ಮೋದದಲಿರಬೇಕಮ್ಮ | ಸುಮ್ಮನೆ ನೀನು
ಮೋದದಲಿರಬೇಕಮ್ಮ ಪ.
ಮೋದ ಶ್ರೀ ಗುರುಗಳ ಚರಣ ಕಮಲವನ್ನು
ಮೋದದಿಂದಾಶ್ರಯಿಸಿ ಸುಖದಲಿರಲಿಬೇಕು
ಲೋಕದ ಜನಗಳ ನುಡಿಗಳ ಲೆಕ್ಕಿಸದೆ
ಲೋಕವಂದ್ಯನ ಚರಣ ಕಮಲವ ಸ್ಮರಿಸುತ ಅ.ಪ.
ಪರಮಾತ್ಮನ ಕೃಪೆಗೆ ಕಾರಣವಿದು
ಗುರುಕರುಣದ ಬಲವು
ಅರಿಯದ ಮನುಜರ ಬಿರುನುಡಿಗೆ ಮನ
ಕೊರಗಿಸದಂದದಿ ಹರುಷಪಡಲಿಬೇಕು 1
ಎಚ್ಚತ್ತು ನಡಿಯಬೇಕು | ಶ್ರೀ ಗುರುಸೇವೆ
ಇಚ್ಛೆಯಿಂ ಮಾಡಬೇಕು
ತುಚ್ಛ ಮಾತುಗಳಿಗೆ ಮನಕೊಡದೆ ಹರಿ
ಮೆಚ್ಚುವಂದದಿ ಗುರು ಇಚ್ಛೆಯನರಿತು ನಡೆದು 2
ವಂದನೆ ನಿಂದ್ಯಗಳ | ಮೋಕ್ಷಾರ್ಥಿಯು
ಒಂದಾಗಿ ಭಾವಿಸುತ
ಮಂದರೋದ್ಧರನ ಮಾಯಕೆ ಮನದಿ ಮೋದಿಸುತ
ಮಂದರಂದದಿ ಮನುಜರಿಗೆ ತೋರುತಲಿದ್ದು 3
ಸಾಧನಲೋಕವಮ್ಮ | ಮಾನವ ಜನ್ಮ
ಸಾಧನ ಜನ್ಮವಮ್ಮ
ಸಾಧಾರಣವಲ್ಲ ಸಾಧು ಸಜ್ಜನಸಂಗ
ಸಾಧಿಸಿ ದುಷ್ಕರ್ಮ ಛೇದಿಸಬೇಕಮ್ಮ 4
ಚಿಂತೆಯನಳಿಯಬೇಕು | ಶ್ರೀ ಗುರು ಕರುಣ
ಅಂತರ ತಿಳಿಯಬೇಕು
ಸಂತತ ಗೋಪಾಲಕೃಷ್ಣವಿಠ್ಠಲನ
ಅಂತರಂಗದಿ ಭಜಿಸಿ ಮುಕ್ತಿ ಸಾಧಿಸಬೇಕು 5
****