ಮಾಡು ಸಿಕ್ಕದಲ್ಲಾ , ಮಾಡಿನ ಗೂಡು ಸಿಕ್ಕದಲ್ಲ |
ಜೋಡಿ ಹೆಂಡ್ರಂಜಿ ಓಡಿಹೋಗುವಾಗ
ಗೋಡೆ ಬಿದ್ದು ಬಯಲಾಯಿತಲ್ಲ ||
ಎಚ್ಚರಗೊಳಲಿಲ್ಲಾ , ಮನವೇ
ಹುಚ್ಚನಾದೆನಲ್ಲಾ |
ಅಚ್ಚಿನೊಳಗೆ ಮೆಚ್ಚು
ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದುಹೋಯಿತಲ್ಲಾ ||
ಮುಪ್ಪು ಬಂದಿತಲ್ಲಾ , ಪಾಯಸ
ತಪ್ಪದೆ ಉಣಲಿಲ್ಲಾ |
ತುಪ್ಪದ ಬಿಂದಿಗೆ
ತಿಪ್ಪೆಯ ಮೇಲೆ
ಧೊಪ್ಪಗೆ ಬಿತ್ತಲ್ಲಾ ||
ಯೋಗವು ಬಂತಲ್ಲಾ , ಬದುಕು ವಿ-
ಭಾಗವಾಯಿತಲ್ಲಾ |
ಭೋಗಿಶಯನ ಶ್ರೀ
ಪುರಂದರವಿಠಲನ
ಆಗ ನೆನೆಯಲಿಲ್ಲಾ |
***
ಮಾಡು ಸಿಕ್ಕದಲ್ಲಾ – ಮಾಡಿನ,
ಗೂಡು ಸಿಕ್ಕದಲ್ಲಾ
ಜೋಡು ಹೆಂಡಿರಂಜಿ ಓಡಿಹೋಗುವಾಗ
ಗೋಡೆ ಬಿದ್ದುಬಯಲಾಯಿತಲ್ಲಾ
ಪುರಂದರ ದಾಸರು
ದಾಸರುಗಳು, ಅನುಭಾವಿಗಳೆಲ್ಲಾ ಮನುಷ್ಯ ಜನ್ಮದ ಶ್ರೇಷ್ಠತೆಯನ್ನು ನರದೇಹದ ನಶ್ವರತೆಯನ್ನು ಕುರಿತಾಗಿ ಎಚ್ಚರಿಸುವವರೆ. ಅತಿ ದುರ್ಲಭವಾದ ಮಾನವ ಜನ್ಮ ದೊರೆತಮೇಲೆ ಲೋಲುಪತೆಯಿಂದ, ದುಶ್ಚಟ ದುರ್ಗುಣಗಳನ್ನು ತುಂಬಿಕೊಂಡು, ಸಾಧನೆಗೆ ಒದಗುವ ಈ ಶ್ರೇಷ್ಠ ಜನ್ಮವನ್ನು ಹಾಳು ಮಾಡಿಕೊಳ್ಳದೆ ಸತ್ಕರ್ಮ, ಸಚ್ಚಾರಿತ್ರ, ಸದುಪಾಸನೆಗಳ ಮಾರ್ಗ ಹಿಡಿದು ಅಕ್ಷಯವಾದ ಕೈವಲ್ಯವನ್ನು ಪಡೆಯುವುದೇ ಪರಮವಾದ ಮತ್ತು ಏಕಮೇವ ಗುರಿಯಾಗಬೇಕು ಎಂದು ಸಾರಿ ಸಾರಿ ಹೇಳುತ್ತಾರೆ. ಅಜ್ಞಾನವಶರಾಗಿ ಅಡ್ಡಹಾದಿ ಹಿಡಿದು ಈ ಅಮೂಲ್ಯ ಜೀವನವನ್ನು ಹಾಳುಮಾಡಿಕೊಂಡು ಕಡೆಯಲ್ಲಿ ಪರಿತಪಿಸುವುದರಿಂದ ಪ್ರಯೋಜನವೇನು ಎಂದು ನಮ್ಮನ್ನು ಪದೇ ಪದೇ ಎಚ್ಚರಿಸುತ್ತಾರೆ.
