Audio by Mrs. Nandini Sripad
ಶ್ರೀವಿಜಯದಾಸಾರ್ಯ ವಿರಚಿತ ಶ್ರೀಪಾಂಡುರಂಗನಲ್ಲಿ ಆತ್ಮೋದ್ಧಾರ ಪ್ರಾರ್ಥನೆ ಸುಳಾದಿ
ರಾಗ ವಲಚಿ
ಧ್ರುವತಾಳ
ವ್ಯಕ್ತನಾಗಿ ಶಕ್ತನಾಗಿ ವ್ಯಾಪಕ ಪಾಂಡುರಂಗ
ಭಕ್ತರಿಗಾಗಿ ಭಾಗ್ಯನಾಗಿ ಬಂದಾ ಬಂದಾ ಪಂಢರಿರಾಯಾ
ಉಕ್ತಿಗಳೊಂದೊಂದು ಲಾಲಿಸಿದರೆ
ಮುಕ್ತಾರು ಬೆರಗಾಗುತಿಪ್ಪಾರು
ಮುಕ್ತಿ ಕ್ರೀಡೆ ಇಲ್ಲೆ ತೋರಿದಾ ತವಕಾದಿಂದಲಿ ಕುಣಿವುತ್ತ
ಮೌಕ್ತಿಕಹಾರಾ ನಾನಾಭರಣಾ ಧರಿಸೀ ಗೋವಳ ಒಡಗೂಡಿ
ತ್ಯಕ್ತಾ ವೈದಿಕ ಮಿಕ್ಕಾದವರು ನೆರೆದು ಜಯಜಯಾವೆನುತಿರೆ
ಯುಕ್ತಿವಂತರು ಯುಗಯುಗದಲಿ ಇದೆ ಪರಿ ನೋಳ್ಪರು
ಭಕ್ತಿಗೊಲಿಪಾದು ಈ ಪರಿ ಭಕ್ತಿ ಪಾಡಿದಾ ಜನಕೆ ಮನಸಿನಲ್ಲಿ ಕನಸಿನಲ್ಲಿ
ಭುಕ್ತಿ ಮೊದಲಾದಾ ಸಂಪತ್ತುನೀವ ಸುರಧೇನು ಇದ್ದಂತೇವೆ
ಭಕ್ತಿಗೊಲಿದು ಈ ಪರಿ
ರಿಕ್ತಾರಿಗತಿ ಪ್ರೀಯಾ ಪ್ರತೀಕಾದೊಳಗೆ ಇದ್ದಾ
ವ್ಯಕ್ತನಾದಾ ಯೋಗೀಶ್ವರಾ
ಶಕ್ತಿಪ್ರದಾ ಚಂದ್ರಭಾಗ ನಿವಾಸಾ ವಿಜಯವಿಟ್ಠಲ
ಸಕಲ ಭಕ್ತಿಗೊಲಿವುದು ಈ ಪರಿ ॥ 1 ॥
ಮಟ್ಟತಾಳ
ಎಣೆಗಾಣೆನು ರಂಗನ ಕರುಣಾಕಟಾಕ್ಷಕ್ಕೆ
ಮನದಲ್ಲಿ ನೆನಿಸಿದ್ದು ಸಲಿಸುವ ಸಂಭ್ರಮದಿ
ಕುಣಿಕುಣಿದಾಡುವನು ಪದಗತಿಯನು ಬಿಡದೆ
ಮಣಿಭೂಷಣದಿಂದ ಗೋಪಿಯರೆಡಬಲದಿ
ಮಿನಗುತಿರೆ ಗೋಗಳು ಸುತ್ತಲು ಒಪ್ಪೆ
ಮುನಿ ಪುಂಡರೀಕನಿಗೆ ಅಂದೊಲಿದು ಬಂದಾತನೆ ಈತನೆ ಕಾಣೊ
ಅನುಮಾನಗೊಳದೀರಿ ಆರ್ತಿಯು ಪೋಗೋದು
ಘನಮಹಿಮಾ ನಮ್ಮ ವಿಜಯವಿಟ್ಠಲಾ
ಮನುಜರೊಳಗೆ ಮನುಜರೂಪ ಧರಿಸಿ ಮೆರೆವ ॥ 2 ॥
ತ್ರಿವಿಡಿತಾಳ
ಎಲ್ಲಿದ್ದರೇನಯ್ಯಾ ಭಕ್ತರಿಗೆ ಒಲಿವ ಶ್ರೀ -
ವಲ್ಲಭನ ಪ್ರೀತಿ ಅತಿ ಮಿಗಿಲು
