ರಾಗ: [ಶ್ರೀರಂಜಿನಿ] ತಾಳ: [ಆದಿ]
ದಯಮಾಡಿ ಸಲಹೆನ್ನದಣೀ ಶ್ರೀ ರಾಘವೇಂದ್ರಾ ಪ
ದಯಮಾಡಿ ಕರುಣಿಸು ದೀನದಾಸನ ಸಂಯಮಿರಾಮಾ ಅ.ಪ.
ಭೂತಮಾತೇಂದ್ರಿಯ ವ್ರಾತ ವಾತಪಿತನಧೀನ-
ವೇತರವ ನಾನು ನಾ ಮಾಡಿದೆನೆಂದು ಅಲೆದಾಡಿದೆನೋ 1
ಪೊರ್ವಜನ್ಮದ ಪಾಪಪುಣ್ಯಗಳನುಸರಿಸಿ
ಸರ್ವ ಮೂಡಿತು ಸಂಕರ್ಷಣನಿಂದರಿಯೆನೋ 2
ನಯದಿ ನೀ ಕೊಟ್ಟಿದ್ದು ನನದೆಂದಹಂಕರಿಸಿ
ವ್ಯಯದ ಜೀವಿತದಲಿ ನಿರ್ಭಯದಿ ನಿನ್ನೆ ಹಂಗಿಸಿದೆ 3
ಘನ್ನ ಮಹಿಮನ ತ್ರಿಗುಣಮಾಯೆ ತಿಳಿಯದೆ ನಾನು
ಹೊನ್ನುಮಣ್ಣು ಹೆಣ್ಣುಗಳಿಗೆ ಮರುಳಾದೆನೆಲ ಮನ್ನಿಸಯ್ಯ 4
ನೀನೆ ಕೆತ್ತಿದ ಬೊಂಬೆ ನೀನೆ ಬೆಳೆಸಿದ ಮರವು
ನೀನೆ ಕೆಡಹುವುದೇ ನಿನೇಗೇನು ಸಮ್ಮತವೋ ಯತಿರನ್ನಾ 5
ಗರ್ವವಳಿದು ಹಗಲಿರಳು ನಿರ್ವಿಣ್ಣ ಕುಗ್ಗಿದನೆನ್ನ
ಸರ್ಪೇಶನೊಲಿದ ಜ್ಞಾನಿಚಂದ್ರನೆ ಕೈಪಿಡಿದೆಬ್ಬಿಸು ಬೇಗ 6
ಆನಂದಾನಂತವಿಠಲ ಹರಿಭಕ್ತ ಪ್ರಹ್ಲಾದರಾಯಪ್ರಿಯ
ಊನಗುಣ ಬಿಡಿಸು ವನಮಾಲಿ ಸುಧ್ಯೇಯಾ 7
***