‘ಮಾಡು’ ಎಂಬುದು ಕರ್ಮ ಮೋಕ್ಷಸಾಧನೆಗೆ ಕಾರಣವಾದ ಕರ್ಮ ಜ್ಞಾನಗಳ ಭಕ್ತಿಮಾರ್ಗ. ‘ಮಾಡಿನ ಗೂಡು’ ನಿಶ್ಚಲ ಭಕ್ತಿಗೆ ನಿಲುಕುವ ಭಗವಂತ. ಆದರೆ ಆ ಮಾಡನ್ನು ಹಿಡಿದು, ಮಾಡಿನ ಗೂಡನ್ನು(ಪರಮಾತ್ಮನನ್ನು) ಸೇರುವುದು ಅಷ್ಟು ಸುಲಭವಲ್ಲ. ಆ ಸಾಧನೆ ಇನ್ನೂ ತನ್ನಿಂದ ಸಾಧ್ಯವಾಗಿಲ್ಲವೆಂಬ ಕೊರಗು ಇದೆ. ‘ಜೋಡು ಹೆಂಡಿರು’ ಎಂದರೆ ಅನ್ಯಥಾಜ್ಞಾನ (ಭಗವದ್ ಸ್ವರೂಪವನ್ನು ಅರಿಯಲು ಬೇಕಾದ ಜ್ಞಾನದ ಕಡೆ ಮನಸ್ಸನ್ನು ಹರಿಸದೆ, ಬರೀ ಪ್ರಾಪಂಚಿಕ ಜ್ಞಾನ ಸಂಪಾದನೆಗಾಗಿ ಹಪಹಪಿಸುವುದು) ಮತ್ತು ಭಗವಂತನ ಬಗೆಗಿನ ಮರೆವು, ವಿಸ್ಮೃತಿ. ನಮ್ಮ ಜೀವನದಲ್ಲಿ ಈ ಅನವಶ್ಯಕವಾದ ಜ್ಞಾನ ಮತ್ತು ಅವಶ್ಯಕ ವಿಷಯಗಳ ಬಗ್ಗೆ ಮರೆವು ಹೇರಳವಾಗಿ, ಈ ನೆನಪು-ಮರೆವುಗಳ ವಿಷ ಚಕ್ರದಲ್ಲಿ ಸುತ್ತುತ್ತಿರುತ್ತೇವೆ. ಈ ಮೂಲಕ ಭಗವಂತನಿಂದ ದೂರವಾಗುತ್ತಿರುವ ಅರಿವೂ ಇಲ್ಲದೆ, ಅನ್ಯಥಾಜ್ಞಾನ ವಿಸ್ಮೃತಿಗಳೆಂಬ ಹೆಂಡಿರೊಂದಿಗೆ ನಮ್ಮ ಸಂಸಾರ ನಡೆಯುತ್ತಿರುತ್ತದೆ. ಯಾವಾಗ ನಾವು ಇಟ್ಟಿರುವ ತಪ್ಪು ಹೆಜ್ಜೆಯ ಅರಿವಾಗುತ್ತದೋ ಆಗ ಬಹಳವಾಗಿ ಪರಿತಪಿಸುತ್ತೇವೆ. ಕ್ಲೇಶಪಡುತ್ತೇವೆ. ಆಗ ಇವೆರಡರ ಬಗೆಗಿನ ಭ್ರಮೆ ಅಳಿದು, ಸತ್ಯದ ಸಾಕ್ಷತ್ಕಾರವಾಗುವುದೇ ಜೋಡುಹೆಂಡಿರಂಜಿ ಓಡಿ ಹೋಗುವುದು. ಅಲ್ಲಿಗೆ ಅದುವರೆಗೂ ಇದ್ದ ಈ ಸಂಸಾರವೇ ಶಾಶ್ವತವೆಂಬ ಭ್ರಮೆ ಹರಿದು ಹೋಗುವುದೇ ‘ಗೋಡೆಬಿದ್ದು ಹೋಗುವ’ ಪ್ರತಿಮೆ. ನಂತರದ ಸತ್ಯದರ್ಶನವೇ ‘ಬಯಲಾಗುವುದು’. ಒಳಗಿನ ಬಯಲು ಅನಂತವಾದ ಹೊರಗಿನ ಬಯಲನ್ನು(ಜೀವನು ದೇವನನ್ನು ಸೇರುವ), ಆಲಯವು ಬಯಲಾಗಿ ಬಿಡುವ ಪಾರಮಾರ್ಥಿಕ ಜ್ಞಾನ.
ಹೀಗೆ ಅಪರೋಕ್ಷಜ್ಞಾನಿಗಳಾದ ಈ ಮಹಾನ್ ದಾಸರುಗಳ ಮುಂಡಿಗೆಗಳು ಮೊಗೆದಷ್ಟೂ ಅಧ್ಯಾತ್ಮದ ಸಿಹಿನೀರನ್ನುಕ್ಕಿಸುವ ಪರಮಾತ್ಮನ ಜ್ಞಾನದ ಅಕ್ಷಯ ಚಿಲುಮೆ.