Showing posts with label ಚಂದಿರ ರಾಮನ್ನ ರಾಣಿ ಸೀತೆಯ ಮುಖ vijayeendra. Show all posts
Showing posts with label ಚಂದಿರ ರಾಮನ್ನ ರಾಣಿ ಸೀತೆಯ ಮುಖ vijayeendra. Show all posts

Thursday, 1 July 2021

ಚಂದಿರ ರಾಮನ್ನ ರಾಣಿ ಸೀತೆಯ ಮುಖ ankita vijayeendra

 " ಶ್ರೀ ಜಗನ್ಮಾತೆಯಾದ ಸೀತಾದೇವಿ ಸ್ತೋತ್ರ "

ರಾಗ : ಸೌರಾಷ್ಟ್ರ ತಾಳ : ಆದಿ

ಚಂದಿರ ರಾಮನ್ನ ರಾಣಿ ಸೀತೆಯ ಮುಖ ।
ದಂದಕ್ಕೆ ಸೋತು ಲಜ್ಜೆಯಿಂದ ರಾತ್ರಿಚರನಾದ ।। ಪಲ್ಲವಿ ।।

ಭಾರತಿ ಮೊದಲಾದ ಸತಿಯರಕ್ಷಿ ಕುಮುದ ।
ಕೊರಕ ಬಿರೀಯೆ ತಾ ಚಿತ್ತ ಚಕೋರ ।
ಮೀರಿ ಮುದದಿ ನಲಿಯಲಾವರ ಕರವೆಂಬ ।
ವಾರಿಜ ಮುಗಿಯೆ ಆನಂದ ಶರಧಿವುಕ್ಕೆ ।। ಚರಣ ।।

ನಸಲಾಲೋಪ್ಪುವ ಕಸ್ತೂರಿ ತಿಳಕಾಕಾಳಂಕ ।
ಹೊಸ ಮುತ್ತಿನೋಲೆ ವರ ಹಾರವರಾಳ್ವಾ ।
ಕುಸುಮ ತಾರೆಗಳಾಗೆ ಆಕೀರ್ಣ ಲೋಕಂಗಳ ।
ನಸುನಗೆ ಬ್ಯಳದಿಂಗಳಾಗೆ ನಗ್ಗೆಡಾಯಿತೆಂದು ।। ಚರಣ ।।

ನಂದಮೂರುತಿ ವಿಜೇಂದ್ರನ ಸ್ವಾಮಿ । ರಾಮ ।
ಚಂದ್ರ ಸೀತೆಯ ಮೊಗದೊಳ್ಮೊಗವ ।
ಸಂದಿಶೆ ವುಪರಾಗದಿ ಪೋಲ್ವಾಯಿರ್ವಹಾರಾ ।
ಮಂದಾಕಿನಿ ಯಮುನಾವೆಂದಾಗಮರರು ಮೀಯೆ ।। ಚರಣ ।।
***


