Audio by Vidwan Sumukh Moudgalya
..by modalakallu sheshadasaru
ಶ್ರೀ ಮೊದಲಕಲ್ಲು ಶೇಷದಾಸರ ಕೃತಿ
ರಾಗ : ವಲಚಿ ಖಂಡಛಾಪು
ಕರುಣಿಸಿ ವೃಷ್ಟಿಗರೆಯೊ ಕಮಲನಯನ
ನರರಗಳ ಅಪರಾಧ ನೋಡದಲೆ ವೇಗದಲಿ ॥ಪ॥
ಅನ್ನದಿಂದಲಿ ಭೂತಗಣ ಉದ್ಭವಿಸುವುದು
ಅನ್ನದಿಂದಲಿ ಅಭಿವೃದ್ಧಿಯಾಹದು
ಅನ್ನದಿಂದಲಿ ತ್ರಿವಿಧಸಾಧನವು ಪೂರ್ತಿಪದು
ಪರ್ಜನ್ಯದಿಂದಲಿ ಅನ್ನಜನಿಸುವ ಕಾರಣದಿ ॥೧॥
"ಭೀಷಾಸ್ಮೌದ್ವಾತಃ ಪವತೆ" ಎಂಬೋಕ್ತಿಯಲಿ
ಈ ಸಮಸ್ತಮರರು ನಿನ್ನಭಯದಿ
ಬ್ಯಾಸರದೆ ತಮ್ಮತಮ್ಮ ವ್ಯಾಪಾರಗಳಮಾಡಿ
ಪೋಷಿಸುವರು ಜಗವು ಪ್ರೀತಿಗಳಿಂದ ॥೨॥
"ವರುಷ ನಿಘೃಣ್ಹೌಮಿ ಸೃಜಾಮಿಚ" ಎಂದು
ಹರಿಯೆ ನಿನ್ನಂದಲೆ ವ್ಯಾಹರಿಸಿತು
ಸುರಪತಿ ವರುಣಾದಿ ಸುರರು ನಿಮಿತ್ಯರು
ಪರಮ ಗುಣಸಾಂದ್ರ ಹೇ ಕರುಣಾಬ್ಧಿ ಚಂದ್ರ ॥೩॥
ನರನೊಬ್ಬ ಪ್ರಭುತನ್ನ ಪರಿಚರರನು
ಪರಮ ಅಭಿಮಾನದಲಿ ಪರಿಪಾಲಿಪ
ಸುರರ ಬ್ರಹ್ಮಾದಿಗಳ ದೊರೆಯೆ ನಿನಗೆ ಮಾತು
ಸರಿಹೋದರೀ ವಚನ ಸಲಿಸು ಕೃಪೆಯಿಂದ ॥೪॥
ಆವಾವಸಾಧನದೀ ಆವಸುಖವೈದುತಿರೆ
ದೇವನಿನ್ನಯ ಕೀರ್ತಿ ಬರುವದೆಂತೊ
ದೇವ ದೇವೆಶ ಗುರುವಿಜಯವಿಠಲರೇಯ
ಸಾವಧಾನದಿ ತಿಳಿದು ಪಾಲಿಪುದು ಬಿನ್ನಪವ ॥೫॥
******