ರಾಗ ಭಾಗ್ಯಶ್ರೀ ತಾಳ ಆದಿ
ಕೊಳಲೂದೋ ರಂಗಯ್ಯ ರಂಗ ನೀ
ಕೊಳಲೂದೋ ಕೃಷ್ಣಯ್ಯ ಪ
ಕೊಳಲೂದೋ ಗೋವಳರೊಡಗೂಡಿ
ಚೆಲುವ ಶ್ರೀ ವೇಣುಗೋಪಾಲ ಕೃಷ್ಣ ನೀ 1
ಕಡಲೊಳಗಿದ್ದು ಬಂದ್ಹಡಗದಿಂದಲಿ
ಕಡಗೋಲ ಪಿಡಿದ ಉಡುಪಿಯ ಕೃಷ್ಣ ನೀ 2
ಎಂಟು ಮಂದ್ಯತಿವರ್ಯರು ನಿನ್ನ ಸೇವೆಗೆ
ಬಂಟರಾಗಿಹರ್ವೈಕುಂಠಪತಿ ಕೃಷ್ಣ ನೀ 3
ನಿಜಭಕ್ತರು ಕೈಬೀಸಿ ಕರೆಯಲು
ರಜತಪೀಠದ ಪುರವಾಸ ಕೃಷ್ಣ ನೀ 4
ಸತ್ಯವಾದ ಜÁ್ಞನ ಪೂರ್ಣಾನಂದ-
ತೀರ್ಥರ ಕರವಶವಾದ ಕೃಷ್ಣ ನೀ 5
ಅಂದಿಗೆ ಕಿರುಗೆಜ್ಜೆ ಘಲ್ಲು ಘಲ್ಲೆನುತ ಕಾ-
ಳಿಂಗನ್ನ್ಹೆಡೆಯಲಿ ಕುಣಿದಾಡೊ ಕೃಷ್ಣ ನೀ 6
ದಾಸರ ಮನದಭಿಲಾಷೆ ಪೊರೈಸಿ ಭೀ-
ಮೇಶಕೃಷ್ಣನೆ ದಯ ಮಾಡೊ ರಂಗ ನೀ 7
****