ವಿವರಣೆ by Nagaraju Haveri
ಶ್ರೀ ಸೀತಾದೇವಿಯ ಮುಖಚಂದ್ರನ ಅಂದಕ್ಕೆ - ಜಗತ್ತಿನಲ್ಲಿ ದರ್ಶನ ಮಾತ್ರದಿಂದ ಆಹ್ಲಾದಕರನೆಂದು ಬೀಗುತ್ತಿದ್ದ ಚಂದ್ರನು ಸೋತು ಅವಮಾನಿತನಾಗಿ ಯಾರಿಗೂ ತನ್ನನ್ನು ತೋರಿಗೊಡದೇ ರಾತ್ರಿ ಕಾಲದಲ್ಲಿ ಅದೂ ಕತ್ತಲಲ್ಲಿ ಮಾತ್ರ ಸಂಚರಿಸುವವನಾದನಂತೆ!
ಪ್ರಸಿದ್ಧ ಚಂದ್ರನಿಂತ ವಿಲಕ್ಷಣವೂ, ವಿಶೇಷ ಗುಣಗಳ ವಿಶಿಷ್ಟವೂ ಆದ ಶ್ರೀ ಸೀತಾದೇವಿಯರ ಮುಖ ಚಂದ್ರನ ಸೌಂದರ್ಯ - ಲಾವಣ್ಯ - ತಾರುಣ್ಯಗಳ ದರ್ಶನ ಮಾತ್ರದಿಂದ ಆದ ಪರಿಣಾಮ ಹೀಗಿದೆ...
" ಮೊದಲ ನುಡಿಯಲ್ಲಿ... "
ಭಾರತೀ ಮೊದಲಾದ ಪತಿವ್ರತೆಯರ ಕಣ್ಣುಗಳೆಂಬ ಕುಮುದ ಪುಷ್ಪವು ಬಿರಿಯಿತು - ಅರಳಿತು! ಅವರ ಮನಸ್ಸೆಂಬ ಚಕೋರ ಪಕ್ಷಿ ಮೀರಿದ ಆನಂದದಿಂದ ನಲಿಯಿತು, ಅವರ ಕೈಗಳೆಂಬ ಕಮಲವು ತಾನಾಗಿ ಮುಗಿಯಿತು ಅಂದರೆ ಕಮಲವು ಮೊಗ್ಗಾಯಿತು. ಅವರ ಆನಂದವೆಂಬ ಸಮುದ್ರ ಉಕ್ಕೇರಿತು.
" ಎರಡನೆಯ ನುಡಿಯಲ್ಲಿ .... "
ಶ್ರೀ ಸೀತಾದೇವಿಯರ ಹಣೆಯಲ್ಲಿ ಒಪ್ಪುವ ಕಸ್ತೂರಿ ತಿಲಕವೇ ಚಂದ್ರನಲ್ಲಿನ ಕಳಂಕ. ಹೊಸ ಮುತ್ತಿನ ಓಲೆ ವರಹಾರ ಶ್ರೇಷ್ಠವಾದ ಮುಡಿದ ಅರಳುತ್ತಿರುವ ಹೂವುಗಳು ನಕ್ಷತ್ರಗಳು. ವ್ಯಾಪ್ತಗಳಾದ ಲೋಕಂಗಳು ಆಕೆಯ ನಸುನಗೆಯೆಂಬ ಬೆಳದಿಂಗಳಿಂದ ಕಂಗೊಳಿಸಿದಾಗ ಪ್ರಸಿದ್ಧ ರಾಕಾ ಚಂದ್ರನ ಬೆಳದಿಂಗಳು ಮಬ್ಬಾಯಿತು.
" ಮೂರನೆ ನುಡಿಯಲ್ಲಿ..... "
ಆನಂದಮೂರುತಿ ವಿಜಯೀಂದ್ರಸ್ವಾಮಿ ಮೂಲರಾಮಚಂದ್ರನು ದಯೆಯಿಂದ ತಾನೂ ಆ ಸೀತಾದೇವಿಯ ಮುಖವನ್ನು ನೋಡಿದ. ಆಕೆಯೂ ತನ್ನ ಸ್ವಾಮಿಯ ಮುಖವನ್ನು ಪ್ರೇಮದಿಂದ ನೋಡಿದ ಸಂದರ್ಭ. ಆ ಪರಸ್ಪರ ನೋಟಗಳ ಮೇಳನವೇ ಪರ್ವಕಾಲದಂತಾಯಿತು. ಇದೇ ಗಂಗಾ ಯಮುನಾ ಸಂಗಮವಾಯಿತು ಯೆಂದು ತಿಳಿದು ಅಮರರು ಅದರಲ್ಲಿ ಸ್ನಾನ ಮಾಡಿದರು ಅಂದರೆ ಅವರಿಬ್ಬರ ಕ್ರುಪಾಕಟಾಕ್ಷಕ್ಕೆ ಏಕಕಾಲದಲ್ಲಿ ಪಾತ್ರರಾದರು.
****