..
kruti by Nidaguruki Jeevubai
ಪದ್ಮನಾಭ ಮುದ್ದು ಪದ್ಮನಾಭ
ಉದ್ಧರಿಸು ನಮ್ಮ ಸಿರಿ ಪದ್ಮನಾಭ ಪ
ನಾನಾಯೋನಿಗಳಲ್ಲಿ ಜನಿಸಿ ಪದ್ಮನಾಭ
ನಾನಾಕ್ಲೇಶಗಳಿಂದ ಬಳಲಿ ಪದ್ಮನಾಭ
ನಾ ನಿನ್ನನು ಸ್ಮರಿಸದ್ಹೋದೆ ಪದ್ಮನಾಭ
ನಾನೆಂಬ ದುರ್ಮತಿಯ ಬಿಡಿಸೊ ಪದ್ಮನಾಭ 1
ತಂದೆತಾಯಿಬಂಧು ನೀನೆ ಪದ್ಮನಾಭ ನಿನ್ನ
ನಂಬಿದ ಭಕ್ತರೊಳಿರಿಸಿ ಪದ್ಮನಾಭ
ಅಂಬುಜಾಕ್ಷ ಸಲಹಬೇಕೊ ಪದ್ಮನಾಭ ಪೀ-
ತಾಂಬರಧಾರಿಯೆ ಸಲಹೊ ಪದ್ಮನಾಭ 2
ಪಾಪಿಯೆಂದು ನೂಕದಿರು ಪದ್ಮನಾಭ ಅ-
ನೇಕಪಾಪಗಳಿಗೆ ಪಾವಕ ಪದ್ಮನಾಭ
ಶ್ರೀಕಾಂತನೀ ಸಲಹಬೇಕೊ ಪದ್ಮನಾಭ
ಏಕಾಂತ ಭಕ್ತರ ಪೊರೆದೆ ಪದ್ಮನಾಭ 3
ಹಿಂದೆ ನಿನ್ನ ಭಕ್ತರೆಲ್ಲ ಪದ್ಮನಾಭ ಗೋ-
ವಿಂದ ರಕ್ಷಿಸೆಂದು ಸ್ಮರಿಸೆ ಪದ್ಮನಾಭ
ಬಂದು ಅವರ ಸಲಹಿದೆಯೊ ಪದ್ಮನಾಭ ಮು-
ಕುಂದ ನಿನ್ನ ಮೊರೆಯ ಹೊಕ್ಕೆ ಪದ್ಮನಾಭ 4
ಮಡುವಿನಲ್ಲಿ ಗಜವ ಕಾಯ್ದೆ ಪದ್ಮನಾಭ
ದೃಢ ಪ್ರಹ್ಲಾದಗೆ ಅಭಯವಿತ್ತೆ ಪದ್ಮನಾಭ
ಮಡದಿ ನುಡಿಯ ಕೇಳಿ ತ್ವರದಿ ಪದ್ಮನಾಭ
ಅಡವಿಯಲ್ಲಿ ಅಭಿಮಾನವ ಕಾಯ್ದೆ ಪದ್ಮನಾಭ5
ವಂದಿಪೆ ಮುಚುಕುಂದ ವರದ ಪದ್ಮನಾಭ
ವಂದಿಪೆ ಗಜರಾಜ ವರದ ಪದ್ಮನಾಭ
ವಂದಿಪೆ ಉರಗಾದ್ರಿವಾಸ ಪದ್ಮನಾಭ
ಇಂದಿರೇಶ ಸ್ತುತಿಪದೇವ ಪದ್ಮನಾಭ 6
ಕರುಣಿಗಳರಸನೆ ಕಾಯೋ ಪದ್ಮನಾಭ ಶ್ರಮ
ಪರಿಹರಿಸು ನಮಿಪೆ ದೇವ ಪದ್ಮನಾಭ
ಕಮಲ ಸಂಭವನನ್ನು ಪಡೆದ ಪದ್ಮನಾಭಕಮಲನಾಭ ವಿಠ್ಠಲ ಕಾಯೋ ಪದ್ಮನಾಭ7
***