ಕಲ್ಲು ಎನಿಸಲ್ಲಾ ಇದರಲ್ಲಿ ಪ್ರಲ್ಹಾದನ್ನಾ
ಸೊಲ್ಲಿಗೆ ಬಂದಂತೆ ಬಂದ ಕಾಣೋ
ವಲ್ಲಾವ ಜಾತಿಗಳು ಸುತ್ತಾ ಚಪ್ಪಳೆನಿಕ್ಕಿ
ನಿಲ್ಲದೆ ಕುಣಿವರು ದೇವನೊಡನೆ
ಬಲ್ಲಿದಾ ಹರಿಕಾಣೊ ಎಲ್ಲಿ ನೋಡಿದರೀತಗೆ
ಇಲ್ಲವೋ ಸಾಮ್ಯವಾಧಿಕ್ಯ ಇಹಪರದಲ್ಲಿ
ಎಲ್ಲಾ ಕ್ಷೇತ್ರದಕ್ಕಿಂತ ಇದೆ ಉತ್ತಮಾವೆನ್ನಿ
ಬಲ್ಲಾರು ಬೊಮ್ಮಾದಿ ಭಕ್ತರೆಲ್ಲಾ
ಗಲ್ಲಾ ಎರಡರ ಬೆಳಕು ಸೂರ್ಯಚಂದ್ರಮರಂತೆ
ಅಲ್ಲೆಲ್ಲ ತುಂಬಿದೆ ವೈಚಿತ್ರಿಕ
ಮಲ್ಲಮರ್ದನ ನಮ್ಮ ವಿಜಯವಿಟ್ಠಲಾ
ಎಲ್ಲೆ ಮಾಯದ ಬೊಂಬಿಯೊ ವರ್ನಿಸಲಾರಿನೊ ॥ 3 ॥
ಅಟ್ಟತಾಳ
ನಿತ್ಯ ಸತ್ಯಕಾಮಾ ಪರಿಪರಿ ರೂಪದಲಿ
ಭೃತ್ಯರ ಸತ್ಯಕಾಮರ ಮಾಡಿ ಮನ್ನಿಸಿ
ಅತ್ಯಂತವಾಗಿ ಆಶಿಯ ಬಿಡಿಸಿ ಕೂಡ
ಹತ್ತೊಂದು ಇಂದ್ರಿಯಾ ಸುಖ ಬಡಿಸುವ ಜಾಣಾ
ತೊತ್ತಿನ ತೊತ್ತಿನ ಮಗನ ಮೊಮ್ಮಗ ನಾನು
ಎತ್ತಿ ಭವದಿಂದ ಕಡೆಗೆ ಹಾಕುವದಯ್ಯಾ
ಮೃತ್ಯು ನಿವಾರಣಾ ವಿಜಯವಿಟ್ಠಲಾ
ಸತ್ಯಸಂಕಲ್ಪಾ ನೀನಹುದೊ ಮತ್ತಹುದೊ ॥ 4 ॥
ಆದಿತಾಳ
ಪಾವನ್ನ ನಾನಾದೆ ಪಾವನ್ನ ನಾನಾದೆ
ಪಾವನ್ನ ಮೂರುತಿಯಾ ಪಾದದರುಶನದಿಂದ
ಭಾವದಲಿ ಇಂದು ನೆನಸಿದ ಯಾತ್ರಿಫಲ
ಪೂವಿನೊಳಗೆ ಇಟ್ಟು ಕೊಟ್ಟಂತಾಯಿತೊ ಎನಗೆ
ದೇವನ್ನ ನಿಜರೂಪಾ ಸ್ವಪ್ನದಲ್ಲಿ ಕಂಡೆ
ಆವಜನ್ಮದ ಪುಣ್ಯ ಬಂದೊದಗಿತೊ ಸಿದ್ಧ
ಜೀವನ್ನಾ ಮುಕ್ತರಿಲ್ಲಿ ನಲಿದಾಡುವರು ಬಂದು
ಕೈವಲ್ಲ್ಯಾಗುವದಕ್ಕೆ ಸಂಶಯ ಇನ್ನುಂಟೆ
ಗೋವೆ ಗೋವಳರಾಯಾ ವಿಜಯವಿಟ್ಠಲಾ
ಕಾವ ಕಲ್ಮಷ ಕಳೆದು ಕಳೇವರದೊಳಗಿದ್ದೂ ॥ 5 ॥
ಜತೆ
ಕಂಡು ಧನ್ಯ ನಾನಾದೆ ಕುಲಕೋಟಿಗಳ ಸಹಿತ
ಪುಂಡರೀಕವರದಾ ವಿಜಯವಿಟ್ಠಲಾ ವಿಟ್ಠಲನಾ ॥
*****