ಶ್ರೀಯುತ ತುಪಾಕಿ ವೆಂಕಟರಮಣಾಚಾರ್ಯ ಅವರ ರಚನೆ
ಎಂತಾದರು ಮಾಳ್ಪುದು ಏಕಾದಶಿ
ಇಂಥಾ ವ್ರತವದಾವುದು
ಕಂತುಜನಕ ಲಕ್ಷ್ಮೀಕಾಂತನೊಲಿದು ನಿರ್ಮ-
ಲಾಂತಃಕರಣದಿ ನಲಿವ ಮಹಾಂತ ಪದವನೀಪ
ಪ.
ಕೋಟಿ ಕೋಟಿ ಜನ್ಮದ ಪಾತಕಗಳ
ಕೋಟಲೆ ಬಿಡಿಸುವುದು
ಆಟ ಪಾಟಗಳಿಂದಲಾದರು ನಿದ್ರೆಯ
ದಾಟಲು ದುರಿತ ಮಹಾಟವಿ ದಹಿಸುವ
1
ಹತ್ತೊಂದು ಕರಣದಿಂದ ಘಳಿಸಿದ ನಿ-
ವತ್ರ್ಯ ಪಾತಕಗಳಿಂದ
ನಿತ್ಯ ನರಕದೊಳಗೊತ್ತೆಗೊಳಿಪರ ಮೇ-
ಲೆತ್ತಿ ರಕ್ಷಿಪ ಪರಮೋತ್ತಮ ವ್ರತವನ್ನು
2
ವರುಷದೊಳೊಂದಾದರು ಮಾಡಲು ಸರ್ವ
ಪುರುಷಾರ್ಥಗಳೀವುದು
ಸರಸಿಜನಾಭ ಶ್ರೀವೆಂಕಟಾಚಲಪತಿ
ಕರುಣಾಸ್ಪದವಾದ ಹರಿದಿನ ವ್ರತವನ್ನು
3
***