ಇಂದು ಕಾಯಲಿಬೇಕೊ ಸುಂದರ ಧನ್ವಂತ್ರಿ
ಇಂದಿರೆರಮಣ ಆನಂದ ಕೃಷ್ಣ ಪ.
ತಂದೆ ಮುದ್ದುಮೋಹನ ಗುರುಗಳ ನೀನು
ಚಂದದಿಂ ಪಾಲಿಸಿ ತಂದುಕೊ ಕೀರುತಿಅ.ಪ.
ಬಂದಿತೊ ನಿನಗೊಂದು ಕುಂದು ಇದರಿಂದ
ನಂದಕಂದನೆ ಕೃಷ್ಣ ಉಡುಪಿ ನಿಲಯ
ಮಂದರೋದ್ಧರ ಕೃಷ್ಣ ಬಂದು ಈಗ ನೀ ಕಾಯೊ
ಕಂದರ್ಪಜನಕನೆ ಇಂದು ಬೇಡುವೆ ನಿನ್ನ 1
ಭವರೋಗ ಹರನಿಗೆ ಇದೊಂದಸಾಧ್ಯವೆ
ತವಕದಿಂದಲಿ ಆಯುವಿತ್ತು ಕಾಯೊ
ಪವನನಂತರ್ಯಾಮಿ ಭವಪಾಶಬದ್ಧರ
ತವಕದಿಂದಲಿ ಕಾಯ್ವ ಗುರುಗಳಲ್ಲವೆ ಇವರು 2
ನಿನ್ನ ಆಜ್ಞೆಯಿಂದ ಭಕ್ತರನುದ್ಧರಿಸ
ಲಿನ್ನು ಧರೆಗೆ ಬಂದವರಲ್ಲವೆ
ಮನ್ನಿಸಿ ನೀನಾಯುರಾರೋಗ್ಯ ಭಾಗ್ಯವಿತ್ತು
ಚನ್ನಾಗಿ ಕಾಯಬೇಕಿನ್ನು ಎನ್ನಯ ದೊರೆಯೆ 3
ಕಷ್ಟ ಬಿಡಿಸುವರಿಗೆ ಕಷ್ಟ ಕೊಡುವರೆ ನೀನು
ಕಷ್ಟ ಪರಿಹಾರಕನೆಂದೆನಿಸಿ
ಬಿಟ್ಟು ಬಿಡು ಈ ಬಿಂಕ ಥಟ್ಟನೆ ಕಾಪಾಡೊ
ಶ್ರೇಷ್ಠ ಗುರುಗಳ ಎಮ್ಮ ಕಷ್ಟ ಬಿಡಿಸುವರ 4
ಅನ್ನ ಪಾನವಿಲ್ಲದಿನ್ನು ಬಳಲಿಸುವರೆ
ಚನ್ನವಾಯಿತು ಇದು ನಿನ್ನ ಘನತೆ
ಸನ್ನುತ ಮಹಿಮ ಶ್ರೀ ಗೋಪಾಲಕೃಷ್ಣವಿಠ್ಠಲ
ಇನ್ನು ಕಾಯದಿರೆ ಎನ್ನಾಣೆ ಬಿಡೆ ಕಂಡ್ಯಾ 5
***