ಒಂದು ಪ್ರಾರ್ಥಿಸಲು ನೂರೊಂದು ಕೊಟ್ಟಿಯೊ ದೇವ ತಂದೆ ನಿನ್ನಯ ಕರುಣವೆಂದಿಗೂ ಇರಲಿ ಪ
ಇಂದು ನೀನಿತ್ತ ನೂರೊಂದು ನಿನ್ನಯ ಪಾದ ದ್ವಂದ್ವಕರ್ಪಿಸುವೆ ನಿನ್ನಯ ಸೇವೆ ಎಂದೆನುತ ಅ.ಪ
ನಿನ್ನ ಮೂರ್ತಿಯ ನೋಡಿ ನಿನ್ನ ಸ್ತುತಿಯನೆ ಮಾಡಿ ನಿನ್ನ ಕರದಲಿ ಪಿಡಿದು ಪುಣ್ಯಗಳಿಸಿದೆನೊ ನಿನ್ನ ಸುಂದರ ರೂಪ ಸತತ ಹೃದಯದಿ ಪೊತ್ತು ಧನ್ಯನಾಗಿರುವೆನಿನ್ನೇನು ಬೇಕಿಹುದೆನಗೆ 1
ನಿಟ್ಟುಸಿರು ಬಿಡಿಸಿದೆಯೊ ಹೊಟ್ಟೆಯನು ಸುಡಿಸಿದೆಯೊ ಕಟ್ಟಕಡೆಯಲಿ ಕರವನಿತ್ತು ಮೇಲೆತ್ತಿದೆಯೊ ಕಟ್ಟುಬಣ್ಣವಿದಲ್ಲ ಸುಟ್ಟರಿದು ಪೋಗದೊ ಘಟ್ಟಿಯಾಯಿತು ಎನ್ನ ಪ್ರೇಮ ನಿನ್ನೊಳಗೆ 2
ಕೆಸರಿನಲಿ ಕಂಬದಂತಿದ್ದ ಎನ್ನಯ ಸ್ಥಿತಿಯು ಕುಸಿಯಲಿಲ್ಲವೊ ದೇವ ಶಶಿಕುಲ ಪ್ರಸನ್ನ ಹೊಸದಾದ ಚೈತನ್ಯವೆನಗೆ ವಿಕಸಿತವಾಯ್ತು ಉಸಿರಿರುವ ತನಕ ನಾ ಮರೆವುದಿಲ್ಲವೊ ನಿನ್ನ 3
****