀಳೆ |
ತ್ವರಿತಭಿಮಂತ್ರಿಸಿ | ಭಿಸ್ಮವಲೇಪಿಸಿ ಉರಿತಂಪುಗೈಸಿದಿ ||
ಪುರದವರ ಮೊರೆ ಕೇಳಿ ಮಾರಿಯ ಭಯ ಕಳೆದಿ |
ತರುಳರು ದಕ್ಕದ ದೀನಕುಟುಂಬಕ್ಕೆ ಚಿರಕಾಲ ಬಾಳುವ
ಸಂತಾನ ನೀಡಿದಿ | ಸ್ಮರದೂರ ನಿಮ್ಮಾಜ್ಞೆ ಮೀರದ ಕಿಂಕರನ
ತರುಣಿಗೆ ಸೋಂಕಿದ ಭೂತವ ಬಿಡಿಸಿದಿ | ನೆರೆನಿನ್ನ
ಪದವನುಸರಿಸೀದ ಸುಜನಕ್ಕೆ ವರಭಾಗವತಶಾಸ್ತ್ರ ಅರುಹೀದಿ
ಸಲುಹೀದಿ | ಹರಿಕಥಾಮೃತಸಾರವ ಸಾರೀದಿ | ತರತಮದ
ಭೇದಜ್ಞಾನವ ಬೀರಿದಿ | ವರದಾಯಕ ಸತ್ಯದೇವನ ಪಾವನ
ಚರಿತೆ ವಿಚಿತ್ರವಾಗಿ ಪರಿಪರಿ ಪೇಳುತ್ತ ಪೊರೆದೆ ನಿನ್ನವರನ್ನು
ಧರೆ ಋಣ ತೀರಿದ ಕುರುಹು ಅರಿತು ಒಬ್ಬರಿಗೆ ಸೂಚಿಸದೆ
ಪರಲೋಕಯಾತ್ರೆಗೆ ತೆರಳಿದದಕೆ ನಿನ್ನ ಪರಿವಾರದ
ನಾವೆಲ್ಲರೂ ನಿತ್ಯಸಿರಿಯ ಕಳೆದುಕೊಂಡ ಲೋಭಿಗಳಂದದಿ
ಪರಿತಪಿಸುವೆವು | ಕರುಣ ಶರಧಿ ಕಾಯ ತೊರೆದರೇನಾಯಿತು
ಮರೆಯಾದೆ ಗೋವತ್ಸನ್ಯಾಯದಂತೆ ನೀ ದರುಶನ
ಸ್ವಪ್ನದಿಗರೆದು ಸಂತೈಸುತ ನಿರಯಕೆ
ನಮ್ಮನು ಗುರಿಮಾಡದೆ ಪೊರೆ ತರುಳಗೊಲಿದ
ಶಾಮಸುಂದರವಿಠಲ ಸರಸಿಜಾಂಘ್ರಿಯುಗ್ಮ ಮಧುಪನೆಂದೆನಿಸಿ 4
ಆದಿತಾಳ
ಭೂಮಿ ವಿಬುಧವರ ರಾಮವಿಠಲಾರ್ಯರ ಶ್ರೀ ಮುಖದಿಂದ
ಸಕಲಶಾಸ್ತ್ರಮನನಮಾಡಿ | ಶ್ರೀಮತ್ಸು ಶೀಲೇಂದ್ರಸ್ವಾಮಿಗಳಿಂದಲಿ
ನೀ ಮಾನಿತನಾಗಿ ಕಾಮಿತಫಲಪ್ರದ ರಾಯರ ದಯಪಡೆದು
ಕಾಮಾದಿ ಷಡ್ರಿಪುವರ್ಗ ಜಯಿಸುತಲಿ | ನೇಮನಿಷ್ಟೆಯಲಿ
ಜಪತಪಾಚರಿಸುತ ಹೇಮರಜತಧನ ತೃಣಸಮಾನೆನಿಸುತ
ಆ ಮಹಾ ಹರಿದಾಸ ಸ್ತೋಮದೊಳಗೆ ಬೆರದು |
ಸಾಮಜವರದನ
ನಾಮವಿಲ್ಲದೆ ಒಂದು ಯಾಮವ
ಕಳೆಯದೆ ಪಾಮರ ಜನರನು
ಪ್ರೇಮದಿಂದದ್ಧರಿಸಿ | ಸಾಮಗಾನಪ್ರೇಮ ಶಾಮಸುಂದರನ
ಧಾಮವ ಸೇರಿದ ಹೇ ಮಹಾಮಹಿಮನೆ 5
ಜತೆ
ನಿನ್ನೊಡೆಯನ ದ್ವಾರಾ ಶ್ರೀ ಶಾಮಸುಂದರನ
ಎನ್ನಂತರಂಗದಿ ನೋಳ್ವಂತೆ ಕರುಣಿಸೋ ||
***