ತಾಳವ ತಟ್ಟಿದವಾ...
ತಾಳವ ತಟ್ಟಿದವ ,ಸುರರೊಳು ಸೇರಿದವ||3|| ||ತಂಬೂರಿ||
ಗೆಜ್ಜೆಯ ಕಟ್ಟಿದವಾ...ಆ...
ಗೆಜ್ಜೆಯ ಕಟ್ಟಿದವ ,ಖಳರೆದಯೆ ಮೆಟ್ಟಿದವ||2||
ಗಾಯನ ಪಾಡಿದವ ,ಹರಿಮೂರ್ತಿ ನೋಡಿದವ||2||
ಗಾಯನ ಪಾಡಿದವ||2||
ಗಾಯನ ಪಾಡಿದವ ,ಹರಿಮೂರ್ತಿ ನೋಡಿದವ ||ತಂಬೂರಿ||
ವಿಠಲನ ನೋಡಿದವ
ಪುರಂದರ ವಿಠ್ಠಲನ ನೋಡಿದವಾ...ಆ..||2||
ವೈಕುಂಠಕೆ ಓಡಿದವಾ...
ವಿಠ್ಠಲನ ನೋಡಿದವ ,ವೈಕುಂಠಕೆ ಓಡಿದವ||5|| ||ತಂಬೂರಿ||
***
pallavi
tambUri mITTidava bhavAdi dATTidava tALava taTTidava suraroLu sEridava
samaashTi caraNam
gejjaya kaTTidava kaLaredeya meTTidava gAyana pADidava harimUruti nODidava
viThalana nODidava (purandara) vaikuNThake ODidava
***
ತಂಬೂರಿ ಮೀಟಿದವ ಭವಾಭ್ದಿ ದಾಟಿದವ ತಾಳವ ತಟ್ಟಿದವ ಸೂರ್ಯರೊಳು ಸೇರಿದವ |ಗೆಜ್ಜೆಯ ಕಟ್ಟಿದವ ಖಳರ ಎದೆ ಮೆಟ್ಟಿದವ
ಗಾನವ ಪಾಡಿದವ ಹರಿ ಮೂರ್ತಿ ನೋಡಿದವ ಪುರಂದರ ವಿಠಲನ ನೋಡಿದವ ವೈಕುಂಠಕ್ಕೆ ಓಡಿದವ||
ಪುರಂದರದಾಸರು ದಾಸ ವರೇಣ್ಯರು. ದೇವರನ್ನು ಕಂಡವರು. ಮಾತನಾಡಿದವರು. ಮಾತನಾಡಿಸಿದವರು. ಆಧ್ಯಾತ್ಮದಲ್ಲಿ ಅನುಭಾವಿಗಳು
ಈಶ ದಾಸ ತತ್ವ ನಿಷ್ಠರು ದಾಸತ್ವದ ಪ್ರಯೋಜನ ಕೊಂಡಾಡುತ್ತಾರೆ. ತಂಬೂರಿ ಮೀಟಿದವ, ತಾಳ ತಟ್ಟಿದವ, ಗೆಜ್ಜೆ ಕಟ್ಟಿದವ, ಗಾನ ಮಾಡಿದವ ಹರಿ ಮೂರ್ತಿ ನೋಡಿದವ ಹೀಗೆ ದಾಸತ್ವದ ಬಹಿರಂಗ ದೀಕ್ಷೆ ಹೇಳುತ್ತಾ, ಅಂತರಂಗದ ದೀಕ್ಷೆಯನ್ನು ಸಂಕೇತಿಸುತ್ತಾರೆ.
ದಾಸರ ಮಾತಿನಲ್ಲಿ ಸಾಮಾನ್ಯ ಅರ್ಥವನ್ನು ಬದಿಗಿಡೋಣ. ವಿಶೇಷ ಅರ್ಥ ಹುಡುಕುವ ಪ್ರಯತ್ನ ಮಾಡೋಣ. ನೋಡಿ. ತಂಬೂರಿ ಮೀಟಿದವ- ತಂಬೂರಿ ಒಂದು ಸಂಗೀತದ ವಾದ್ಯ.
ದೊಡ್ಡವಾದ ಶಿರ, ನೀಳವಾದ ಕಾಯ. ಮೇಲೆ ಬಿಗಿದ ನಾಲ್ಕು ತಂತಿಗಳು.
