..
kruti by Srida Vittala Dasaru Karjagi Dasappa
ದಾಶರಥೇ ದಯಮಾಡೊ ನಿನ್ನ
ದಾಸರ ದಾಸನ ನೋಡೋ ಪ
ನೀರಜಾಕ್ಷ ನಿಜಮಾಯಾ ಮಮತೆ ಸಂ-
ಸಾರಶರಧಿಯೊಳು ಬಿದ್ದು
ಪಾರಗಾಣದೆ ಪರಿದು ಪೋಗುವೆನು
ತಾರಕ ನೀನೆನಗಿದ್ದು ಹರಿ ಹರಿ 1
ತುಂಬಿದ ಭಂಡಿಗೆ ಮೊರ ಭಾರವೆ ಎನ-
ಗಿಂಬಿಲ್ಲವೆ ನಿನ್ನಲಿ
ನಂಬಿದ ಭಕ್ತರ ಸಲಹುವ ವಿಶ್ವಕು-
ಟುಂಬಿ ಎನಿಸಿಕೊಳುವಲ್ಲಿ ಹರಿ 2
ಬಲ್ಲಿದರೊಳು ಬಡವರಿಗಾಶ್ರಯ ನೀ
ಬಲ್ಲೆ ಮತ್ತೆ ಎನಗೀಗ
ಎಲ್ಲಿದ್ದರು ಶ್ರೀದವಿಠಲ ಬಿಡ
ದಲ್ಲೂ ನಿನ್ನ ದಯ ಬೇಗ 3
***