ಇದು ನಾವು ನೋಡುವ ಲೌಕಿಕ ತಂಬೂರಿ.
ಉಪನಿಷತ್ತು ಮತ್ತೊಂದು ಮಾತು ಹೇಳುತ್ತದೆ.
ನಮ್ಮ ಈ ದೇಹವೇ ದೈವಿ ವೀಣೆ. ಅಧ್ಯಾತ್ಮದ ತಂಬೂರಿ.
ಋಗ್ವೇದ ಯಜುರ್ವೇದ ಸಾಮವೇದ, ಅಥರ್ವ ವೇದ ಈ ನಾಲ್ಕು ತಂತಿಗಳನ್ನು ಮೀಟ ಬೇಕು. ಅಧ್ಯಯನ ಮಾಡಬೇಕು. ತಿಳಿಯ ಬೇಕು. ಪಂಚರಾತ್ರ ಹರಿವಂಶ, ರಾಮಾಯಣ, ಮಹಾಭಾರತ ನಾಲ್ಕುಶಾಸ್ತ್ರ ತಂತಿ ಮೀಟಬೇಕು. ಅರಿಯ ಬೇಕು. ಗುರುಗಳ ಉಪದೇಶ ಆಗಬೇಕು. ಅನುಗ್ರಹ ಆಗಬೇಕು.
ಶಾಸ್ತ್ರಾರ್ಥವು ಈ ದೈವೀ ತಂಬೂರಿಯ ಹೃದಯ ತುಂಬಬೇಕು. ತಳವೂರ ಬೇಕು. ಮನಸ್ಸಿನಲ್ಲಿ ಮೂಡಬೇಕು. ಅನುಸಂಧಾನ ಬೇಕು. ಆಚರಣೆಯಲ್ಲಿ ತರಬೇಕು.
ಮೀಟಿದಾಗ ಹೃದಯ ಹಾಡಬೇಕು.
ಹರಿ ನೀನು ಈಶ ನಾನು ದಾಸ.
ಆಗ ಪಾಮರ ತಂಬೂರಿ ಮೀಟಿದವ ಆಗುತ್ತಾನೆ. ಹರಿದಾಸನಾಗುತ್ತಾನೆ.
ಭವಾಬ್ಧಿ ಸಂಸಾರ ಸಾಗರ ದಾಟುತ್ತಾನೆ.
ತಾಳವ ತಟ್ಟಿದವ
ತಾಳವ ತಟ್ಟಿದವ ಸೂರ್ಯರೊಳು ಸೇರಿದವ - ಒಂದು ಪ್ರಸಂಗ. ಭೀಮಬಲದ ಬಗ್ಗೆ ಕೃಷ್ಣ ಕೇಳಿದ. ಭೀಮ ಹೇಳಿದ.
ಹೇ ಸ್ವಾಮಿ
'ಇಡೀ ಬ್ರಹ್ಮಾಂಡವನ್ನೇ ಮಧ್ಯದಲ್ಲಿ ಸೀಳುತ್ತೇನೆ. ಎರಡು ತಾಳ ಮಾಡುತ್ತೇನೆ, ಈಎರಡೂ ತಾಳ ತಟ್ಟುತ್ತ ಕೃಷ್ಣಾ, ಬಾಯಿತುಂಬ ನಿನ್ನ ಸ್ತುತಿ ಹಾಡುತ್ತೇನೆ.' ಇದು ನನ್ನ ಬಲ.
ಭೀಮನ ಮಾತು. ಇದು ಹನುಮನ ಮಾತೂ ಹೌದು. ರಾಮ ಈಶ. ಹನುಮ ದಾಸ.
ಕೃಷ್ಣ ಈಶ ಭೀಮ ದಾಸ.
ಇವರು ನಿಜವಾಗಿ ತಾಳ ತಟ್ಟಿದವರು. ಸೂರಿ ಅಂದರೆ ಜ್ಞಾನಿಗಳು. ಸೂರ್ಯ ಪ್ರಕಾಶ ಎಂದರೆ ಜ್ಞಾನದ ಆವರಣ. ಅದರ ಒಳಗೆ ಹೊಕ್ಕವರು, ಸೂರ್ಯನ ಒಳಗೆ ಹೊಕ್ಕವರು.
ಸೂರ್ಯನಾರಾಯಣನ ಅನುಗ್ರಹ ಪಡೆದವರು.
ಇವರು ಜ್ಣಾನಿಗಳು ಎಂದರ್ಥ.
ಅವರು ಹರಿಯ ಕಂಡವರು. ಅನುಗ್ರಹ ಉಂಡವರು.
ಎರಡು ತಾಳ ತಟ್ಟಬೇಕು. ಒಂದು ಜ್ಞಾನ.
ಇನ್ನೊಂದು ಭಕ್ತಿ.
ಜ್ಞಾನದಿಂದ ಭಕ್ತಿಯನ್ನು ತಟ್ಟಿ ಅದು ಬಲು ಗಟ್ಟಿ. ಭಕ್ತಿ ಯಿಂದ ಜ್ಞಾನದ ತಾಳವನ್ನು ತಟ್ಟಿ.
ಅದು ಪಕ್ವಜ್ಞಾನದ ಗಟ್ಟಿ.
ಈ ಎರಡೂ
ತಾಳ ಜೊತೆಯಾಗಬೇಕು. ಪಕ್ವ ಜ್ಞಾನ ಭಕ್ತಿ. ಅದುವೇ ಪರಮಾತ್ಮನಲ್ಲಿ ಆಸಕ್ತಿ. ಅವನ ಆರಾಧನೆ. ಸಾಧನೆ.
ದೇಹ, ಆತ್ಮ ಈ ಎರಡು ತಾಳ ತಟ್ಟಬೇಕು. ಜೊತೆಯಾಗಬೇಕು. ಅಂತರಂಗ ಬಹಿರಂಗ ಒಂದಾಗ ಬೇಕು.
ಬಹಿರಂಗ, ಅಂತರಂಗದಲ್ಲಿ ಇಣುಕಿ ನೋಡಬೇಕು. ಅಂತರದಲ್ಲಿ ಅಂತರಾತ್ಮನ ಕಾಣಬೇಕು.
ಆಗ ಆತ ಸೂರಿ. ಸೂರ್ಯನೊಳಗೆ ಹೊಕ್ಕವ.
ಆಚಾರ ವಿಚಾರ ಎರಡು ತಾಳಗಳು. ತಾಳಗಳು ಒಂದಾಗಬೇಕು ಧರ್ಮದಂತೆ ವಿಚಾರ ವಿಚಾರದಂತೆ ಆಚಾರ ಸದಾಚಾರ ವಾಗಬೇಕು ನುಡಿದಂತೆ ನಡೆ. ನಡೆದಂತೆ ನುಡಿ. ನಡೆ ನುಡಿ ಎರಡು ತಾಳಗಳು.
ಶಾಸ್ತ್ರದ ಮಾತು ಕೇಳಬೇಕು. ತಾಳ ತಪ್ಪದಂತೆ ನಡೆ-ನುಡಿ ನಡೆಯಬೇಕು.
ನಡೆ ನುಡಿಯ ಒಡೆಯ ಜಗನ್ನಾಥ ಮೆಚ್ಚಬೇಕು. ತಾಳ ತಟ್ಟಿದ್ದು ಸಾರ್ಥಕ. ಆಗ ಆತ ಸೂರಿ.ಜ್ಞಾನಿ.
ತಾಳಬೇಕು ತಕ್ಕ ಮೇಳ ಬೇಕು. ತಾಳ ಎಂದರೆ ತಾಳುವಿಕೆ. ಒಂದು ತಪಸ್ಸು. ಈ ತಪಸ್ಸು ಬೇಕು. ತಪದ ಸಾಧನೆಗೆ ತಕ್ಕ ಮೇಳ ಬೇಕು. ಎಂದರೆ ಸಜ್ಜನ ಸಂಗಬೇಕು.
ತಪಸ್ಸು ಮತ್ತು ಸಜ್ಜನ ಸಂಗ ಈ ತಾಳಗಳಿಂದ ಲಿಂಗದೇಹ ಭಂಗವಾಗಬೇಕು.
ಇಂತು ತಾಳ ತಟ್ಟಿದವ ಸಾಧನೆ ಮಾಡಿದವ. ಸೂರಿ ಆದವ.
ಗೆಜ್ಜೆಕಟ್ಟಿದವ ಖಳರ ಎದೆ ಮೆಟ್ಟಿದವ
ಪುರಂದರದಾಸರು ಇನ್ನೊಂದೆಡೆ ಹೇಳುತ್ತಾರೆ -
ಗೆಜ್ಜೆಯ ಕಾಲಿಗೆ ಕಟ್ಟಿರಿ ಎಂಬೋ ಕಾಗದ ಬಂದಿದೆ ಹೆಜ್ಜೆ ಹೆಜ್ಜೆಗೆ ಹರಿ ಹರಿ ಎನ್ನಿರೋ ಎಂಬ ಕಾಗದ ಬಂದಿದೆ ಲಜ್ಜೆ ಬಿಟ್ಟು ಕುಣಿಯಿರಿ ಎಂಬೋ ಕಾಗದ ಬಂದಿದೆ.
ಪದುಮನಾಭ ಸ್ವತಃ ಬರೆದ ಕಾಗದ ಇದು. ದಾಸರಾಗಬೇಕಾದರೆ, ಭವಾಬ್ದಿ ದಾಟಬೇಕಾದರೆ, ಕಾಲಿಗೆ ಗೆಜ್ಜೆ ಕಟ್ಟಿ.
ಹರಿ, ನೀನು ಈಶ. ನಾನು ನಿನ್ನ ದಾಸ ಎಂದು ನಿಮ್ಮನ್ನು ನೀವೇ ಒಪ್ಪಿಸಿಕೊಳ್ಳಿ.
ಶರಣ್ಯನಲ್ಲಿ ಸರ್ವ ಶರಣಾಗತಿ ಹೊಂದಿ.
ಹರಿ ರಕ್ಷಿಸಿಯೇ ರಕ್ಷಿಸುತ್ತಾನೆ. ಎಂಬ ವಿಶ್ವಾಸವಿರಲಿ
ಹರಿ ಹರಿ ಎಂದು ಭಕ್ತಿ ತುಂಬಿ ಹೃದಯ ಉಕ್ಕಿ ಅಂತಃಕರಣದಿಂದ ಧ್ಯಾನ ಮಗ್ನರಾಗಿ. ಕೂಗಿ.
ಅಂತಃಕರಣದ ಧ್ವನಿ, ಹೆಜ್ಜೆಯ ಗೆಜ್ಜೆಯನಾದ ಒಂದಾಗಬೇಕು.
ನಾದ ಎಂದರೆ ಶಬ್ದ.
ಶಬ್ದ ರಾಶಿಯೇ ವೇದ. ವೇದ ಹೇಳುವುದೇ -
ಶ್ರೀಹರಿಯನ್ನು.
ಆತ ಸರ್ವ ವೇದ ಪ್ರತಿಪಾದ್ಯ ಹರಿಸರ್ವೋತ್ತಮ ಎಂಬುದು ಸಾರ.
ಗೆಜ್ಜೆನಾದ ಇದನ್ನೇ ಪ್ರತಿಬಿಂಬಿಸಬೇಕು. ಅಂತರಾಳದ ಧ್ವನಿಯ ನಾದ ಗೆಜ್ಜೆಯನಾದ ಒಂದಾಗಬೇಕು.
ಹರಿ ನೀನು ಈಶ. ನಾನು ದಾಸ ಎಂಬ ತಥ್ಯ ಹೊರ ಹೊಮ್ಮಬೇಕು. ಆಗ ಗೆಜ್ಜೆ ಕಟ್ಟಿದ್ದು ಸಾರ್ಥಕ.
ಲಜ್ಜೆ ಬಿಟ್ಟು ಎಂದರಲ್ಲ ಏಕೆ?
ಲಜ್ಜೆ ಎಂದರೆ ದೇಹದ ಅಭಿಮಾನ ಬಿಡಿ. ಅಹಂಕಾರ ಬಿಡಿ ಮಮಕಾರ ಬಿಡಿ
ನಾನು ಅವನವ
ಅವನು ನನ್ನವ ಎಂಬ ಭಾವದಲ್ಲಿ ಒಂದಾಗಿ. ಅದು ಹರಿಪ್ರಸನ್ನತೆಗೆ ಸಾಧನ.
ಮತ್ತೆ
"* 'ಖಳರ ಎದೆ ಮೆಟ್ಟಿದವ' ಅಂದರಲ್ಲ ಏನು ಅರ್ಥ?
ಇಲ್ಲಿ ಖಳರು ಎಂದರೆ ಕಾಮ, ಕ್ರೋಧ, ಮದ, ಮತ್ಸರಾದಿ ಅರಿಷಡ್ ವೈರಿಗಳು
ಯಾರು ಕಾಲಿಗೆ ಗೆಜ್ಜೆ ಕಟ್ಟುತ್ತಾರೋ. ಅಂದರೆ ತತ್ವ ಸಾರ ಕೇಳಿ, ಹರಿಯ ದಾಸರಾಗುತ್ತಾರೋ ಅವರು ಅರಿಷಡ್ ವೈರಿಗಳನ್ನು ಗೆದ್ದವರು ಎಂದರೆ ಖಳನ ಎದೆ ಮೆಟ್ಟಿದವರು.
ತಥ್ಯ - ಗೆಜ್ಜೆ ಕಟ್ಟಿ ತಂಬೂರಿ ಮೀಟಿದವರು ಅರ್ಥಾತ್ ಹರಿ ಮಹಿಮೆ ತಿಳಿದು ಹರಿ ಮಹಿಮೆ ಹಾಡಿ ಹರಿದಾಸರಾದವರು ಭವಾಬ್ಧಿ ದಾಟುವವರು.
ಇನ್ನು ಗಾನವ ಪಾಡಿದವ ಹರಿ ಮೂರ್ತಿ ನೋಡಿದವ
ಇದು ಅಪರೋಕ್ಷ ಜ್ಞಾನದ ಹಂತ.
ಅಧ್ಯಯನ ಅಧ್ಯಾಪನ ಮಾಡಬೇಕು.
ಜಪ ತಪ ಮಾಡಬೇಕು. ಶ್ರವಣ ಮನನ ಧ್ಯಾನ ಮಾಡಬೇಕು. ನವ ವಿಧ ಬಕ್ತಿ ಮಾಡಬೇಕು. ಇದೆಲ್ಲ ಕೂಡಿ ಪರಿಪಕ್ವ ಜ್ಞಾನ ಪರಿಪಕ್ವ ಭಕ್ತಿ ಪರಮೇಶ್ವರನಲ್ಲಿ ಮೂಡಬೇಕು.
ಇದು ಗಾನ ಪಾಡಿದವ
ಶ್ರೀ ಹರಿ ಸಂತುಷ್ಟ ನಾಗಬೇಕು. ವಾಯುದೇವರು ಈ ಸಾತ್ವಿಕ ಪಾಮರನನ್ನು ಅನುಗ್ರಹಿಸು ಎಂದು ನಮ್ಮ ಪರವಾಗಿ ಹರಿಯಲ್ಲಿ ಬೇಡಿಕೊಳ್ಳಬೇಕು. ಸಂತುಷ್ಟನಾದ ಹರಿ ಸಾತ್ವಿಕ ಜೀವಗೆ ತನ್ನ ದರ್ಶನ ಕೊಡುವ. ಆತ ಅಪರೋಕ್ಷ ಜ್ಞಾನಿಯಾಗುವ.
ಇದು ಗಾನ ಪಾಡಿದವ ಹರಿ ಮೂರ್ತಿ ನೋಡಿದವ ಎಂಬ ಮಾತಿನ ತಥ್ಯ.
ಹರಿ ಮೂರ್ತಿ ನೋಡಿದವ ವೈಕುಂಠಕ್ಕೆ ಓಡಿದ
ಅಪರೋಕ್ಷ ದರ್ಶನ ಹರಿಸಾಕ್ಷಾತ್ಕಾರವಾದ ಮೇಲೆ ವೈಕುಂಠ ಅಂದರೆ ಮೋಕ್ಷ ಕಟ್ಟಿಟ್ಟ ಬುತ್ತಿ.
ಅಪರೋಕ್ಷ ಆದವ ತನ್ನ ಉಳಿದ ಸಾಧನೆ ಮುಗಿಸುವ ಹರಿಪ್ರಸಾದ ಪಡೆವ. ಹರಿಪುರಕ್ಕೆ ನಡೆವ.
ಇದು ಒಟ್ಟು ತಂಬೂರಿ ಮೀಟಿದವ ಭವಾಭ್ದಿ ದಾಟಿದವ ಎಂಬ ಹಾಡಿನ ಸಾರ.
ಗುರುವಾಂತರ್ಗತ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ
ಶ್ರೀ ಕೃಷ್ಣಾರ್ಪಣಮಸ್ತು
ಡಾ. ವಿಜಯೇಂದ್ರ. ದೇಸಾಯಿ.🙏🏻🙏🏻
***